Advertisement

Menstrual Cycle: ಹೆರಿಗೆಯ ಬಳಿಕ ಮಹಿಳೆಯ ಋತುಚಕ್ರ ಪೂರ್ವಸ್ಥಿತಿ ಸ್ಥಾಪನೆ

10:34 AM Jun 24, 2024 | Team Udayavani |

ಶಿಶುವಿಗೆ ಜನ್ಮ ನೀಡಿದ ಬಳಿಕ ಬಾಣಂತಿತನದ ಅವಧಿಗೆ ಸ್ತ್ರೀಯ ದೇಹವು ಹೊಂದಿಕೊಳ್ಳಬೇಕಾಗಿರುವುದರಿಂದ ಆಕೆಯ ಋತುಚಕ್ರವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗುತ್ತದೆ. ಆದರೆ ಮಹಿಳೆಯ ಋತುಚಕ್ರವು ಗರ್ಭಧಾರಣೆಗೆ ಪೂರ್ವಸ್ಥಿತಿಗೆ ಮರಳಿದೆ ಎಂಬುದನ್ನು ಸೂಚಿಸುವ ಕೆಲವು ಪ್ರಧಾನ ಚಿಹ್ನೆಗಳಿವೆ.

Advertisement

ಒಂದು ಪ್ರಧಾನ ಚಿಹ್ನೆ ಎಂದರೆ ಋತುಚಕ್ರವು ಹಿಂದಿನಂತೆ ನಿಯಮಿತವಾಗಿ ಆಗಲಾರಂಭಿಸುವುದು. ಸಾಮಾನ್ಯವಾಗಿ ಮಹಿಳೆಯ ಋತುಚಕ್ರವು ಹೆರಿಗೆಯ ಬಳಿಕ 6ರಿಂದ 8 ವಾರಗಳಲ್ಲಿ ಪುನರಾರಂಭವಾಗುತ್ತದೆ; ಆದರೆ ಇದು ವ್ಯಕ್ತಿನಿರ್ದಿಷ್ಟ ಅಂಶಗಳಾದ ಎದೆಹಾಲು ಉಣಿಸುವಿಕೆ, ಹಾರ್ಮೋನ್‌ ಬದಲಾವಣೆಗಳು ಮತ್ತು ಒಟ್ಟಾರೆ ದೇಹಾರೋಗ್ಯವನ್ನು ಆಧರಿಸಿ ಮಹಿಳೆಯಿಂದ ಮಹಿಳೆಗೆ ಬದಲಾಗಬಹುದು. ಶಿಶುಜನನವಾದ ಬಳಿಕ ಮಹಿಳೆಯ ದೇಹವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಂತೆ ಋತುಸ್ರಾವಗಳ ನಡುವಣ ಅಂತರವು ಸ್ಥಿರಗೊಳ್ಳಬಹುದು ಹಾಗೂ ಋತುಸ್ರಾವದ ದಿನಗಳು ಮತ್ತು ಸ್ರಾವದ ಪ್ರಮಾಣ ಗರ್ಭ ಧರಿಸುವುದಕ್ಕೆ ಹಿಂದಿನ ದಿನಗಳನ್ನು ಹೋಲಬಹುದು.

ಋತುಚಕ್ರಕ್ಕೆ ಸಂಬಂಧಿಸಿದ ಲಕ್ಷಣಗಳ ನಿರಂತರತೆಯು ಇನ್ನೊಂದು ಚಿಹ್ನೆಯಾಗಿರಬಹುದಾಗಿದೆ. ಹೊಟ್ಟೆನೋವು, ಹೊಟ್ಟೆಯುಬ್ಬರ, ಭಾವನಾತ್ಮಕ ಏರುಪೇರು ಮತ್ತು ಸ್ತನಗಳು ಮೃದುವಾಗುವಂತಹ ಗರ್ಭ ಧರಿಸುವುದಕ್ಕೆ ಮುನ್ನ ಋತುಸ್ರಾವದ ಸಮಯದಲ್ಲಿ ಅನುಭವಕ್ಕೆ ಬರುತ್ತಿದ್ದ ಲಕ್ಷಣಗಳು ಹೆರಿಗೆಯಾದ ಬಳಿಕ ಋತುಚಕ್ರವು ಸಹಜ ಸ್ಥಿತಿಗೆ ಬರುತ್ತಿದ್ದಂತೆ ಪುನರಾರಂಭಗೊಳ್ಳಬಹುದು. ಈ ಪರಿಚಿತ ಲಕ್ಷಣಗಳು ಗರ್ಭ ಧರಿಸುವುದಕ್ಕೆ ಹಿಂದಿನ ಹಾರ್ಮೋನ್‌ ಸಮತೋಲನವು ಮತ್ತೆ ಸ್ಥಾಪನೆಯಾಗಿದೆ ಎಂಬುದರ ಸೂಚಕವಾಗಿವೆ.

ಆದರೆ ಹೆರಿಗೆಯ ಬಳಿಕ ಋತುಚಕ್ರದ ವಿಷಯವಾಗಿ ಯಾವುದೇ ಅಸಹಜತೆಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸಬಾರದು. ಮಹಿಳೆಯಲ್ಲಿ ಸುದೀರ್ಘ‌ ಅವಧಿಗೆ ಭಾರೀ ಋತುಸ್ರಾವ, ಎರಡು ಋತುಚಕ್ರಗಳ ನಡುವೆ ಆಗಾಗ ಸ್ರಾವ ಅಥವಾ ಸಾಮಾನ್ಯಕ್ಕಿಂತ ಕಿರು ಅಥವಾ ದೀರ್ಘ‌ ಅವಧಿಯ ಋತುಸ್ರಾವಗಳು ಉಂಟಾಗುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ಋತುಚಕ್ರಕ್ಕೆ ಸಂಬಂಧಿಸಿದ ಈ ಅಸಹಜತೆಗಳು ಹಾರ್ಮೋನ್‌ ಅಸಮತೋಲನ, ಥೈರಾಯ್ಡ ಕಾಯಿಲೆಗಳು, ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ (ಪಿಸಿಒಎಸ್‌) ಅಥವಾ ಪ್ರಜನನಾತ್ಮಕ ಅಂಗಗಳಲ್ಲಿ ತಲೆದೋರಿರಬಹುದಾದ ತೊಂದರೆಗಳ ಸಂಕೇತಗಳಾಗಿರಬಹುದಾಗಿದ್ದು, ಇವುಗಳು ಇದ್ದರೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿರುತ್ತದೆ.

ಪ್ರತೀ ಮಹಿಳೆಯೂ ಶಿಶು ಜನನವಾದ ಬಳಿಕ ತಮ್ಮ ಋತುಚಕ್ರದ ಬಗ್ಗೆ ನಿಗಾ ಹೊಂದಿರಬೇಕು ಮತ್ತು ಕಳವಳಕ್ಕೆ ಕಾರಣವಾಗಬಹುದಾದ ಯಾವುದೇ ಬದಲಾವಣೆಗಳು ಅಥವಾ ಅಸಹಜತೆಗಳು ಇದ್ದುದಾದರೆ ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು.

Advertisement

ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರಜ್ಞರಿಂದ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಮತ್ತು ಮುಕ್ತವಾಗಿ ಸಮಾಲೋಚನೆ ನಡೆಸುವುದರಿಂದ ಯಾವುದೇ ತೊಂದರೆಗಳು ಇದ್ದರೆ ಶೀಘ್ರವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಇದರಿಂದ ಗರಿಷ್ಠ ಪ್ರಜನನಾತ್ಮಕ ಆರೋಗ್ಯ ಮತ್ತು ಒಟ್ಟಾರೆ ಕ್ಷೇಮವನ್ನು ಹೊಂದಿರುವುದು ಸಾಧ್ಯ.

-ಡಾ| ಲಿನ್ಸೆಲ್‌ ಟೆಕ್ಸೀರಾ,

ಕನ್ಸಲ್ಟಂಟ್‌ ಒಬಿಜಿ ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next