ಬೆಂಗಳೂರು: ಹೂಡಿಕೆದಾರರ ನಿರೀಕ್ಷೆಯಂತೆ ರಾಜ್ಯದಲ್ಲಿ “ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್’ ಕೇಂದ್ರ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹೂಡಿಕೆದಾರರು ಬಯಸುವ ಪೂರಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ಪಂದಿಸುವ ಭರವಸೆ ಮೂಡಿಸಿದ್ದಾರೆ.
ಸ್ವಿಡ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (ಡಬ್ಲೂಇಎಫ್) 50ನೇ ವಾರ್ಷಿಕ ಸಭೆ ಹಿನ್ನೆಲೆಯಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹೂಡಿಕೆದಾರರ ಮನವಿಗೆ ಸ್ಪಂದಿಸಿದರು.
ಇದಕ್ಕೂ ಮೊದಲು ಡಬ್ಲೂಇಎಫ್ ವೇದಿಕೆಯ ವ್ಯವಸ್ಥಾಪಕ ನಿರ್ದೇಶಕ ಮೊರಾಟ್ ಸೋನ್ಮೆಜ್, ವ್ಯಾಪಾರ ವ್ಯವಹಾರದಲ್ಲಿ ನೈತಿಕತೆ ಕಡಿಮೆಯಾಗುತ್ತಿರುವ ಬಗ್ಗೆ ಹೂಡಿಕೆದಾರರು ಆತಂಕದಲ್ಲಿದ್ದಾರೆ. ಹಾಗಾಗಿ ಸರ್ಕಾರಗಳು “ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್’ ಕೇಂದ್ರ ಪ್ರಾರಂಭಿಸುವ ಅಗತ್ಯವಿದೆ. ಕೃತಕ ಬುದ್ದಿಮತ್ತೆಯ (ಆರ್ಟಿಫಿಶಿಯೆಲ್ ಇಂಟೆಲಿಜೆನ್ಸ್) ದುರುಪಯೋಗ ತಡೆಯಲೂ ಈ ಕೇಂದ್ರ ಸಹಕಾರಿಯಾಗಲಿದೆ. ಕರ್ನಾಟಕವು ಹೆಚ್ಚು ಹೂಡಿಕೆ ನಿರೀಕ್ಷಿಸುವುದಾದರೆ ಈ ಕೇಂದ್ರವನ್ನು ಕೂಡಲೇ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, “ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್’ ಕೇಂದ್ರ ಸ್ಥಾಪಿಸಲಾಗುವುದು. ಮಾತ್ರವಲ್ಲದೆ, ಹೂಡಿಕೆದಾರರು ಯಾವುದೇ ರೀತಿಯ ತೊಂದರೆ ಇಲ್ಲದೆ ಸುಲಭವಾಗಿ ವ್ಯಾಪಾರ- ವಹಿವಾಟು ನಡೆಸಲು ಅನುಕೂಲವಾಗುವಂತ ಎಲ್ಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಅಭಿವೃದ್ಧಿ ಕಾರ್ಯಸೂಚಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ಕರ್ನಾಟಕ ಸರ್ಕಾರ ಉತ್ಸುಕವಾಗಿದೆ. ಅದಕ್ಕೆ ಪೂರಕವಾಗಿ ಜಾಗತಿಕ ಮಟ್ಟದಲ್ಲಿ ಕರ್ನಾಟಕ ಮುಂಚೂಣಿಗೆ ಬರಲು ನೆರವಾಗುವ ಅಧ್ಯಯನಗಳನ್ನೂ ಕೈಗೊಳ್ಳಲು ಆಸಕ್ತವಾಗಿದೆ ಎಂದು ಹೇಳಿದರು.
ಸುಸ್ಥಿರ ಕೈಗಾರಿಕೆಗಳನ್ನು ರೂಪಿಸುವ ಮೂಲಕ ಕರ್ನಾಟಕವು ವಿಶ್ವ ಆರ್ಥಿಕ ವೇದಿಕೆ 2020ರ ಗುರಿ ಸಾಧನೆಗೆ ಸಕ್ರಿಯವಾಗಿ ಶ್ರಮಿಸಲಿದೆ. ದೇಶದ ಪ್ರಮುಖ ಕೈಗಾರಿಕಾ ರಾಜ್ಯವಾಗಿ ಹೊರಹೊಮ್ಮವ ಮೂಲಕ ಜಾಗತಿಕ ಮಟ್ಟದಲ್ಲಿಯೂ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಐಟಿಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಭಾರತ ಮತ್ತು ಏಷ್ಯಾ ಅಜೆಂಡಾದ ಪ್ರಾದೇಶಿಕ ಮುಖ್ಯಸ್ಥ ವಿರಾಜ್ ಮೆಹ್ತಾ ಉಪಸ್ಥಿತರಿದ್ದರು.