Advertisement

ಲಂಡನ್‌ನಿಂದ ಬಂತು ಬಸವೇಶ್ವರರ ಪುತ್ಥಳಿ

06:00 AM Nov 22, 2018 | |

ಶಿವಮೊಗ್ಗ: ವಿದೇಶದಿಂದ ಬಂದ ವಿಶ್ವಗುರು ಬಸವಣ್ಣನವರ ಪುತ್ಥಳಿಯೊಂದು ಮಲೆನಾಡಿನ ಶಿವಮೊಗ್ಗದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಲಂಡನ್‌ನ ಥೇಮ್ಸ್‌ ನದಿ ದಂಡೆ ಮೇಲೆ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪನೆಯಿಂದ ಹೊಸ ಇತಿಹಾಸ ಸೃಷ್ಟಿಯಾಗಿತ್ತು. ಈಗ ಇದೇ ಮಾದರಿಯ ಮೂರ್ತಿ ಲಂಡನ್‌ನಿಂದ ಶಿವಮೊಗ್ಗಕ್ಕೆ ಬಂದು ಇಲ್ಲಿ ಪ್ರತಿಷ್ಠಾಪನೆಯಾಗಲಿದೆ.

Advertisement

ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಹಾಗೂ ಮೂರ್ತಿಯನ್ನು ಭಾರತದಿಂದ ಬೇರೆ ದೇಶಗಳಿಗೆ ಕೊಂಡೊಯ್ಯುವುದು ಸಹಜ. ಆದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಲಂಡನ್‌ನಿಂದ ಬಸವೇಶ್ವರರ ಮೂರ್ತಿ ಭಾರತಕ್ಕೆ ಅದರಲ್ಲೂ, ಕರ್ನಾಟಕದ ಶಿವಮೊಗ್ಗಕ್ಕೆ ಬರುತ್ತಿರುವುದು ಸಂತಸದೊಂದಿಗೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಲಂಡನ್‌ನಲ್ಲಿ ಕಾರ್ಪೋರೇಟರ್‌ ಆಗಿದ್ದ ಭಾರತ ಮೂಲದ ಡಾ| ನೀರಜ್‌ ಪಾಟೀಲ್‌ ಅವರು ಅಲ್ಲಿನ ಸರಕಾರಕ್ಕೆ ಬಸವಣ್ಣನವರ ಚಿಂತನೆಗಳ ಬಗ್ಗೆ ತಿಳಿವಳಿಕೆ ಮೂಡಿಸಿ, ಪ್ರತಿಮೆ ಪ್ರತಿಷ್ಠಾಪಿಸಿ, ಹೊಸ ಇತಿಹಾಸ ಬರೆದಿದ್ದರು. ಈಗ ಅವರೇ ತಮ್ಮಲ್ಲಿದ್ದ ಮತ್ತೂಂದು ಬಸವೇಶ್ವರ ಪುತ್ಥಳಿಯನ್ನು ಶಿವಮೊಗ್ಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ.

ಕೊಟ್ಟಿದ್ದು ಯಾಕೆ?: ಡಾ| ನೀರಜ್‌ ಪಾಟೀಲ್‌ ಅವರು ಒಮ್ಮೆ ಶಿವಮೊಗ್ಗಕ್ಕೆ ಬಂದಾಗ ಇಲ್ಲಿನ ಗಾಂ ಧಿ ಪಾರ್ಕ್‌ ಬಳಿ ಇರುವ ಬಸವೇಶ್ವರ ಸರ್ಕಲ್‌ ಮೂಲಕ ಹಾದು ಹೋಗುವಾಗ ಪುತ್ಥಳಿ ಇಲ್ಲದ್ದನ್ನು ಗಮನಿಸಿದ್ದರು. ಆಗಲೇ ಇಲ್ಲಿ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಿದ್ದರು. ಹೀಗಾಗಿ ತಮ್ಮ ಬಳಿ ಇದ್ದ ಲಂಡನ್‌ನಲ್ಲಿ ಪ್ರತಿಷ್ಠಾಪಿಸಲಾದ ಮಾದರಿಯ ಪುತ್ಥಳಿಯನ್ನು ಈಗ ಹಸ್ತಾಂತರ ಮಾಡಿದ್ದಾರೆ.

ನೂರಾರು ತೊಡಕು: 2017, ಅಕ್ಟೋಬರ್‌ 8ರಂದು ಪ್ರತಿಮೆ ಹಸ್ತಾಂತರವಾದರೂ ಭಾರತಕ್ಕೆ ಬರಲು ನೂರಾರು ಕಾನೂನು ತೊಡಕುಗಳು ಎದುರಾಗಿವೆ. ಮೊದಲಿಗೆ 1.25 ಲಕ್ಷ ರೂ. ಶಿಪ್ಪಿಂಗ್‌ ಚಾರ್ಜ್‌ ಯಾರು ಕೊಡಬೇಕೆಂಬ ಪ್ರಶ್ನೆ ಮೂಡಿತ್ತು. ಅಂದಿನ ಪಾಲಿಕೆ ಆಯುಕ್ತರು ಈ ಬಗ್ಗೆ ಕಾಳಜಿ ತೋರಿಸಿರಲಿಲ್ಲ. ಇದರಿಂದ ಧೃತಿಗೆಡದ ಪಾಲಿಕೆ ಸದಸ್ಯ ಯೋಗೀಶ್‌ ಅವರು ತಾವೇ ತಮ್ಮ ಸ್ವಂತ ಹಣದಲ್ಲಿ 1.25 ಲಕ್ಷ ರೂ.ಪಾವತಿಸಿ ಶಿಪ್ಪಿಂಗ್‌ಗೆ ಚಾಲನೆ ನೀಡಿದರು. ಅಷ್ಟೆ ಅಲ್ಲದೆ, ಖುದ್ದು ಮಾಜಿ ಮೇಯರ್‌ ಏಳುಮಲೈ ಅವರ ಜತೆ ಲಂಡನ್‌ಗೆ ತೆರಳಿ ಪ್ರತಿಮೆ ತರುವ ಕೆಲಸಕ್ಕೆ ಚಾಲನೆ ನೀಡಿದರು.

Advertisement

ಯಾವುದೇ ದೇಶದಿಂದ ಪ್ರತಿಮೆ ಹಾಗೂ ವಿಗ್ರಹಗಳನ್ನು ತರುವುದು ಸುಲಭದ ಮಾತಲ್ಲ. ಈ ಸಮಸ್ಯೆಯನ್ನು ಡಾ| ನೀರಜ್‌ ಪಾಟೀಲ್‌ ಅವರು ಬಗೆಹರಿಸಿ ಹಡಗಿನ ಮೂಲಕ ರವಾನೆ ಮಾಡಿದ್ದರು. ಇದರಿಂದ ಆಗಸ್ಟ್‌ನಲ್ಲಿ ಮೂರ್ತಿ ಚೆನ್ನೈ ಬಂದರಿಗೆ ಬಂದು ತಲುಪಿತು. ಅಲ್ಲಿಂದ ಬೆಂಗಳೂರು ಮೂಲಕ ಶಿವಮೊಗ್ಗಕ್ಕೆ ಬರುತ್ತಿದೆ.

ಮಾರ್ಚ್‌ನಿಂದ ಅಕ್ಟೋಬರ್‌ವರೆಗೆ ರಾಜ್ಯದಲ್ಲಿ ಒಂದಿಲ್ಲೊಂದು ಚುನಾವಣೆಗಳು ಎದುರಾಗಿದ್ದರಿಂದ ಪುತ್ಥಳಿ ಸ್ವಾಗತಕ್ಕೆ ತೊಡಕಾಗಿತ್ತು. ಈಗ ಮೂರ್ತಿ ಸ್ವಾಗತಕ್ಕೆ ಮುಹೂರ್ತ ನಿಗದಿಯಾಗಿದ್ದು ಗುರುವಾರ ಶಿವಮೊಗ್ಗದಲ್ಲಿ ಅದ್ಧೂರಿ ಸ್ವಾಗತ ಸಮಾರಂಭ ನಡೆಯಲಿದೆ.

ಗುರುವಾರ ಪುತ್ಥಳಿ ಆಗಮಿಸುತ್ತಿದ್ದರೂ ಅದನ್ನು ಎಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂಬ ವಿಷಯ ಬಗೆಹರಿದಿಲ್ಲ. ಬಸವೇಶ್ವರ ಸರ್ಕಲ್‌ನ ಗಾಂ ಧಿ ಪಾರ್ಕ್‌ ಗೇಟ್‌ ಬಳಿ ಪ್ರತಿಷ್ಠಾಪನೆ ಮಾಡಲು ಈಗಾಗಲೇ ಚಿಂತಿಸಲಾಗಿದೆ. ಇದಕ್ಕೆ ಬೇಕಾದ, ಪಿಡಬ್ಲೂÂಡಿ, ಪೊಲೀಸ್‌ ಇಲಾಖೆ ಹಾಗೂ ಪಾಲಿಕೆಯಿಂದ ಅನುಮತಿ ಪಡೆಯಲಾಗಿದೆ. ಹೈವೇ ಪ್ರಾ ಧಿಕಾರದ ಸಮ್ಮತಿಯೂ ಸಿಕ್ಕಿದೆ. ಕೆಲವರು ತುಂಗಾ ನದಿ ಬಳಿ ಪ್ರತಿಷ್ಠಾಪನೆಗೆ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಮುಂದಿನ ಬಸವೇಶ್ವರ ಜಯಂತಿ ಒಳಗೆ ಪ್ರತಿಷ್ಠಾಪನೆ ಆಗುವುದು ನಿಶ್ಚಿತವಾಗಿದೆ.

ಪುತ್ಥಳಿ ಇಲ್ಲೇ ಮಾಡಿಸಬಹುದಿತ್ತು ಎಂದು ಹಲವರು ಹೇಳುತ್ತಾರೆ. ಆದರೆ ಡಾ| ನೀರಜ್‌ ಪಾಟೀಲ್‌ ಅವರು 30 ಲಕ್ಷ ರೂ.ಮೌಲ್ಯದ ವಿಗ್ರಹವನ್ನು ಉಚಿತವಾಗಿ ಕೊಟ್ಟಿದ್ದಾರೆ. ಶಿಪ್ಪಿಂಗ್‌ಗೆ ಬೇಕಾದ ಹಣ ಭರಿಸಲು ಸಾಕಷ್ಟು ತೊಡಕುಗಳಿದ್ದರಿಂದ ನಾನೇ ಸ್ವಂತ ಖರ್ಚಿನಲ್ಲಿ ತರುವ ವ್ಯವಸ್ಥೆ ಮಾಡಿದ್ದೇನೆ.
– ಎಚ್‌.ಸಿ. ಯೋಗೇಶ್‌, ಕಾರ್ಪೋರೇಟರ್‌

– ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next