Advertisement

ಎಸ್‌ಟಿಪಿ ನಿರ್ವಹಣೆಗೆ ಸಮಿತಿ ರಚನೆ

11:45 AM Feb 20, 2018 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ಮಿಸಲಾದ ತ್ಯಾಜ್ಯನೀರು ಶುದ್ಧೀಕರಣ ಘಟಕ (ಎಸ್‌ಟಿಪಿ)ಗಳ ಮೇಲೆ ನಿಗಾವಹಿಸಲು ಪಾಲಿಕೆಯ 8 ವಲಯಗಳಲ್ಲಿ ನಿರ್ವಹಣಾ ಸಮಿತಿ ರಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು. 

Advertisement

ನಗರದಲ್ಲಿರುವ ಎಸ್‌ಟಿಪಿಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಪಾಲಿಕೆಯನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮೇಯರ್‌, ಜಲಮಂಡಳಿಯಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಕಡ್ಡಾಯಗೊಳಿಸಲಾಗಿದೆ.

ಆದರೆ, ಅವುಗಳ ಮೇಲೆ ನಿಗಾ ವಹಿಸಿದ ಹಿನ್ನೆಲೆಯಲ್ಲಿ ಅಮಾಯಕರು ಸಾಯುತ್ತಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಪಾಲಿಕೆಯಿಂದಲೇ ಎಂಟು ವಲಯಗಳಲ್ಲಿ ನಿರ್ವಹಣಾ ಸಮಿತಿ ರಚಿಸುವ ಕುರಿತು ಚರ್ಚಿಸಲಾಗುವುದು ಎಂದರು. 

ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ವಿಷಯ ಪ್ರಸ್ತಾಪಿಸಿ, ನಗರದ ಎಇಪಿಎಸ್‌ ಬಡಾವಣೆಯಲ್ಲಿ ಕಳೆದ ವಾರ ಇಬ್ಬರು ಪೌರಕಾರ್ಮಿಕರು ಖಾಸಗಿ ಕಟ್ಟಡದಲ್ಲಿನ ಮ್ಯಾನ್‌ಹೋಲ್‌ ಸ್ವತ್ಛಗೊಳಿಸಲು ಇಳಿದು ಮೃತಪಟ್ಟಿದ್ದು, ಆ ಪ್ರಕರಣದಲ್ಲಿ ಆಯುಕ್ತರ ವಿವರಣೆ ಕೇಳದೆ ಪಾಲಿಕೆಯ ಅಧಿಕಾರಿಗಳನ್ನು ಬಂಧಿಸಿರುವುದು ಅಕ್ಷಮ್ಯ ಅಪರಾಧ. ಹೀಗಾಗಿ ಕೂಡಲೇ ಅಧಿಕಾರಿಗಳ ಬಿಡುಗಡೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಮಾಜಿ ಮೇಯರ್‌ ಮಂಜುನಾಥರೆಡ್ಡಿ ಮಾತನಾಸಿ, ಎಸ್‌ಟಿಪಿಗಳ ಮೇಲೆ ನಿಗಾವಹಿಸಲು ಪಾಲಿಕೆಯಿಂದ ಸಮಿತಿ ರಚಿಸುವುದು ಸರಿಯಲ್ಲ. ಎಸ್‌ಟಿಪಿ ಅಳವಡಿಕೆಗೆ ನಿಯಮ ರೂಪಿಸಿರುವುದು, ಅಪಾರ್ಟ್‌ಮೆಂಟ್‌ಗಳಿಗೆ ಎನ್‌ಒಸಿ ನೀಡುವುದು, ತೆರಿಗೆ ಸಂಗ್ರಹಿಸುವುದು ಜಲಮಂಡಳಿಯ ಕೆಲಸ. ಹೀಗಿರುವಾಗ ಅವುಗಳ ಮೇಲುಸ್ತುವಾರಿ ಪಾಲಿಕೆಗೇಕೆ? ಎಂದು ಪ್ರಶ್ನಿಸಿದರು. 

Advertisement

ಈ ವೇಳೆ ಮೇಯರ್‌, ಸಭೆಯಲ್ಲಿ ಹಾಜರಿದ್ದ ಜಲಮಂಡಳಿಯ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಗಂಗಾಧರ್‌ಗೆ ನಗರದಲ್ಲಿರುವ ಎಸ್‌ಟಿಪಿಗಳ ಮಾಹಿತಿ ನೀಡುವಂತೆ ಕೋರಿದರು. ಆದರೆ, ಅವರು ಮಾಹಿತಿ ನೀಡಿದ ಹಿನ್ನೆಲೆ ತರಾಟೆಗೆ ತೆಗೆದಕೊಂಡು, ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದರು. ಮತ್ತೂಮ್ಮೆ ಚರ್ಚಿಸುವುದಾಗಿ ತಿಳಿಸಿದರು. ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಪ್ರಕರಣಗಳ ಕುರಿತು ಮಾತನಾಡಿ, ಪೌರಕಾರ್ಮಿಕರಿಗೆ ಜಾಗೃತಿ ಅಗತ್ಯವಿದೆ ಎಂದರು.

ಪ್ರತಿಭಟನೆ: ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮೀಪುರದಲ್ಲಿನ 22 ಎಕರೆ ಹಾಗೂ ದಕ್ಷಿಣ ತಾಲೂಕಿನ ಅಗರ ಗ್ರಾಮದ 7.05 ಎಕರೆ ಜಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಿವೇಶನ ಹಂಚಿಕೆ ಮಾಡುವ ವಿಷಯ ಕೈಬಿಡುವಂತೆ ಆಗ್ರಹಿಸಿದ ಬಿಜೆಪಿ ಸದಸ್ಯರು ಪಾಲಿಕೆ ಸಭೆಯಲ್ಲಿ ಗದ್ದಲ ವೆಬ್ಬಿಸಿದರು. 

ಆಡಳಿತ ಪಕ್ಷ ಕಾಂಗ್ರೆಸ್‌ ವಿಷಯವನ್ನು ಸರ್ಕಾರಕ್ಕೆ ಕಳುಹಿಸಲು ಸಭೆಯ ಅನುಮೋದನೆ ಪಡೆಯಲು ಮುಂದಾದಾಗ, ಅದನ್ನು ವಿರೋಧಿಸಿದ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ನಿಲುವಳಿ ಮಂಡಿಸಿ, ಆಶ್ರಯ ಸಮಿತಿ ಅಧ್ಯಕ್ಷರಾದ ಸ್ಥಳೀಯ ಶಾಸಕರ ಗಮಕ್ಕೆ ತರದೆ ಫ‌ಲಾನುಭವಿಗಳ ಪಟ್ಟಿ ಮಾಡಲಾಗಿದೆ. ಹೀಗಾಗಿ ವಿಷಯವನ್ನು ಕೂಡಲೇ ಕೈಡಬೇಕು.

ಇಲ್ಲವೆ, ವಿಷಯದ ಬಗ್ಗೆ ಚರ್ಚೆ ನಡೆಸಿ, ಅನುಮೋದನೆಗೆ ಮತಕ್ಕೆ ಬಿಡಬೇಕು ಎಂದು ಒತ್ತಾಯಿಸಿದರು. 
ಇದರಿಂದ ಕೆಲ ಕಾಲ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವಿನ ಗದ್ದಲಕ್ಕೆ ಕಾರಣವಾಯಿತು. ನಿಲುವಳಿ ಮಂಡಿಸಿದರೂ ಆಡಳಿತ ಪಕ್ಷ ಕಾಂಗ್ರೆಸ್‌ ವಿವಿಧ ವಿಷಯಗಳಿಗೆ ಅನುಮೋದನೆ ಪಡೆದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಶೇಮ್‌…ಶೇಮ್‌… ಎಂದು ಘೋಷಣೆ ಕೂಗಿದರು. 

ಗೂಂಡಾಗಿರಿ ಮಾಡ್ತಿದಿರಾ?: ನಿವೇಶನ ಹಂಚಿಕೆ ವಿಷಯ ಕೈಬಿಡಬೇಕು ಎಂಬ ವಿಷಯ ಕುರಿತು ಮಾತನಾಡಿ ಎಸ್‌.ಆರ್‌.ವಿಶ್ವನಾಥ್‌, ನನ್ನ ಗಮನಕ್ಕೆ ಬರದೆ ಫ‌ಲಾನುಭವಿಗಳನ್ನು ಗುರತಿಸಲಾಗಿದೆ. ಒಂದೊಮ್ಮೆ ಅದೇ ಪಟ್ಟಿಯನ್ನು ಅಂತಿಮಗೊಳಿಸಿದರೆ, ನಿವೇಶನ ಪಡೆಯಲು ಯಾವನು ಬರ್ತಾನೆ ಬರ್ಲಿ…ನೋಡ್ಕೊಳ್ತೀನಿ…ಹೆಜ್ಜೆ ಇಡೋಕೂ ಬಿಡಲ್ಲ ಎಂದು ಬೆದರಿಕೆ ಹಾಕಿದರು. 

ಇದರಿಂದ ಕೋಪಗೊಂಡ ಮಾಜಿ ಆಡಳಿತ ಪಕ್ಷ ನಾಯಕ ಆರ್‌.ಎಸ್‌.ಸತ್ಯನಾರಾಯಣ, ಏನು ಇಲ್ಲಿ ಗೂಂಡಾಗಿರಿ ಮಾಡಲು ಬಂದಿದ್ದೀರಾ? ನಮಗೂ ತೊಡೆತಟ್ಟೋಕೆ ಬರುತ್ತೆ, ಸಭೆಯಲ್ಲಿ ಗೌರವದಿಂದ ನಡೆದುಕೊಳ್ಳಿ ಎಂದು ತಿರುಗೇಟು ನೀಡಿದರು. ಮೇಯರ್‌ ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸಿದರು.

ಆಯುಕ್ತರು ಸರ್ಕಾರ ಕೈಗೊಂಬೆ: ನಿವೇಶನ ಹಂಚಿಕೆ ವಿಚಾರದಲ್ಲಿ ವಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸಲು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮುಂದಾದಾಗ, ಅದಕ್ಕೆ ವಿರೋಧ ವ್ಯಕ್ತಪಡಿಸಿದ ಪದ್ಮನಾಭರೆಡ್ಡಿ, ಆಯುಕ್ತರು ಸರ್ಕಾರದ ಕೈಗೊಂಬೆಯಾಗಿದ್ದಾರೆ. ಹೀಗಾಗಿ ಅವರ ಉತ್ತರ ಬೇಕಾಗಿಲ್ಲ ಎಂದು ಆರೋಪಿಸಿದರು. 

ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ: ಮಹದೇವಪುರ ವಲಯದಲ್ಲಿ ಕಟ್ಟಡ ಕುಸಿತ ಹಾಗೂ ಒಳಚರಂಡಿಗೆ ಇಳಿದು ಉಸಿರುಗಟ್ಟಿ ಪೌರಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಅಧಿಕಾರಿಗಳನ್ನು ಏಕಾಏಕಿ ಬಂಧಿಸಿರುವುದನ್ನು ವಿರೋಧಿಸಿ ಬಿಜೆಪಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಸೋಮವಾರದ ಸಭೆಗೆ ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next