Advertisement

ಶಾಲೆಯಲ್ಲೇ ಅಂಗನವಾಡಿ ಕೇಂದ್ರ ಸ್ಥಾಪಿಸಿ

03:40 PM Nov 10, 2018 | Team Udayavani |

ಕೊಪ್ಪಳ: ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಅನುಕೂಲವಾಗುವಂತೆ ಊರಿನೊಳಗಿರುವ ಶಾಲೆಯಲ್ಲಿಯೇ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್‌ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಗ್ರಾಮಗಳಲ್ಲಿ ಸ್ಥಾಪನೆಯಾಗುವ ಅಂಗನವಾಡಿ ಕೇಂದ್ರಗಳನ್ನು ಊರಿನೊಳಗಿರುವ ಸರ್ಕಾರಿ, ಖಾಸಗಿ ಹೀಗೆ ಯಾವುದೇ ಶಾಲೆಗಳಲ್ಲಿ ಸ್ಥಳಾವಕಾಶವಿದ್ದರೆ ಅಂತಹ ಶಾಲೆಗಳಲ್ಲಿಯೇ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರವು ತೀರ್ಮಾನಿಸಿದ್ದು, ಸುತ್ತೋಲೆಯನ್ನೂ ಹೊರಡಿಸಿದೆ. ಇದಕ್ಕೆ ಕೇಂದ್ರ ಸರ್ಕಾರವು ಸಹ ಸುತ್ತೋಲೆ ಹೊರಡಿಸಲಿದೆ. ಕೆಲವು ಕಡೆ ಅಂಗನವಾಡಿ ಕೇಂದ್ರಗಳು ಗ್ರಾಮಗಳ ಹೊರಗಿದ್ದು, ಇದರಿಂದ ಮಕ್ಕಳಿಗೆ ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ಸರ್ಕಾರದ ಸೌಲಭ್ಯಗಳು ಒದಗುತ್ತಿಲ್ಲ. ಆದ್ದರಿಂದ ಅಗತ್ಯವಿರುವ ಪ್ರದೇಶದಲ್ಲಿಯೇ ಅಂಗನವಾಡಿ ಕೇಂದ್ರ ಸ್ಥಾಪನೆಯಾಗಬೇಕು. ಊರೊಳಗಿರುವ ಸರ್ಕಾರಿ ಶಾಲೆ, ಖಾಸಗಿ ಶಾಲೆ ಮತ್ತು ವಸತಿ ಶಾಲೆಗಳಲ್ಲಿ ಸಾಮಾನ್ಯವಾಗಿ ಸ್ಥಳ ಅವಕಾಶವಿದ್ದಲ್ಲಿ ಅಂತಹ ಶಾಲೆಯಲ್ಲಿ 30/40 ಅಳತೆಯ ಜಾಗೆಯಲ್ಲಿ ಅಂಗನವಾಡಿ ಕೇಂದ್ರ ಹಾಗೂ ಅದರ ಜೊತೆ ಶೌಚಾಲಯವನ್ನು ನಿರ್ಮಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು. ಶಿಕ್ಷಣ ಇಲಾಖೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಹ ಸಹಕರಿಸಬೇಕು. ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಮತ್ತು ಇನ್ನತರೇ ಸಮಸ್ಯೆಗಳನ್ನು ಗಮನಕ್ಕೆ ತರಬೇಕು. ಅಂತಹ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ ಮಾತನಾಡಿ, ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್‌ ಆಪರೇಟರ್ಸ್‌ ಹೀಗೆ ಹಲವು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ವೇತನವು ಪ್ರತಿ ತಿಂಗಳಿಗೊಮ್ಮೆ ಸಿಗುತ್ತಿಲ್ಲ ಬದಲಾಗಿ 3-4 ತಿಂಗಳಿಗೊಮ್ಮೆ ವೇತನವು ಸಿಗುತ್ತಿದ್ದು, ಅವರಿಗೆ ತುಂಬ ತೊಂದರೆಯಾಗುತ್ತಿದೆ. ಆದ್ದರಿಂದ ಈ ಕುರಿತು ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.

ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿಯಿವೆ. ರೇಷ್ಮೆ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ಹುದ್ದೆಗಳು ಖಾಲಿಯಿದ್ದು, ಕಚೇರಿ ಕೆಲಸಕ್ಕೆ ಮತ್ತು ಸಾರ್ವಜನಿಕರ ಸೇವೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಶೀಘ್ರ ಈ ಹುದ್ದೆಗಳಿಗೆ ಅಧಿ ಕಾರಿ, ಸಿಬ್ಬಂದಿ ನೇಮಕ ಮಾಡಬೇಕು ಎಂದು ಕೃಷಿ ಹಾಗೂ ರೇಷ್ಮೆ ಇಲಾಖೆಗಳ ಅ ಧಿಕಾರಿಗಳು ಸಭೆಯಲ್ಲಿ ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಾತನಾಡಿ, ಕಂಪ್ಯೂಟರ್‌ ಆಪ್‌ರೇಟರ್‌ ಹುದ್ದೆಗಳನ್ನು ಏಜೆನ್ಸಿ ಮುಖಾಂತರ ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಬೇಕು. ಅಧಿಕಾರಿಗಳ ಮತ್ತು ಸಿಬ್ಬಂದಿ ಖಾಲಿ ಇರುವ ಹುದ್ದೆಗಳ ವಿವರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಅನುದಾನ, ಅಗತ್ಯ ಹುದ್ದೆ ಹೀಗೆ ಯಾವುದೇ ಸಮಸ್ಯೆಗಳಿದ್ದರೆ ಅಧಿಕಾರಿಗಳು ಜಿಲ್ಲಾ ಪಂಚಾಯತ್‌ ಸಿಇಒ ಮೂಲಕ ನಮ್ಮ ಗಮನಕ್ಕೆ ತರಬೇಕೆಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಸಿಇಒ ವೆಂಕಟರಾಜಾ, ಎಡಿಸಿ ಸಿ.ಡಿ. ಗೀತಾ, ಜಿಪಂ ಉಪಕಾರ್ಯದರ್ಶಿ ಎನ್‌.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಿವಿಧ ತಾಲೂಕುಗಳ ತಹಶೀಲ್ದಾರ್‌ರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next