ಚಾಮರಾಜನಗರ: ಆಶ್ರಮ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉನ್ನತ ವ್ಯಾಸಂಗಕ್ಕೆ ಅಣಿಯಾಗಲು ಉತ್ತಮ ಶೈಕ್ಷಣಿಕ ತಳಹದಿಯನ್ನು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ರೂಪಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಪಂ ಸಿಇಒ ಕೆ.ಎಸ್.ಲತಾ ಕುಮಾರಿ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಡಕಟ್ಟು ಪ್ರದೇಶಗಳ ಆಶ್ರಮ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಸಾಮರ್ಥ್ಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆಶ್ರಮ ಶಾಲೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ಉತ್ತೀರ್ಣರಾಗುವಂತೆ ಅಗತ್ಯ ಜ್ಞಾನಾರ್ಜನೆ ಬೆಳೆಸಬೇಕು. ಇಂಗ್ಲಿಷ್ ಜ್ಞಾನ ಹೆಚ್ಚಿಸಬೇಕು. ಶಿಕ್ಷಕರು ವೃತ್ತಿ ನೈಪುಣ್ಯತೆ ಹೆಚ್ಚಿಸಿ ಪರಿಣಾಮಕಾರಿ ಬೋಧನೆ ಮಾಡಬೇಕೆಂದರು.
ಕಂಪ್ಯೂಟರ್ ಶಿಕ್ಷಣ, ಡ್ರಾಯಿಂಗ್, ಚರ್ಚಾ ಸ್ಪರ್ಧೆ, ಪ್ರಬಂಧ, ಆಶುಭಾಷಣ, ನೃತ್ಯ, ಸಂಗೀತ, ಭಾಷಣ ಕಲೆ, ರಸಪ್ರಶ್ನೆ, ಸಾಮಾನ್ಯ ಜ್ಞಾನ, ರಂಗಾಯಣ, ಇತ್ಯಾದಿ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಶಿಕ್ಷಕರು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದರು.
ಶಿಕ್ಷಕರು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಬೋಧಿಸಬೇಕು. ನಿರ್ಲಕ್ಷ್ಯವಹಿಸುವ ಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು. ಕಾರ್ಯಗಾರದ ಸದುಪಯೋಗ ಪಡೆದು ಆಶ್ರಮಶಾಲೆಗಳಲ್ಲಿನ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಮೂಲಕ ಕೇಂದ್ರಿಯ ನವೋದಯ ಮಾದರಿ ಶಾಲೆಗಳಿಗೆ ದಾಖಲಾಗಲು ಜ್ಞಾ}ರ್ಜನೆ ಹೆಚ್ಚಿಸಬೇಕು. ಶಾಲಾ ಸ್ವಚ್ಛತೆ, ನಿರ್ವಹಣೆ, ಶಿಸ್ತು ಬೆಳೆಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಕೃಷ್ಣಪ್ಪ, ಡಯೆಟ್ ಉಪ ಪ್ರಾಂಶುಪಾಲೆ ಶೋಭಾ, ಸಂಪನ್ಮೂಲ ಉಪನ್ಯಾಸಕರು ಕಾರ್ಯಾ ಗಾರದಲ್ಲಿದ್ದರು.