ಬೆಂಗಳೂರು: ಸ್ಟಾರ್ಟ್‌ಅಪ್‌ಗ್ಳಿಗೆ ಉತ್ತೇಜನ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯದ ಐದು ಕಡೆ ಕರ್ನಾಟಕ ಟೆಕ್ ಇನ್ನೋವೇಷನ್ ಹಬ್ (ಕೆ-ಟೆಕ್) ಸ್ಥಾಪಿಸುವುದಾಗಿ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ಜಾಲಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಕೆ-ಟೆಕ್ ಹಬ್‌ಗ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಉತ್ಪನ್ನ ಸ್ಟಾರ್ಟ್‌ಅಪ್ ಇನ್‌ಕ್ಯುಬೇಟರ್ ಹಾಗೂ ಸಾಮಾನ್ಯ ಸಾಧನ ಸೌಲಭ್ಯಯುಳ್ಳ ಕೆ-ಟೆಕ್ ಹಬ್ ಸ್ಥಾಪಿಸಲಾಗುತ್ತಿದೆ.
ಅದರಂತೆ ಮಂಗಳೂರು, ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ಸದ್ಯದಲ್ಲೇ ಕೆ-ಟೆಕ್ ಹಬ್ ಸ್ಥಾಪಿಸಲಾಗುವುದು. ಸ್ಥಳೀಯ ಶೈಕ್ಷಣಿಕ ಸಂಸ್ಥೆ ಹಾಗೂ ಕೈಗಾರಿಕೆಗಳಿಂದ ಲಭ್ಯವಿರುವ ಮಾನವ ಸಂಪನ್ಮೂಲ, ಉತ್ಪಾದನಾ ಸೌಲಭ್ಯ ಬಳಸಿಕೊಳ್ಳಲು ಎರಡನೇ ಹಂತದ ನಗರಗಳಲ್ಲೂ ಈ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಐದು ಕೆ-ಟೆಕ್ ಹಬ್‌ಗಳ ಸ್ಥಾಪನೆ ಮೂಲಕ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಜತೆಗೆ ಉದ್ಯಮಶೀಲತೆ ವೃದ್ಧಿಸಲು ಪ್ರಯತ್ನಿಸಲಾಗುವುದು. ತಂತ್ರಜ್ಞಾನ ಆಧಾರಿತ ಸ್ಟಾರ್ಟ್‌ಅಪ್‌ಗ್ಳನ್ನು ಸೃಷ್ಟಿಸಿ ಉತ್ತೇಜಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಕರ್ನಾಟಕವನ್ನು ನಾವೀನ್ಯತೆ ಹಾಗೂ ತಂತ್ರಜ್ಞಾನದ ರಾಜಧಾನಿಯಾಗಿ ರೂಪಿಸುವ ಗುರಿ ಇದೆ. ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸುವ ಹೊಸ ತಂತ್ರಜ್ಞಾನಗಳು ಬೆಳವಣಿಗೆಗೆ ನಾಂದಿ ಹಾಡಲಿವೆ. ಸ್ಟಾರ್ಟ್‌ಅಪ್ ನೀತಿ-2025ರಲ್ಲಿ 6000 ಉತ್ಪನ್ನ ಆಧಾರಿತ ಸ್ಟಾರ್ಟ್‌ಅಪ್ ಪ್ರೋತ್ಸಾಹಿಸುವ ಗುರಿ ಹೊಂದಲಾಗಿದ್ದು, ಅದನ್ನು ತಲುಪಲು ಕೆ-ಟಿಐ ಹಬ್ ಸ್ಥಾಪನೆ ಸಹಕಾರಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.