ಬೆಂಗಳೂರು: ಎನ್‌ಡಿಆರ್‌ಎಫ್ ಮಾದರಿಯಲ್ಲೇ ರಾಜ್ಯ ಸರ್ಕಾರದ ವತಿಯಿಂದ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಮುಂದೆ ಪ್ರಕೃತಿ ವಿಕೋಪ ಇಲ್ಲವೇ ಅನಾಹುತಗಳು ಸಂಭವಿಸಿದಾಗ ಎನ್‌ಡಿಆರ್‌ಎಫ್ಗೂ ಮೊದಲೇ ಕಾರ್ಯಾಚರಣೆ, ಪರಿಹಾರ ಕಾರ್ಯ ಕೈಗೊಳ್ಳಲು ಅಗತ್ಯ ವ್ಯವಸ್ಥೆ ರೂಪಿಸಲು ಸರ್ಕಾರ ಮುಂದಾಗಿದೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಸೂಚನೆಯಿದ್ದರೂ ಹಿಂದಿನ ಸರ್ಕಾರ ಗಳು ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ರಚಿಸಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಸಮಿತಿ ರಚಿಸಿ ಸಭೆ ಕೂಡ ನಡೆಸಿದೆ. ಸುಮಾರು 200 ಮಂದಿಯ ತಂಡಕ್ಕೆ ಅಗತ್ಯ ತರಬೇತಿ ಕೊಡಿಸಿ ರಾಜ್ಯದ 4 ಕಡೆ ನಿಯೋಜಿಸಲಾಗುವುದು ಎಂದರು.
ಮುಂದೆ ಎಲ್ಲ ಜಿಲ್ಲೆಗಳಲ್ಲೂ ವಿಪತ್ತು ನಿರ್ವಹಣಾ ಸಮಿತಿ ರಚನೆಗೆ ಆದೇಶ ಹೊರಡಿಸಲಾಗಿದೆ. ಆರೋಗ್ಯ, ಆಹಾರ, ಕೃಷಿ, ಪಶುಪಾಲನಾ ಇಲಾಖೆ ಸೇರಿ 19 ಇಲಾಖೆಗಳ ಸಿಬ್ಬಂದಿ ತಂಡ ರಚಿಸಲಾಗು ವುದು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಪೊಲೀಸ್ ಇಲಾಖೆ ಯಿಂದ ಹೆಚ್ಚು ಮಂದಿ ನಿಯೋಜಿಸಲಾಗು ವುದು. ಕಾರ್ಯಾಚರಣೆ, ಪರಿಹಾರ ಕಾರ್ಯಕ್ಕೆ ಅಗತ್ಯವಾದ ಸಲಕರಣೆಗಳ ಖರೀದಿಗೆ ಕೇಂದ್ರ ಸರ್ಕಾರ ಹಣ ಒದಗಿಸಲಿದೆ ಎಂದು ಹೇಳಿದರು.
ರಾಜ್ಯದ 22 ಜಿಲ್ಲೆಯ 103 ತಾಲೂಕಿನಲ್ಲಿ ನೆರೆ ಕಾಣಿಸಿಕೊಂಡ ಸಂದರ್ಭವನ್ನು ಆಗಷ್ಟೇ ರಚನೆಯಾಗಿದ್ದ ಬಿಜೆಪಿ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಸಮರೋ ಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಈವರೆಗೆ 2948 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪಾರದರ್ಶಕ ವಾಗಿ ಪರಿಹಾರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಎರಡನೇ ಹಂತದ ನೆರೆ ಕಾಣಿಸಿಕೊಂಡ ಸಂದರ್ಭದಲ್ಲಿ ಉಂಟಾದ ನಷ್ಟಕ್ಕೆ ಸಂಬಂಧ ಪಟ್ಟಂತೆ ರಾಜ್ಯ ಸರ್ಕಾರದಿಂದ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗುತ್ತಿದೆ. ಎರಡನೇ ನೆರೆ ಸಂದರ್ಭದ ಸಂತ್ರಸ್ತರಿಗೂ ಮೊದಲ ನೆರೆ ಸಂತ್ರಸ್ತರಿಗೆ ನೀಡಿದ ರೀತಿಯಲ್ಲೇ ಪರಿಹಾರ ವಿತರಿಸಲಾಗುವುದು. ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಮನೆ ಕಳೆದುಕೊಂಡವರಿಗೂ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು. ಅವರು ಸ್ಥಳಾಂತರಗೊಳ್ಳಲು ಬಯಸಿದರೆ ನಿವೇಶನವನ್ನೂ ನೀಡಿ ಮನೆ ನಿರ್ಮಾಣಕ್ಕೆ ನೆರವು ನೀಡಲಾಗುವುದು ಎಂದರು.