Advertisement

ರೈತರ ನೆರವಿಗಾಗಿ 11 ಶೀಥಲೀಕರಣ ಘಟಕ ಆರಂಭ

04:17 PM May 16, 2022 | Team Udayavani |

ತರೀಕೆರೆ: ಯಾವುದೇ ರೀತಿಯ ಹವಾಮಾನ ವೈಫಲ್ಯ ಇಲ್ಲದಿದ್ದಾಗ ರೈತ ಉತ್ತಮ ಬೆಳೆ ಬೆಳೆಯುತ್ತಾನೆ. ಬೆಳೆ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಇರುವುದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ಮನಗಂಡು ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಗೆ ಮಾರಾಟ ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 11 ಶೀಥಲೀಕರಣ ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ಶೀಥಲೀಕರಣ ಘಟಕದಲ್ಲಿ 2500 ಮೆಟ್ರಿಕ್‌ ಟನ್‌ ಸಾರ್ಮಥ್ಯ ಆಹಾರ ಪದಾರ್ಥವನ್ನು ಸಂಗ್ರಹಿಸಬಹುದಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

Advertisement

ಲಿಂಗಹದಳ್ಳಿ ಬೀಜೋತ್ಪಾದನಾ ಕೇಂದ್ರದಲ್ಲಿ 9.5 ಕೋಟಿ ವೆಚ್ಚದ ಶೀಥಲೀಕರಣ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ರೈತರ ಜಮೀನಿನಲ್ಲಿ ಮಣ್ಣು ಸವಕಳಿಗೆ ಕಾರಣವಾಗುತ್ತದೆ. 1 ಇಂಚು ಮಣ್ಣು ಬೆಳೆಯಬೇಕಾದಲ್ಲಿ 600 ವರ್ಷ ಬೇಕು. ಫಲವತ್ತಾದ ಮಣ್ಣು ಸಂರಕ್ಷಣೆ ಮಾಡುವುದು ಮುಖ್ಯ ಹಾಗೂ ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ಭೂಮಿಗೆ ಇಂಗಿಸಲು, ಒಡ್ಡು, ಚೆಕ್‌ ಡ್ಯಾಮ್‌ ನಿರ್ಮಾಣ ಮಾಡುವುದಕ್ಕೆ ಅಜ್ಜಂಪುರ ತಾಲೂಕಿನ ಜಲಾನಯನ ಪ್ರದೇಶದಲ್ಲಿ 9.5 ಕೋಟಿ ರೂ. ವೆಚ್ಚದಲ್ಲಿ ಕೆಲಸ ನಿರ್ವಹಿಸಲಾಗುವುದು ಎಂದರು.

ದೇಶದ ಆಗರ್ಭ ಶ್ರೀಮಂತರಿಗೆ ಅನ್ನ ಕೊಡುವ ಶಕ್ತಿ ಇಲ್ಲ. ಅಂಬಾನಿ, ಅದಾನಿ, ಟಾಟಾ ಇಂತಹ ಶ್ರೀಮಂತರು ಅನ್ನವನ್ನು ಬೆಳೆಯುತ್ತಿಲ್ಲ. ಅನ್ನ ಕೊಡುವ ಶಕ್ತಿ ಇರುವುದು ರೈತನಿಗೆ ಮಾತ್ರ. ಅಂತಹ ರೈತರಿಗೆ ನಮನ ಸಲ್ಲಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ರೈತ ಇದ್ದರೆ ಮಾತ್ರ ಜಗತ್ತು ಉಳಿಯಲು ಸಾಧ್ಯ. ಈ ಕಾರಣದಿಂದ ರಸಗೊಬ್ಬರಕ್ಕೆ ಸಹಾಯಧನ, ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಹಣದ ನೆರವು, ರೈತರ ಮಕ್ಕಳಿಗೆ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಶೇ. 50 ರಿಸರ್ವೇಶನ್‌, ರೈತ ವಿದ್ಯಾನಿಧಿ ಯೋಜನೆ ಪ್ರಾರಂಭಿಸಲಾಗಿದೆ ಎಂದರು.

ರಾಜ್ಯದಲ್ಲಿ 69 ಲಕ್ಷಕ್ಕೂ ಹೆಚ್ಚು ರೈತರಿಗೆ ನೆರವಾಗಬೇಕು ಎನ್ನುವ ಕಾರಣಕ್ಕೆ ಡೀಸೆಲ್‌ ಸಹಾಯಧನ ನೀಡಲಾಗುತ್ತಿದೆ. ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲು ಸಾಧ್ಯವಾಗಲಿಲ್ಲ. ಪ್ರತಿ 20 ಲೀಟರ್‌ ಡೀಸೆಲ್‌ ಸಹಾಯಧನ ನೀಡುವುದು ನಮ್ಮ ಗುರಿಯಾಗಿತ್ತು. ಪ್ರಸ್ತುತ ಸಾಲಿನಲ್ಲಿ ಡೀಸೆಲ್‌ಗೆ 25 ರೂ.ನಂತೆ ಎಕರೆಗೆ 1250 ರೂ. ಸಹಾಯಧನ ನೀಡಲಾಗುತ್ತದೆ ಎಂದರು.

Advertisement

ಶಾಸಕ ಡಿ.ಎಸ್. ಸುರೇಶ್‌ ಮಾತನಾಡಿ, ಬಹು ದಿನದ ಬೇಡಿಕೆಯಾಗಿದ್ದ ಶೀಥಲೀಕರಣ ಘಟಕಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ರೈತರು ಈ ಹಿಂದೆ ಬೇರೆ ತಾಲೂಕುಗಳಲ್ಲಿ ತಮ್ಮ ಬೆಳೆಯನ್ನು ದಾಸ್ತಾನು ಮಾಡಿದ್ದರು. ರೈತರ ಸಂಕಷ್ಟ ಅರಿತು ಶೀಥಲೀಕರಣ ಘಟಕವನ್ನು ಸರಕಾರ ನೀಡಿದೆ. ಲಿಂಗದಹಳ್ಳಿ ಹೋಬಳಿ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಇರಲಿಲ್ಲ. 2008ರಲ್ಲಿ ತರೀಕೆರೆ ಕ್ಷೇತ್ರದ ವ್ಯಾಪ್ತಿಗೆ ಬಂದಿತು. ಆಗ ಆಡಳಿತ ನಡೆಸಿದ ಜನಪ್ರತಿನಿಧಿಗಳು ಜನರ ಮೂಗಿಗೆ ತುಪ್ಪ ಹಚ್ಚಿದ್ದರು. ಮಂಕುಬೂದಿ ಎರಚಿ ಮತ ಪಡೆಯುತ್ತಿದ್ದರೇ ಹೊರತು ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ, ಆಗಿನ ಹೋಬಳಿಗೂ ಈಗಿನ ಹೋಬಳಿಯನ್ನು ನೋಡಿದಾಗ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.

ಮಲೆನಾಡಿನ ಹೆಬ್ಟಾಗಿಲು ಎಂದು ಕರೆಸಿಕೊಂಡಿದ್ದ ಲಿಂಗದಹಳ್ಳಿ ಹಲವಾರು ಬಾರಿ ಬರಗಾಲಕ್ಕೆ ತುತ್ತಾಗುತ್ತಿತ್ತು. ಇದನ್ನು ಮನಗಂಡು ಭದ್ರಾ ಉಪ ಕಣಿವೆ ಯೋಜನೆಯಲ್ಲಿ ಹೋಬಳಿಯ 27 ಕೆರೆಗಳಿಗೆ ಭದ್ರಾ ನದಿಯ ನೀರನ್ನು ಹರಿಸಲಾಗುತ್ತದೆ. ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಹಿಂದಿನ ಶಾಸಕರು ಹೆಬ್ಬೆ ಜಲಪಾತದಿಂದ ನೀರನ್ನು ನೀಡುತ್ತೇವೆ ಎಂದು ಹೇಳಿದರೇ ಹೊರತು ಕಾರ್ಯಗತ ಮಾಡಲಿಲ್ಲ. ಆದರೆ ನಮ್ಮ ಸರಕಾರ ನೀರನ್ನು ತುಂಬಿಸುವ ಕೆಲಸ ಮಾಡುತ್ತಿದೆ ಎಂದರು.

ಬಾವಿಕೆರೆಯಲ್ಲಿರುವ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಕೃಷಿ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷೆ ನಾಗರತ್ನ ಭದ್ರಚಾರ್‌, ಉಪಾದ್ಯಕ್ಷೆ ರೇಖಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್‌, ಇಒ ಗೀತಾ ಶಂಕರ್‌, ಕೃಷಿಕ ಸಮಾಜದ ಅಧ್ಯಕ್ಷ ಚಂದ್ರಮೌಳಿ, ಉಪನಿರ್ದೇಶಕ ಲೋಕೇಶ್‌, ಸಹಾಯಕ ನಿರ್ದೇಶಕ ಎಸ್‌.ಟಿ. ರಮೇಶ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next