ದಾವಣಗೆರೆ: ಪ್ರಕೃತಿ ಕೊಡುಗೆ ಮೇಲೆಯೇ ಮನುಷ್ಯರ ಭವಿಷ್ಯ ನಿಂತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನಿರ್ದೇಶಕ ಜಯಂತ್ ಪೂಜಾರಿ ಹೇಳಿದರು.
ನೂತನವಾಗಿ ಉದ್ಘಾಟನೆಯಾದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದ್ಬವನ ಸೌಧದಲ್ಲಿ ನಡೆದ ಜಿಲ್ಲಾ ಮಟ್ಟದ ಶುದ್ಧಗಂಗಾ ಘಟಕ ಪ್ರೇರಕರ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಮುಖ್ಯವಾಗಿ ಆಹಾರ, ನೀರು ಹಾಗೂ ಗಾಳಿ ಮಹತ್ವವಾದವು. ಪ್ರಕೃತಿ ಮಾತೆ ನಮ್ಮೆಲ್ಲರ ಆಸೆ, ಆಶಯಗಳನ್ನು ಪೂರೈಸುತ್ತಿದ್ದಾಳೆ. ಆದರೆ ಮನುಷ್ಯರು ದುರಾಸೆಯಿಂದ ಪ್ರಕೃತಿಯನ್ನು ವಿನಾಶ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಪ್ರಕೃತಿ ವಿನಾಶದ ಅಂಚಿನಲ್ಲಿರುವುದನ್ನು ಗಂಭೀರವಾಗಿ ಅರ್ಥಮಾಡಿಕೊಂಡು ಪ್ರತಿಯೊಬ್ಬರಿಗೂ ಶುದ್ಧ ನೀರು ಒದಗಿಸುವುದು ನಮ್ಮೇಲ್ಲರ ಹೊಣೆಯಾಗಿದೆ. ಭೂ ಭಾಗದಿಂದ ಬರುವ ನೀರು ಅನೇಕ ರಾಸಾಯನಿಕ ವಸ್ತಗಳಿಂದ ಕೂಡಿರುವುದನ್ನು ಮನಗಂಡು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಡಾ| ವೀರೇಂದ್ರ ಹೆಗ್ಗಡೆಯವರು ಶುದ್ಧ ನೀರಿನ ಘಟಕಗಳ ಮೂಲಕಜನರಿಗೆ ಪರಿಶುದ್ಧವಾದ ನೀರು ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯದ 18 ಜಿಲ್ಲೆಗಳ 55 ತಾಲೂಕುಗಳಲ್ಲಿ 290 ಶುದ್ಧಗಂಗಾ ಘಟಕಗಳನ್ನು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ ಹಾಗೂ ಇತರೆ ಸಂಘ ಸಂಸ್ಥೆಯವರ ಸಹಕಾರದೊಂದಿಗೆ ಸ್ಥಾಪಿಸಲಾಗಿದೆ. ಜನರಿಗೆ ಶುದ್ಧ ನೀರು ಒದಗಿಸುತ್ತಿದ್ದು, ಅಶುದ್ಧ ನೀರಿನ ಸೇವನೆಯಿಂದಬರುವ ಕಾಯಿಲೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ನಮ್ಮ ಸೇವೆ ಸಮಾಜಕ್ಕೆ ಮಾದರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೇಂದ್ರ ಕಚೇರಿಯ ಶುದ್ಧಗಂಗಾ, ಕೆರೆ ಅಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿ, ಶುದ್ಧ ನೀರಿನ ಘಟಕವನ್ನು ಸುಸ್ಥಿರವಾಗಿಟ್ಟುಕೊಂಡು ಜನರಿಗೆ ಸರಿಯಾದ ರೀತಿಯಲ್ಲಿ ಪ್ರೇರಣೆ ನೀಡುವುದರ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿ ಸಹ ಶುದ್ಧ ನೀರು ಕುಡಿಯುವಂತೆ ನೋಡಿಕೊಳ್ಳಬೇಕು. ಘಟಕವಾರು ಪ್ರೇರಕರ ಪ್ರಗತಿ ಪರಿಶೀಲನೆ ನಡೆಸಿ ಹೆಚ್ಚು ಜನರಿಗೆ ಸೇವೆ ಸಲ್ಲಿಸುವಂತೆ ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಪದ್ಮಯ್ಯ, ಎಂಐಎಸ್ ಯೋಜನಾಧಿಕಾರಿ ವಿಜಯೇಂದ್ರ ಶಾನುಭೋಗ, ಕೇಂದ್ರ ಕಚೇರಿ ಆಂತರಿಕ ಲೆಕ್ಕ ಪರಿಶೋಧಕ ನಾರಾಯಣ, ಶುದ್ಧಗಂಗಾ ಘಟಕಗಳ ಪ್ರೇರಕರು ಇದ್ದರು. ಮನು ಸ್ವಾಗತಿಸಿದರು. ಮೇಲ್ವಿಚಾರಕ ಫಕ್ಕೀರಪ್ಪ ಬೆಲ್ಲಾಮುದ್ದಿ ನಿರೂಪಿಸಿದರು. ಅರುಣ ವಂದಿಸಿದರು.