ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು ಹಳ್ಳಿಗಳಿಗೂ ವಿಸ್ತರಿಸಿ ಆ ಮೂಲಕ ಗ್ರಾಮೀಣ ಭಾಗದ ಚುನಾಯಿತ ಪ್ರತಿನಿಧಿಗಳ ಸಂವಹನ ಮತ್ತು ತರಬೇತಿಯ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಿರುವ ಸರ್ಕಾರ, ಅದಕ್ಕಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ “ಉಪಗ್ರಹ ಆಧರಿತ ಸಂವಹನ ಮತ್ತು ತರಬೇತಿ ಕೇಂದ್ರ’ಗಳನ್ನು (ಸ್ಯಾಟ್‌ಕಾಂ) ಸ್ಥಾಪಿಸಲು ನಿರ್ಧರಿಸಿದೆ.
ಗ್ರಾಮ ಪಂಚಾಯಿತಿಗಳ ಸದಸ್ಯರಿಗೆ ಸದ್ಯ ತಾಲೂಕು ಕೇಂದ್ರಗಳಲ್ಲಿರುವ “ಸಾಮರ್ಥಯ ಸೌಧ’ಗಳಲ್ಲಿ ತರಬೇತಿ ಕೊಡಲಾಗುತ್ತಿದೆ. ಆದರೆ, ತಾಲೂಕು ಕೇಂದ್ರಗಳಿಂದ ದೂರ ಇರುವ ಗ್ರಾಮ ಪಂಚಾಯಿತಿ ಸದಸ್ಯರು ಹಲವಾರು ಕಾರಣಗಳಿಂದಾಗಿ ಸೂಕ್ತ ಸಮಯಕ್ಕೆ ತರಬೇತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲೇ ತರಬೇತಿಯ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಿದೆ.
ರಾಜ್ಯದ ಎಲ್ಲ 6,024 ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಸದಸ್ಯರು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಪಂಚಾಯತ್‌ರಾಜ್ ವ್ಯವಸ್ಥೆಯ ನಿಯಮಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡಲು, ಪಂಚಾಯಿತಿಗಳ ಜನಪ್ರತಿನಿಧಿಗಳ ಸಾಮಥ್ಯಾಭಿವೃದ್ಧಿಗೊಳಿಸಲು ಮೈಸೂರಿನಲ್ಲಿರುವ ರಾಜ್ಯ ಸರ್ಕಾರದ ಅಂಗಸಂಸ್ಥೆಯಾಗಿರುವ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ ಮೂಲಕ ಉಪಗ್ರಹ ಆಧಾರಿತ ತರಬೇತಿ ಹಮ್ಮಿಕೊಳ್ಳಲಾಗುತ್ತದೆ. ಸದ್ಯ ಅದು ತಾಲೂಕು ಕೇಂದ್ರಗಳ ಮೂಲಕ ನಡೆಯುತ್ತಿದ್ದು, ಇದೀಗ ಅದನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ.
ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಈ ಉಪಗ್ರಹ ಸ್ವೀಕೃತಿ ಕೇಂದ್ರಗಳನ್ನು (ಸ್ಯಾಟ್‌ಕಾಂ) ಸ್ಥಾಪಿಸಿದರೆ, ಗ್ರಾಮ ಪಂಚಾಯಿತಿ ಸದಸ್ಯರು ತರಬೇತಿಗೆಂದು ಪ್ರತಿ ಬಾರಿ ತಾಲೂಕು ಕೇಂದ್ರಗಳಿಗೆ ಹೋಗುವುದು ತಪ್ಪುತ್ತದೆ. ಕೇವಲ ಕಾನೂನು-ನಿಯಮಗಳು ಹಾಗೂ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ನೀಡುವುದುರ ಜೊತೆಗೆ ಈ ಕೇಂದ್ರಗಳ ಮೂಲಕ ಸಚಿವರು, ಹಿರಿಯ ಅಧಿಕಾರಿಗಳು ಅಗತ್ಯ ಸಂದರ್ಭಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಜೊತೆಗೆ ವಿಡಿಯೋ ಕಾನ್#ರೆನ್ಸಿಂಗ್ ನಡೆಸಬಹುದು. ಇದರಿಂದ ಗ್ರಾಮೀಣ ಭಾಗದ ಜನಪ್ರತಿನಿಧಿಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಪರಿಚಯಿಸಬಹುದು. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸ್ಥಳೀಯ ಸರ್ಕಾರಗಳು ಎಂದು ಹೇಳಲಾಗುವ ಗ್ರಾಮ ಪಂಚಾಯಿತಿಗಳ ಸದಸ್ಯರು ಇನ್ನಷ್ಟು ಜವಾಬ್ದಾರಿ, ಉತ್ಸಾಹದಿಂದ ಸಕ್ರೀಯವಾಗಿ ತಮ್ಮನ್ನು ಆಡಳಿತದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಏಳು ಕೋಟಿ ಹಣ ಬಿಡುಗಡೆ:
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉಪಗ್ರಹ ಸ್ವೀಕೃತಿ ಕೇಂದ್ರ (ಸ್ಯಾಟ್‌ಕಾಂ) ಸ್ಥಾಪಿಸಲು ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯ ನಿರ್ದೇಶಕರು 15.06 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕಾಗಿ ಇಲಾಖೆಯ ಗಣೀಕರಣ ಲೆಕ್ಕ ಶೀರ್ಷಿಕೆಯಡಿ 2018-19ನೇ ಸಾಲಿನಲ್ಲಿ ಒದಗಿಸಿರುವ 21.23 ಕೋಟಿ ರೂ. ಅನುದಾನದಲ್ಲಿ 7 ಕೋಟಿ ರೂ.ಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ಉಪಗ್ರಹ ಸ್ವೀಕೃತಿ ಕೇಂದ್ರಗಳನ್ನು ಸ್ಥಾಪಿಸಲು ಹಂಚಿಕೆ ಮಾಡಲಾಗಿದೆ. ಕೇಂದ್ರ ಸ್ಥಾಪನೆ, ನಿರ್ವಹಣೆ, ತರಬೇತಿಯ ಆಯೋಜನೆ ಎಲ್ಲವೂ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ ಮಾಡಲಿದೆ.
“ಗ್ರಾಮ ಪಂಚಾಯಿತಿ ಹಂತದಲ್ಲಿ ಉಪಗ್ರಹ ಸ್ವೀಕೃತಿ ಕೇಂದ್ರಗಳನ್ನು ಸ್ಥಾಪಿಸಲು ಇಲಾಖೆ ನಿರ್ಧರಿಸಿದ್ದು, ಅದರ ಸಂಪೂರ್ಣ ಜವಾಬ್ದಾರಿಯನ್ನು ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಗೆ ಒಪ್ಪಿಸಿ ಈಗಾಗಲೇ 7 ಕೋಟಿ ರೂ. ಅನುದಾನ ಸಹ ಬಿಡುಗಡೆಗೊಳಿಸಲಾಗಿದೆ’.
– ವಿ. ವೆಂಕಟೇಶ್, ಅಧೀನ ಕಾರ್ಯದರ್ಶಿ (ಜಿ.ಪಂ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ.
– ರಫೀಕ್ ಅಹ್ಮದ್