Advertisement

ಎತ್ತಿನಹೊಳೆ, ಎಚ್‌ಎನ್‌ ವ್ಯಾಲಿ ಪರಾಮರ್ಶೆಗೆ ಜಂಟಿ ಸಭೆ

07:28 AM Jun 05, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ರೂಪಿಸಿರುವ ಎತ್ತಿನಹೊಳೆ ಹಾಗೂ ಕೆಸಿ ವ್ಯಾಲಿ ಮತ್ತು ಎಚ್‌ಎನ್‌ ವ್ಯಾಲಿ ನೀರಾವರಿ ಯೋಜನೆಗಳ ಪರಾಮರ್ಶೆಗೆ ಶೀಘ್ರದಲ್ಲಿಯೆ ಅವಳಿ ಜಿಲ್ಲೆಗಳ ಸಂಸದರು, ಶಾಸಕರ ಹಾಗು ವಿಧಾನ ಪರಿಷತ್ತು ಸದಸ್ಯರ ಜಂಟಿ ಸಭೆಯನ್ನು ಕರೆದು ಚರ್ಚಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕುಡಿವ ನೀರಿನ ಬಗ್ಗೆ ಹಮ್ಮಿಕೊಂಡಿದ್ದ ಟಾಸ್ಕ್ಪೋರ್ಸ್‌ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎಚ್‌ಎನ್‌ ವ್ಯಾಲಿ ಯೋಜನೆ ಜುಲೈ ಅಥವಾ ಆಗಸ್ಟ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು.

ಕೆರೆಗಳಲ್ಲಿ ಹೂಳು ತೆಗೆಸಿ: ಕೋಲಾರ ಜಿಲ್ಲೆಗೆ ಈಗಾಗಲೇ ಕೆಸಿ ವ್ಯಾಲಿ ಯೋಜನೆ ಪೂರ್ಣಗೊಂಡು ಕೆರೆಗಳಿಗೆ ನೀರು ಹರಿಯುತ್ತಿದೆ. ಆದರೆ ಜಿಲ್ಲೆಗೆ 883 ಕೋಟಿ ರೂ., ವೆಚ್ಚದಲ್ಲಿ ಕೈಗೊಂಡಿರುವ ಹೆಬ್ಟಾಳ ನಾಗವಾರ ತ್ಯಾಜ್ಯ ನೀರಾವರಿ ಯೋಜನೆ ಕೂಡ ಬರಪೀಡಿತ ಜಿಲ್ಲೆಗೆ ವರದಾನವಾಗಲಿದ್ದು, ಯೋಜನೆಯಡಿ ಒಟ್ಟು 44 ಕೆರೆಗಳನ್ನು ಜಿಲ್ಲಾದ್ಯಂತ ಅಭಿವೃದ್ಧಿಪಡಿಸಲಾಗುತ್ತಿದೆಯೆಂದರು.

ಎತ್ತಿನಹೊಳೆ ಯೋಜನೆ ಹಾಗೂ ಹೆಬ್ಟಾಳ ನಾಗವಾರ ಹಾಗೂ ಕೆಸಿ ವ್ಯಾಲಿ ಯೋಜನೆಯ ವ್ಯಾಪ್ತಿಗೆ ಬರುವ ಕೆರೆಗಳನ್ನು ಕೂಡಲೇ ಹೂಳು ತೆಗೆದು ಕೆರೆಗಳಲ್ಲಿ ಬೀಡು ಬಿಟ್ಟಿರುವ ಜಾಲಿ ಮರ ಸೇರಿದಂತೆ ಇತರೆ ಅನವಶ್ಯಕವಾದ ಮರಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು. ಜಿಲ್ಲೆಯ ಕೆರೆಗಳು ಪುನಶ್ಚೇತನಗೊಂಡರೆ ಮಾತ್ರ ಈ ಮೂರು ಯೋಜನೆಗಳಲ್ಲಿ ಜಿಲ್ಲೆಗೆ ಬರುವ ನೀರು ಸಂಗ್ರಹಿಸಲು ಸಾಧ್ಯ.

ಅಲ್ಲದೇ ಹೆಬ್ಟಾಳ ನಾಗವಾರ ತ್ಯಾಜ್ಯ ನೀರಾವರಿ ಯೋಜನೆಯಡಿ ಜಿಲ್ಲೆಯ ಬಾಗೇಪಲ್ಲಿ ತಾಲೂಕನ್ನು ಕೈ ಬಿಡಲಾಗಿದ್ದು, ಅದೇ ರೀತಿ ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಚಿಂತಾಮಣಿ ತಾಲೂಕನ್ನು ಕೈ ಬಿಡಲಾಗಿದೆ. ಆದ್ದರಿಂದ ಮತ್ತೂಮ್ಮೆ ಎರಡು ಜಿಲ್ಲೆಗಳ ಸಂಸದರು, ಶಾಸಕರ ಸಭೆ ಕರೆದು ಈ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಬೇಕಿದ್ದು, ಈ ನಿಟ್ಟಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸಂಸದರ, ಶಾಸಕರ ಜಂಟಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

Advertisement

ಕೇಂದ್ರದಿಂದ 1,200 ಕೋಟಿ ಬಿಡುಗಡೆ: ಬೆಳೆ ಪರಿಹಾರ ಕುರಿತು ಮಾತನಾಡಿದ ಸಚಿವ ಶಿವಶಂಕರರೆಡ್ಡಿ, ಈಗಾಗಲೇ ಕೇಂದ್ರ ಸರ್ಕಾರ ಬೆಳೆ ನಷ್ಠ ಪರಿಹಾರಕ್ಕೆ 1200 ಕೋಟಿ ಬಿಡುಗಡೆ ಮಾಡಿದೆ. ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರದ ಹಣವನ್ನು ಜಮೆ ಮಾಡುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಇಡೀ ರಾಜ್ಯದಲ್ಲೇ 9 ಲಕ್ಷ ರೈತರಿಗೆ ಪರಿಹಾರ ನೀಡುವಂತ ಕೆಲಸ ಆಗಿದೆ.

ಅಲ್ಲದೇ ನಮ್ಮ ಜಿಲ್ಲೆಯಲ್ಲಿ 520 ಹೆಕೇrರ್‌ ಪ್ರದೇಶದಲ್ಲಿ ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆ ಹಾನಿ ಉಂಟಾಗಿರುವ ಬಗ್ಗೆ ವರದಿ ಸಲ್ಲಿಕೆಯಾಗಿದ್ದು, ಈ ಕುರಿತು ಸರ್ಕಾರದಲ್ಲಿ ಚರ್ಚೆ ನಡೆಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 51,685 ರೈತರಿಗೆ ಒಟ್ಟು 2155.96 ಲಕ್ಷಗಳನ್ನು ನೇರವಾಗಿ ರೈತರ ಖಾತೆಗೆ ಬೆಳೆ ನಷ್ಠ ಪರಿಹಾರವನ್ನು ಜಮೇ ಮಾಡಲಾಗಿದೆ ಎಂದರು.

ಎತ್ತಿನಹೊಳೆಗೆ ಚಿಂತಾಮಣಿ ಕೈ ಬಿಟ್ಟಿದ್ದಕ್ಕೆ ಕೃಷ್ಣಾರೆಡ್ಡಿ ಗರಂ: ಎತ್ತಿನಹೊಳೆ ಕುರಿತು ಚರ್ಚೆ ನಡೆಸುವ ವೇಳೆ ಯಾವ ಉದ್ದೇಶಕ್ಕಾಗಿ ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಚಿಂತಾಮಣಿ ಸೇರಿಲ್ಲ ಎಂದು ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ತೀವ್ರ ಗರಂ ಆದರು. ಕೆಸಿ ವ್ಯಾಲಿ ಯೋಜನೆಗೆ ಚಿಂತಾಮಣಿ ಸೇರಿಸಲಾಗಿದ್ದರೂ ನೀರು ಹರಿದಿಲ್ಲ. ಆದೇ ರೀತಿ ಹೆಬ್ಟಾಳ ನಾಗವಾರ ನೀರಾವರಿ ಯೋಜನೆಗೂ ಕೂಡ ಚಿಂತಾಮಣಿಯನ್ನು ಸೇರಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಇದು ಯಾವ ನ್ಯಾಯ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಂತಾಮಣಿ ತಾಲೂಕು ಇಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಗ ಸಚಿವ ಶಿವಶಂಕರರೆಡ್ಡಿ ಈ ಬಗ್ಗೆ ಶಾಸಕರನ್ನು ಸಮಾಧಾನಪಡಿಸಿ ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲೂಕುಗಳನ್ನು ಎರಡು ಯೋಜನೆಗಳ ವ್ಯಾಪ್ತಿಗೆ ತರುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ರೈತ ಮಿತ್ರ ಯೂಟೂಬ್‌ ಚಾನಲ್‌ ಲೋಕಾರ್ಪಣೆ: ರಾಜ್ಯಕ್ಕೆ ಮಾದರಿಯಾಗಿ ಪ್ರಗತಿ ಪರ ರೈತರನ್ನು ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕೃಷಿ ಇಲಾಖೆ ರೂಪಿಸಿರುವ ರೈತ ಮಿತ್ರ ಯೂಟೂಬ್‌ ಚಾನಲ್‌ನ್ನು ಜಿಪಂ ಸಭಾಂಗಣದಲ್ಲಿ ರಾಜ್ಯದ ಕೃಷಿ ಸಚಿವರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಜಿಲ್ಲೆಯ ಹತ್ತಾರು ಪ್ರಗತಿಪರ ರೈತರನ್ನು ಹಾಗೂ ಮಾದರಿ ರೈತರ ಯಶೊಗಾಧೆಯನ್ನು ಕೃಷಿ ಇಲಾಖೆ ರೈತ ಮಿತ್ರ ಯೂಟೂಬ್‌ನಲ್ಲಿ ಆಪ್‌ಲೋಡ್‌ ಮಾಡಿ ರೈತರ ಗಮನ ಸೆಳೆಯುತ್ತಿದೆ.

ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, ಸರ್ಕಾರ ಸಮಾರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಂಡಿದೆ. ವಿಶೇಷವಾಗಿ ಕುಡಿಯುವ ನೀರಿಗೆ ಹೆಚ್ಚಿನ ಒತ್ತು ಕೊಡುತ್ತಿದೆ. ಬರಗಾಲದಿಂದ ಪಾರಾಗಲು ಸರ್ಕಾರ ಮುಜುರಾಯಿ ದೇವಾಲಯಗಳಲ್ಲಿ ಪರ್ಜನ್ಯ ಹೋಮ ನಡೆಸುವುದು ಸಂಪ್ರದಾಯವೇ ಹೊರತು, ಮೂಡ ನಂಬಿಕೆ ಇಲ್ಲ. ಈಗಾಗಲೇ ಸರ್ಕಾರ ಮಳೆ ಕೊರತೆ ಇರುವ ಕಡೆ ಮೋಡ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
-ಎನ್‌.ಎಚ್‌.ಶಿವಶಂಕರರೆಡ್ಡಿ, ಕೃಷಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next