ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಹೊಸ ಕಲಾವಿದರ ತರಬೇತಿ ಸಂಸ್ಥೆ ಆರಂಭಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ.
ಪುನೀತ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಸ್ವಾಗತಾರ್ಹ. ಅದೇ ರೀತಿ ಅವರು ಹೊಸ ಕಲಾವಿದರಿಗಾಗಿ ತರಬೇತಿ ಸಂಸ್ಥೆ ಆರಂಭಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಹಿಂದೆ ಬಂಗಾರಪ್ಪನವರ ಸರ್ಕಾರ ಇದ್ದಾಗ ಕರ್ನಾಟಕದಲ್ಲಿ ಮೊದಲ ಬಾರಿ ಡಾ. ರಾಜಕುಮಾರ್ ಅವರಿಗೆ ಕರ್ನಾಟಕ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ನಾನು ಆಗ ಬಂಗಾರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಆ ಪ್ರಶಸ್ತಿ ಪ್ರಕಟಣೆಯ ಭಾಗವಾಗಿದ್ದೆ.
ಇದನ್ನೂ ಓದಿ:ಜಾಕೀರ್ ಸಂಸ್ಥೆ ಮೇಲಿನ ನಿಷೇಧ ಮತ್ತೆ 5 ವರ್ಷ ವಿಸ್ತರಣೆ
ನಾನು ಆಗಾಗ ಹೇಳುತ್ತಿರುತ್ತೇನೆ. ಹುಟ್ಟು ಆಕಸ್ಮಿಕ, ಸಾವು ಖಚಿತ. ಈ ಹುಟ್ಟು ಸಾವಿನ ನಡುವೆ ಮನುಷ್ಯ ಏನು ಸಾಧನೆ ಮಾಡಿದ ಎಂಬುದು ಮುಖ್ಯವಾಗುತ್ತದೆ. ನಮ್ಮ ಪುನೀತ್ ಅವರು ಆ ಸಾಧನೆಯ ಮೂಲಕ ಈಗ ಮನೆ ಮಾತಾಗಿದ್ದಾರೆ ಎಂದು ಹೇಳಿದರು.