ರಾಮನಗರ: ಮಾರಾಟ ಮಳಿಗೆಗಳು, ವಿಮಾ ಸೇವೆ ಸೇರಿದಂತೆ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಅನ್ಯಾಯವಾದಲ್ಲಿ ನ್ಯಾಯ ಕಲ್ಪಿಸಲು ಜಿಲ್ಲೆಯ ನಾಗರಿಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯನ್ನು ಸ್ಥಾಪಿಸಲಾಗಿದೆ. ಅನ್ಯಾಯಕ್ಕೆ ಒಳಗಾದ ಗ್ರಾಹಕರು ವೇದಿಕೆಯ ಮೂಲಕ ನ್ಯಾಯ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಸಲಹೆ ನೀಡಿದರು.
ಇಲ್ಲಿನ ನಗರಸಭೆಯ ಆವರಣದಲ್ಲಿರುವ ಪ್ರಶಸ್ತಿ ಭವನದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯನ್ನು ಉದ್ಘಾಟಿಸಿದ ಅವರು ಮಾತನಾಡಿ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹರ ಆಯೋಗ, ಆಹಾರ ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾಡಳಿತ ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯ ಗ್ರಾಹಕರ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಬೆಂಗಳೂರಿಗೆ ಹೋಗಬೇಕಿತ್ತು. ಇದೀಗ ಜಿಲ್ಲಾ ಕೇಂದ್ರದಲ್ಲೇ ವೇದಿಕೆ ಸ್ಥಾಪನೆಯಾಗಿರುವುದರಿಂದ ಗ್ರಾಹಕರು ತಮ್ಮ ನೆಲದಲ್ಲಿಯೇ ನ್ಯಾಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ನ್ಯಾಯಾಲಯದಂತೆ ಕಾರ್ಯನಿರ್ವಹಣೆ: ಅಸಮರ್ಪಕ ಸೇವೆ ಸಲ್ಲಿಸಿದ ಸಂಸ್ಥೆಗಳು, ಕಳಪೆ, ನಕಲಿ ವಸ್ತುಗಳನ್ನು ಮಾರಾಟ ಮಾಡಿದ ಮಳಿಗೆಗಳ ವಿರುದ್ಧ ಗ್ರಾಹಕರು ದೂರು ದಾಖಲಿಸಲು ಗ್ರಾಹಕರ ರಕ್ಷಣಾ ಕಾಯ್ದೆಯನ್ವಯ ಈ ವೇದಿಕೆಯನ್ನು ಸ್ಥಾಪಿಸಲಾಗಿದೆ. ಇತರ ನ್ಯಾಯಾಲಯಗಳಂತೆ ವೇದಿಕೆಯೂ ಕಾರ್ಯನಿರ್ವಹಿಸಲಿದೆ. ದೂರು ಸಲ್ಲಿಸಿದ ಗ್ರಾಹಕರು, ತಾವಾಗಿಯೇ ತಮ್ಮ ವಾದವನ್ನು ಮಂಡಿಸಬಹುದು ಅಥವಾ ವಕೀಲರ ಮೂಲಕ ವಾದ ಮಂಡಿಸಬಹುದು ಎಂದು ವಿವರಿಸಿದರು.
ಗ್ರಾಹಕರಲ್ಲಿ ವೇದಿಕೆಯ ಬಗ್ಗೆ ಅರಿವು ಅಗತ್ಯ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಜೆ.ಉಮಾ ಮಾತನಾಡಿ, 1986ರಲ್ಲಿ ಗ್ರಾಹಕರ ಕಾನೂನು ಜಾರಿಯಾಗಿದೆ. ಆದರು ಬಹುತೇಕ ಸಾರ್ವಜನಿಕರಿಗೆ ಈ ಕಾನೂನು ಬಗ್ಗೆ ಅರಿವಿಲ್ಲ. ಸರಕು ಮಾರಾಟ ಅಥವಾ ಸೇವೆ ಪಡೆದುಕೊಳ್ಳುವ ಸಂಬಂಧ ಅನ್ಯಾಯವಾದಾಗ ಯಾರನ್ನು ಕೇಳ ಬೇಕು ಎಂಬ ಮಾಹಿತಿ ಕೊರತೆ ಇದೆ. ಹೀಗಾಗಿ ಗ್ರಾಹಕರ ವೇದಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ. ಗ್ರಾಹಕರ ದೂರುಗಳ ವಿಲೇವಾರಿ ಶೀಘ್ರವಾಗಿ ಆಗುವಂತೆ ವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯರು ನಿಗಾವಹಿಸುವರು ಎಂಬ ಭರವಸೆ ತಮಗಿದೆ ಎಂದರು.
ನಿವೇಶನ ವ್ಯಾಜ್ಯವೂ ಗ್ರಾಹಕರ ವೇದಿಕೆಯಲ್ಲಿ ಇತ್ಯರ್ಥ ಸಾಧ್ಯ: ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ, ನಿವೇಶನ ಮಾರಾಟ ಸಂಬಂಧ ಅನ್ಯಾಯವಾದಗಲೂ ಗ್ರಾಹಕರ ವೇದಿಕೆಯಲ್ಲಿ ಪರಿಹಾರ ಕಂಡು ಕೊಳ್ಳಬಹುದು. ಜಿಲ್ಲೆಯ ಸಾರ್ವಜನಿಕರು ಈ ವೇದಿಕೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ವಿ.ದೇವರಾಜ್ ಮಾತನಾಡಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಹಕರ ವೇದಿಕೆಯ ಬಗ್ಗೆ ಗ್ರಾಮೀಣ ಭಾಗದಲ್ಲಿ ತಿಳುವಳಿಕೆ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಬಿ.ವೆಂಕಟಪ್ಪ, ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆಡಳಿತಾಧಿಕಾರಿ ಎನ್.ರಾಜು, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ನಗರಸಭೆಯ ಪೌರಾಯುಕ್ತೆ ಬಿ.ಶುಭಾ, ಚನ್ನಪಟ್ಟಣ ವಕೀಲ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮೇಗೌಡ, ಕನಕಪುರ ವಕೀಲ ಸಂಘದ ಅಧ್ಯಕ್ಷ ಗಿರಿಧರ್, ಮಾಗಡಿ ವಕೀಲ ಸಂಘದ ಅಧ್ಯಕ್ಷ ಶ್ರೀನಿವಾಸ್, ತಹಶೀಲ್ದಾರ್ ರಾಜು ಉಪಸ್ಥಿತರಿದ್ದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಎಂ.ಪಿ.ಕೃಷ್ಣಮೂರ್ತಿ ವಂದಿಸಿದರು.