ಚಿಕ್ಕಮಗಳೂರು : ರಾಜ್ಯದ ಎತ್ತರದ ಶಿಖರ ಮುಳ್ಳಯ್ಯನಗಿರಿ ಸೌಂದರ್ಯವನ್ನು ನಾಚಿಸುವಂತಹ ಸೌಂದರ್ಯ ಅದು. ಇಲ್ಲಿದೆ ನಿನಗಿಂತ ನಾ ಮೇಲೆನ್ನೋ ಒಂದಕ್ಕೊಂದು ಅಂಟಿಕೊಂಡಿರೋ ಒಂಬತ್ತು ಗುಡ್ಡಗಳು. ರಾಜ್ಯದಲ್ಲೇ ಮೋಸ್ಟ್ ಅಡ್ವೇಂಚರ್ ಎಂಬ ಖ್ಯಾತಿಗೆ ಪಾತ್ರವಾಗೋದ್ರ ಜೊತೆ ಏಷ್ಯಾ ಖಂಡದಲ್ಲೇ ರೋಮಾಂಚನಕಾರಿ ಟ್ರಕ್ಕಿಂಗ್ ಸ್ಪಾಟ್ ಎಂಬ ಹೆಗ್ಗಳಿಕೆ ಈ ಗುಡ್ಡಕ್ಕಿದೆ. ಕಾಫಿನಾಡಿನ ಎಲೆಮರೆ ಕಾಯಿಯಾಗಿರೋ ಅಲ್ಲಿನ ಸೌಂದರ್ಯ ಸವಿಯೋಕೆ ಪ್ರವಾಸಿಗರಿಲ್ಲದ ದಿನವಿಲ್ಲ. ಅಂತಹ ಅಪರೂಪದ ಸೌಂದರ್ಯವನ್ನ ಬಣ್ಣಿಸೋಕೆ ಪದಪುಂಜ ಸಾಲದು… ಅಷ್ಟಕ್ಕೂ ಆ ಗಿರಿಶಿಖರ ಯಾವುದು ಅಂತೀರಾ..? ಇಲ್ಲಿದೆ ನೋಡಿ ಸೊಬಗಿನ ಗುಡ್ಡದ ಸುಂದರ ನೋಟ
ಕಾಫಿನಾಡು ಚಿಕ್ಕಮಗಳೂರು, ಪ್ರವಾಸಿಗರ ಪಾಲಿನ ಅಕ್ಷಯಪಾತ್ರೆ. ನೋಡುಗರು-ಕೇಳುಗರ ಭಾವನೆಗಳಿಗೆಲ್ಲಾ ಜೀವ ತುಂಬೋ ಜೀವ ವೈವಿಧ್ಯಮಯ ತಾಣ. ಭೂಲೋಕದ ಸ್ವರ್ಗವೆನ್ನಿಸಿರೋ ಈ ನೆಲದಲ್ಲಿ ಬೆಳಕಿಗೆ ಬಾರದ ಅದೆಷ್ಟೋ ಸುಮಧುರ ತಾಣಗಳಲ್ಲಿ ಮೂಡಿಗೆರೆ ತಾಲೂಕಿನ ಬೈರಾಪುರ ಬಳಿ ಇರೋ ಶಿಶಿಲ ಗುಡ್ಡ ಕೂಡ ಒಂದು. ಇದನ್ನ ಎತ್ತಿನ ಭುಜ ಅಂತಲೂ ಕರೀತಾರೆ. ಕಾರಣ, ದೂರದಿಂದ ನೋಡಿದರೆ ಈ ರಮಣೀಯ ತಾಣ ಎತ್ತಿನ ಭುಜದ ರೀತಿ ಕಾಣಿಸೋದು. ಇಲ್ಲಿನ ಮನಮೋಹಕ ಗುಡ್ಡಗಳು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಅಷ್ಟೆ ಅಲ್ಲದೆ, ಈ ಬೆಟ್ಟ ಏರೋ ಸವಾಲ್ ಇದೆಯಲ ಅದು ನಿಜಕ್ಕೂ ರೋಮಾಂಚನ. ಬೈರಾಪುರ ಗ್ರಾಮದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರೋ ಈ ಬೆಟ್ಟವನ್ನು ನಡೆದುಕೊಂಡೇ ಹತ್ತಬೇಕು. ಅದು ಕೂಡ ಕಡಿದಾದ ರಸ್ತೆಯಲ್ಲಿ ಕಲ್ಲು ಮಣ್ಣು ಎನ್ನದೇ ಗುಡ್ಡವನ್ನು ಹತ್ತುತ್ತ ಸಾಗಬೇಕು.. ಹೀಗೆ ಬೆಟ್ಟ ಹತ್ತುವ ಸಾಹಸಕ್ಕೆ ಬಿದ್ದಾಗ ಸಾಕು, ಸಾಕು ಏನ್ನೋ ಸೋಲು ನಮ್ಮನ್ನ ಮುಂದೆ ಗುಡ್ಡವನ್ನು ಏರದಂತೆ ತಡೆಯುತ್ತೆ. ಆದ್ರೆ ಮುಂದೆ ನಡೆಯದಂತೆ ತಡೆಯೋ ಸುಸ್ತು, ಸೋಲನ್ನು ಹಿಮ್ಮೆಟ್ಟಿಸಿ ಹೆಜ್ಜೆ ಹಾಕಿ, ಬೆಟ್ಟ ಏರಿದ್ರೆ ಸಿಗೋದು ನಿಜಕ್ಕೂ ಸ್ವರ್ಗ..
ಇದನ್ನೂ ಓದಿ : ಸಿದ್ದರಾಮಯ್ಯನವರಿಗೆ ಜೆಡಿಎಸ್ ಮನೆಯೊಳಗೆ ಇಣುಕಿ ನೋಡುವ ಚಾಳಿ ಯಾಕೆ: ಸಿ.ಟಿ.ರವಿ
ಇಲ್ಲಿನ ಒಂಬತ್ತು ಗುಡ್ಡಗಳ ಕಾಣೋ ಎತ್ತಿನ ಭುಜದ ಬೆಟ್ಟದ ಮಧ್ಯೆ ನಿಂತ್ರೆ ಯಾವುದೋ ದ್ವೀಪದಲ್ಲಿ ನಿಂತ ಅನುಭವವಾಗತ್ತೆ. ಈ ಗುಡ್ಡವನ್ನ ಹತ್ತಿ ಇಳಿಯುವುದೇ ಖುಷಿ, ಸುಸ್ತಿನ ನಡುವೆಯೂ ಬೆಟ್ಟ ಹತ್ತುವಾಗ ಬೀಸೋ ತಣ್ಣನೆಯ ಗಾಳಿ ಎಂತಹಾ ಆಯಾಸವನ್ನು ಮಾಯವಾಗಿಸುತ್ತೆ.ಅದ್ರಲ್ಲೂ ಚಿಕ್ಕ ಚಿಕ್ಕ ಮಕ್ಕಳನ್ನ ಕರೆದುಕೊಂಡು ಎತ್ತಿನ ಭುಜ ಬೆಟ್ಟವನ್ನ ಏರೋ ಸಾಹಸ ನಿಜಕ್ಕೂ ಸವಾಲೇ. ಈ ಮಧ್ಯೆಯೂ ಎಲ್ಲಾ ಅಡೆತಡೆಗಳನ್ನ ಭೇದಿಸಿ ಬೆಟ್ಟದ ಮೇಲೆ ನಿಂತಾಗ ಸಿಗೋ ಖುಷಿ ಅಷ್ಟಿಷ್ಟಲ್ಲ. ಆಕಾಶಕ್ಕೆ ಮೂರೇ ಗೇಣು ಅನ್ನೋ ಮಾತು ಈ ಬೆಟ್ಟದ ಮೇಲೆ ನಿಂತೊರ್ಗೇ ಅನುಭವವಾಗದೇ ಇರದು. ಅಷ್ಟು ಸುಂದರ ಮನಮೋಹಕ, ರಮಣೀಯ ತಾಣ ಈ ಎತ್ತಿನ ಭುಜ.
ಬೆವರು ಸುರಿಸಿ ಎತ್ತಿನ ಭುಜದ ಮೇಲೆ ಸವಾರಿ ಮಾಡೋ ಟ್ರೆಕ್ಕಿಂಗ್ ಪ್ರಿಯರು ಪೋಟೋ ಕ್ಲಿಕ್ಕಿಸಿ ಕೊಂಡು, ಸೆಲ್ಫಿ ತೆಗೆದುಕೊಂಡು ಈ ಸುಂದರ ನೆನಪನ್ನ ಹಸಿರಾಗಿಸಿಕೊಳ್ತಾರೆ. ಇನ್ನೂ ಈ ಬೆಟ್ಟವನ್ನು ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲ ಮಾರ್ಗದಿಂದಲೂ ಏರಬಹುದು. ಆದ್ರೆ ಅದು ಹೆಚ್ಚು ದೂರವಾಗೋದ್ರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭೈರಾಪುರಕ್ಕೆ ಹೋಗಿ ಬೆಟ್ಟ ಏರೋದೇ ಸುಲಭ ಹಾಗೇ ಹತ್ತಿರ ಕೂಡ. ಟ್ರೆಕ್ಕಿಂಗ್ ಪ್ರಿಯರಿಗಂತೂ ಈ ನಯನಮನೋಹರ ತಾಣ ನಿಜಕ್ಕೂ ಹೇಳಿಮಾಡಿಸಿದ ತಾಣ. ಬಿಸಿಲು ಇದ್ದಾಗ ಎತ್ತಿನ ಭುಜದ ವಿಹಂಗಮ ನೋಟವಂತೂ ಕಣ್ಣಿಗೆ ಹಬ್ಬ, ಆಗ ದಶದಿಕ್ಕುಗಳು ಗೋಚರವಾಗುತ್ತದೆ. ಎತ್ತಿನ ಭುಜದ ಮೇಲೆ ಆಗಾಗ ಮಂಜು ಆವರಿಸುತ್ತಲ್ಲೇ ಇರುತ್ತೆ. ಆ ವೇಳೆ ಮಂಜಿನಲ್ಲಿ ಪ್ರವಾಸಿಗರು ಆಕಾಶದಲ್ಲೇ ತೇಲಿದ ಅನುಭವ ಪಡೆಯುತ್ತಾರೆ. ಒಟ್ನಲ್ಲಿ ಕಾಫಿನಾಡಿನ ಶೋಲೆ ಅರಣ್ಯದಲ್ಲಿ ಆಕಾಶಕ್ಕೆ ಚಾಚಿಕೊಂಡಿರುವ ಈ ಎತ್ತಿನ ಭುಜ, ಟ್ರೆಕ್ಕಿಂಗ್ ಪ್ರಿಯರ ಫೇವರಿಟ್, ಅಡ್ವೆಂಚರಸ್ ಪ್ಲೇಸ್ ಅನ್ನೋದ್ರಲ್ಲಿ ಎರಡು ಮಾತಿಲ್ಲ..
– ಸಂತೋಷ್ ಮೂಡಿಗೆರೆ