ಬಾದಾಮಿ: ವಿಜಯಪುರದಲ್ಲಿ ಮಹಿಳಾ ವಿವಿ, ಬಾಗಲಕೋಟೆಯಲ್ಲಿ ತೋವಿವಿ ಸ್ಥಾಪನೆಯಾದಂತೆ ಜಗತ್ತಿಗೆ ಲಲಿತ ಕಲೆ ಸಾಕ್ಷೀಕರಿಸುವ ವಿಶ್ವವಿದ್ಯಾಲಯ ಬಾದಾಮಿಯಲ್ಲಿಯೇ ಸ್ಥಾಪಿಸಬೇಕು ಎಂದು ಕಲಾಸಕ್ತರು, ಸಾರ್ವಜನಿಕರ ಆಗ್ರಹವಾಗಿದೆ.
ಚಾಲುಕ್ಯರ ರಾಜಧಾನಿ ಬಾದಾಮಿಗೂ ಲಲಿತ ಕಲೆಗೂ ಎಲ್ಲಿಲ್ಲದ ನಂಟು. ಇಲ್ಲಿನ ಒಂದೊಂದು ಬಂಡೆಗಲ್ಲಿನ ಗುಹಾಂತರ ದೇವಾಲಯದಲ್ಲಿ ಕೆತ್ತನೆ ಮಾಡಿದ ಪ್ರತಿಯೊಂದು ಶಿಲ್ಪಕಲೆಯೂ ಜಗದ್ವಿಖ್ಯಾತಿ. ಇದನ್ನರಿತೇ ಬಿಎಸ್‌ವೈ ನೇತೃತ್ವದ ರಾಜ್ಯ ಸರಕಾರ 2012-13ನೇ ಸಾಲಿನಲ್ಲಿ ತಾಲೂಕಿನ ಖ್ಯಾಡ ವಿವಿ ಸ್ಥಾಪನೆಗೆ ಅಸ್ತು ಎಂದಿತ್ತು. 2009ರಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಕೂಡ ಸರ್ವ ಪ್ರಯತ್ನ ನಡೆಸಿ ವಿವಿ ಸ್ಥಾಪನೆಗೆ ಪೂರಕವಾಗಿ ಬೆಂಗಳೂರಲ್ಲಿ ಕಚೇರಿ ಆರಂಭಿಸಲು ಪ್ರಯತ್ನ ನಡೆಸಿದ್ದರು.
ಕುಶಲಕರ್ಮಿಗಳಿಗೆ ಪ್ರೇರಣೆ: ಬಾದಾಮಿ ತಾಲೂಕು ಖ್ಯಾಡ ಗ್ರಾಮದ 419ಕ್ಕೂ ಅಧಿ ಕ ಎಕರೆ ಗುಡ್ಡಗಾಡು ಪ್ರದೇಶದಲ್ಲಿ ವಿವಿ ಸ್ಥಾಪಿಸುವುದು ಅರ್ಥಪೂರ್ಣ. ಕ್ರಿ.ಶ. 6ರಿಂದ 8ನೇ ಶತಮಾನದ ಅವಧಿಯಲ್ಲಿ ಧರ್ಮ, ಕಲೆ, ಸಂಗೀತ, ನೃತ್ಯ, ಶಿಲ್ಪ, ಚಿತ್ರ, ವರ್ಣಚಿತ್ರ ಮುಂತಾದ ಕುಶಲಕರ್ಮಿಗಳು ಲಲಿತ ಕಲೆಗಳಿಂದ ಪ್ರರೇಪಿತವಾದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಭಾರತದಲ್ಲಿ ವಾಸ್ತು, ಶಿಲ್ಪಕಲೆಯಲ್ಲಿ ಬಾದಾಮಿ ಪರಿಸರದಲ್ಲಿ ನಡೆದ ಪ್ರಯೋಗಗಳು ಯಾವುದೇ ಪ್ರದೇಶದಲ್ಲೂ ನಡೆದಿಲ್ಲ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಕಾರಣ ಶಿಲ್ಪಕಲೆ ವಿಶ್ವ ಬಾದಾಮಿಯಲ್ಲೆ ಲಲಿತ ಕಲಾ ವಿವಿ ಸ್ಥಾಪನೆಯಾಗಲಿ ಎನ್ನುತ್ತಾರೆ ಇತಿಹಾಸ ಸಂಶೋಧಕ ಡಾ.ಶೀಲಾಕಾಂತ ಪತ್ತಾರ.
ಅದ್ಭುತ ಪರಿಸರ; ಕೇಂದ್ರ ಸರಕಾರ ಈಗಾಗಲೇ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಿದ್ದು, ಲಲಿತಕಲಾ ವಿವಿ ಸ್ಥಾಪನೆಯಾದಲ್ಲಿ ಮತ್ತಷ್ಟು ಪೂರಕವಾಗಲಿದೆ. ದೇಶ ವಿದೇಶಿಯರ ಆಗಮನಕ್ಕೆ ರೈಲ್ವೆ ಸೌಕರ್ಯವಿದೆ. ಖ್ಯಾಡ ಗ್ರಾಮ ಮಲಪ್ರಭಾ ನದಿ ದಡದಲ್ಲಿದೆ. ಏಷ್ಯಾ ಖಂಡದಲ್ಲೆ ಅದ್ಭುತ ನೈಸರ್ಗಿಕ ಪರಿಸರದಲ್ಲಿರುವ ವಿವಿ ಎಂಬ ಖ್ಯಾತಿಗೆ ಒಳಪಡಲಿದೆ ಎಂಬುದು ಕಲಾಸಕ್ತರ ಆಶಯ.
ಈ ಹಿಂದೆ 2009ರಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆಗ ಬಾಗಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳರೇ ಆಸಕ್ತಿ ವಹಿಸಿ ಲಲಿತ ಕಲಾ ವಿವಿ ಸ್ಥಾಪನೆಗೆ ಮುತುವರ್ಜಿ ವಹಿಸಿದ್ದರು. ಈಗ ಮತ್ತೆ 10 ವರ್ಷಗಳ ನಂತರ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಸಿಎಂ ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಶಾಸಕ ಸಿದ್ದರಾಮಯ್ಯ ವಿಶೇಷ ಆಸಕ್ತಿ ವಹಿಸಿ ಬರುವ ರಾಜ್ಯ ಬಜೆಟ್‌ನಲ್ಲಿ ಲಲಿತ ಕಲಾ ವಿವಿ ಸ್ಥಾಪನೆ ಅನುದಾನ ಮಂಜೂರಿ ಮಾಡಬೇಕು ಎಂಬುದು ವಾತಾಪಿ ಜನರ ಆಶಯವಾಗಿದೆ.
ಲಲಿತ ಕಲಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕಚೇರಿಗೆ 1 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಹೊಸ ಉಳಿತಾಯ ಖಾತೆ ಆರಂಭಿಸಲಾಗಿದೆ. ಬಜೆಟ್‌ನಲ್ಲಿ ಅನುದಾನ ಸಿಗುವ ನಿರೀಕ್ಷೆ ಇದೆ
.-ಡಾ| ಮಲ್ಲಿಕಾ ಘಂಟಿ, ವಿಶೇಷಾಧಿಕಾರಿ, ಲಲಿತ ಕಲಾ ವಿವಿ ಬೆಂಗಳೂರು.
-ಶಶಿಧರ ವಸ್ತ್ರದ