ಬಾಳೆಹೊನ್ನೂರು: ಕಳೆದ 6 ವರ್ಷಗಳಿಂದ ಇಟ್ಟಿಗೆ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರೂ ಸಹ ಬಿ.ಕಣಬೂರು ಗ್ರಾಪಂ ಹಾಗೂ ಜಿಪಂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮೀನಮೇಷ ಮಾಡುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಕಳೆದ 6 ವರ್ಷಗಳ ಹಿಂದೆ ನಾಗರಿಕ ವೇದಿಕೆಯ ಸಂಚಾಲಕ ಹಾಗೂ ಕೃಷಿಕ ಹಿರಿಯಣ್ಣನವರು ಗ್ರಾಮ ಸಭೆಯಲ್ಲಿ ಚೆಕ್‌ಡ್ಯಾಂ ಬಗ್ಗೆ ಪ್ರಸ್ತಾಪಿಸಿ ಚೆಕ್‌ಡ್ಯಾಂ ಮಾಡಿಕೊಡುವಂತೆ ಮನವಿ ಮಾಡಿದ್ದರು. ಅವರ ಮನವಿಯಂತೆ ಚೆಕ್ ಡ್ಯಾಂ ನಿರ್ಮಿಸಿಕೊಡುವುದಾಗಿ ಹೇಳಿ 6 ವರ್ಷ ಕಳೆದರೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಮಗಾರಿ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ 8 ತಿಂಗಳ ಹಿಂದೆ ಪಿಡಿಒ ಹಾಗೂ ಪಂಚಾಯತ್ ರಾಜ್ ಇಂಜಿನಿಯರ್ ಅವರು ಸ್ಥಳ ಪರಿಶೀಲಿಸಿದ್ದರೂ ಸಹ ಚೆಕ್‌ಡ್ಯಾಂಗೆ ಅನುಮತಿ ದೊರೆತಿಲ್ಲ.
ಕಳೆದ ತಿಂಗಳು ನಡೆದ ಗ್ರಾಮ ಸಭೆಯಲ್ಲಿ ಹಿರಿಯಣ್ಣ ಪ್ರಸ್ತಾಪಿಸಿ, ಗ್ರಾಮ ಸಭೆಯಲ್ಲಿ ನಡೆದ ತೀರ್ಮಾನಗಳು ಅನುಷ್ಠಾನಗೊಳ್ಳದಿರುವ ಹಿನ್ನೆಲೆಯಲ್ಲಿ ಗ್ರಾಮ ಸಭೆ ಏಕೆ ನಡೆಸುತ್ತಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ತಕ್ಷಣವೇ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಈ ಬಾರಿ ಚೆಕ್‌ಡ್ಯಾಂ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಇದೀಗ ಕೃಷಿ ಚಟುವಟಿಕೆ ಪ್ರಾರಂಭವಾಗಿದ್ದು, ನೀರಿಗಾಗಿ ರೈತರು ಪರದಾಡುತ್ತಿದ್ದಾರೆ. ತಾತ್ಕಾಲಿಕ ಒಡ್ಡು ನಿರ್ಮಿಸಿ ನೀರನ್ನು ಕಾಲುವೆ ಮೂಲಕ ಹರಿಸುತ್ತಿದ್ದಾರೆ. ಈ ಮಧ್ಯೆ ಈ ಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಹಳ್ಳ ದಂಡೆಯನ್ನು ಕೆಡವಿ ಫಿಲ್ಟರ್ ಮರಳು ಸಂಗ್ರಹಿಸುತ್ತಿದ್ದಾರೆ. ತಾತ್ಕಾಲಿಕ ಒಡ್ಡಿನಲ್ಲಿ ಸಂಗ್ರಹವಾದ ಮರಳನ್ನು ರಾತ್ರಿಯ ವೇಳೆ ಒಡ್ಡನ್ನು ಕಿತ್ತು ಹಾಕಿ ಮರಳು ತೆಗೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ತಿಳಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ.
ಕೃಷಿಯಿಂದ ದೂರ ಸರಿಯುತ್ತಿರುವ ಈ ದಿನಗಳಲ್ಲಿ ಅಧಿಕಾರಿಗಳು ಅಂದಾಜು ಪಟ್ಟಿ ಮಂಜೂರಾತಿ ನೀಡದಿರುವುದು ಎಷ್ಟು ಸಮಂಜಸವೆಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಈ ಭಾಗದ ಗ್ರಾಪಂ ಸದಸ್ಯರು ತಾಪಂ ಉಪಾಧ್ಯಕ್ಷರಿಗೂ ತಿಳಿಸಿದ್ದು, ಚೆಕ್‌ಡ್ಯಾಂ ನಿರ್ಮಾಣವಾಗುತ್ತದೆಯೇ ಎಂದು ಕಾಯ್ದು ನೋಡಬೇಕಾಗಿದೆ.
ಕಳೆದ ಬಾರಿಯ ಭಾರೀ ಮಳೆಯಿಂದಾಗಿ ಇಟ್ಟಿಗೆ ಹಳ್ಳದಿಂದ ಕಾಲುವೆ ಮೂಲಕ ನೀರು ಸರಬರಾಜಾಗುತ್ತಿದ್ದು, ಈ ಕಾಲುವೆ ಮಳೆಯಿಂದ ಕುಸಿದು ಹೋಗಿದೆ. ಕಳೆದ ಬಾರಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರ್‌ಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದರೂ ಇದುವರೆಗೂ ಚರಂಡಿ ದುರಸ್ತಿ ಆಗಿಲ್ಲ.
•
ನೊಂದ ರೈತರು.