ಕಾರವಾರ: ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ಹಾಗೂ ತಾಲೂಕಿಗೆ ಒಂದರಂತೆ ಸುಸಜ್ಜಿತ ಆಂಬ್ಯುಲೆನ್ಸ್ ಸೌಲಭ್ಯ ಒಗಿಸುವಂತೆ ಯುವಕರ ತಂಡವೊಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಗೆ ಮನವಿ ಸಲ್ಲಿಸಿತು.
ಜಿಲ್ಲೆಯಲ್ಲಿ ಎಲ್ಲೂ ಸುಸಜ್ಜಿತ ಆಸ್ಪತ್ರೆ ಇಲ್ಲ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರ ನೀಡಬೇಕಿದೆ. ಅಪಘಾತಗಳು ಸಂಭವಿಸಿದಾಗ ಅಥವಾ ತುರ್ತು ಸಂದರ್ಭದಲ್ಲಿ ಜಿಲ್ಲೆಯ ಜನರು ನೂರಾರು ಕಿ.ಮೀ. ದೂರದ ಬಾಂಬೋಲಿಮ್, ಮಂಗಳೂರು, ಹುಬ್ಬಳ್ಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಆಸ್ಪತ್ರೆ ತಲುಪುವುದರೊಳಗೆ ಅದೆಷ್ಟೋ ಮಂದಿ ಸಾವನ್ನಪ್ಪಿರುವ ಉದಾಹರಣೆ ಇದೆ. ಈ ಸಮಸ್ಯೆ ನಿವಾರಿಸಲು ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಳಂಬವಾಗುವುದರಿಂದ, ಅದಕ್ಕೂ ಮುನ್ನ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಅನುಕೂಲ ಆಗುವಂತೆ ತುರ್ತಾಗಿ ಎರಡು ಟ್ರಾಮಾ ಸೆಂಟರ್‌ಗಳನ್ನು ಸ್ಥಾಪಿಸಲೇಬೇಕು. ಇದರೊಂದಿಗೆ, ಪ್ರತಿ ತಾಲೂಕಿಗೆ ತಲಾ ಒಂದರಂತೆ ಸುಸಜ್ಜಿತ ವೆಂಟಿಲೇಟರ್ ಹೊಂದಿರುವ ಆಂಬ್ಯುಲೆನ್ಸ್ ಒದಗಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಸಚಿವರು, ಯುವಕರ ಟ್ವಿಟರ್ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರು ಅಭಿವೃದ್ಧಿ ಪರವಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದ ಅವರು, ಆಸ್ಪತ್ರೆ ಸ್ಥಾಪನೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಶಾಂತ್ ಕರ್ಕಿ, ಮಂಜು ದೀವಗಿ, ಗಜೇಂದ್ರ ಪಟಗಾರ, ಸಿದ್ದಾರ್ಥ ನಾಯಕ, ಶಿವಾನಂದ ಪಟಗಾರ, ಪ್ರೇಮ ಭಂಡಾರಿ, ವಿಶ್ವನಾಥ ಹೊದ್ಕೆ, ಗಜೇಂದ್ರ ಬಿಣಗೇಕರ್, ಅಭಿಷೇಕ ಕಳಸ, ರಾಹುಲ್ ಶೆಟ್ಟಿ ಇದ್ದರು.