ಬೆಂಗಳೂರು: ಕೋವಿಡ್ 19 ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರಿಕೆಯಾಗುತ್ತಿದ್ದರೂ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇದ್ಯಾವುದಕ್ಕೂ ಗಮನಕೊಡದೆ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಪರೀಕ್ಷೆಯಲ್ಲಿ ಭಾಗವಹಿಸಿ, ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಸೋಮವಾರ ನಡೆದ ವಿಜ್ಞಾನ, ರಾಜ್ಯಶಾಸOಉ ಹಾಗೂ ಸಂಗೀತ ಪರೀಕ್ಷೆಗೆ 7,91,102 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 7,74,729 ವಿದ್ಯಾರ್ಥಿಗಳು (ಶೇ.97.93ರಷ್ಟು) ಹಾಜರಾಗಿದ್ದು, 16,373 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
2018-19ರಲ್ಲಿ 7,79,993 ವಿದ್ಯಾರ್ಥಿಗಳ ಪೈಕಿ 7,69,778 ವಿದ್ಯಾರ್ಥಿಗಳು ಹಾಜರಾಗಿದ್ದು, 10,215 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.69 ಹಾಜರಾತಿ ದಾಖಲಾಗಿತ್ತು. ಈ ವರ್ಷದ ಹಾಜರಾತಿಯಲ್ಲಿ ಶೇ.0.7ರಷ್ಟು ಕಡಿಮೆಯಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಂಟೈನ್ಮೆಂಟ್ ಪ್ರದೇಶಗಳ 2,942 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಕೋವಿಡ್ 19ನೇತರ ಅನಾರೋಗ್ಯ ಕಾರಣಗಳಿಂದ 491 ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಧಾರವಾಡದ ಇಬ್ಬರು ಮತ್ತು ರಾಯಚೂರಿನ ಒರ್ವ ವಿದ್ಯಾರ್ಥಿಯನ್ನು ಪರೀಕ್ಷಾ ಅಕ್ರಮದ ಕಾರಣದಿಂದ ಡಿಬಾರ್ ಮಾಡಲಾಗಿದೆ. 1442 ವಿದ್ಯಾರ್ಥಿಗಳು ವಸತಿ ನಿಯಲದಲ್ಲಿದ್ದು, ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳ 645 ವಿದ್ಯಾರ್ಥಿಗಳಲ್ಲಿ 592 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 2,644 ವಲಸೆ ವಿದ್ಯಾರ್ಥಿಗಳಲ್ಲಿ 12,539 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.
ತಾಯಿ ಸಾವಿನ ದುಃಖದಲ್ಲೇ ಪರೀಕ್ಷೆ ಬರೆದ ಬಾಲಕ: ತಾಯಿ ಆತ್ಮಹತ್ಯೆಯ ದುಃಖದ ನಡುವೆಯೇ ಶಿರಸಿ ತಾಲೂಕಿನ ದೇವನಹಳ್ಳಿಯಲ್ಲಿ ವಿದ್ಯಾರ್ಥಿಯೊಬ್ಬ ಶಿರಸಿ ಮಾರಿಕಾಂಬ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದಾನೆ. ಕಾರವಾರ ನಗರದ ಹಿಂದೂ ಪ್ರೌಢಶಾಲೆ ವಿದ್ಯಾರ್ಥಿ ನಿತಿನ್ ತನ್ನ ತಂದೆಯ 12ನೇ ದಿನದ ಉತ್ತರಕ್ರಿಯೆ ಮುಗಿಸಿ ಪರೀಕ್ಷೆಗೆ ಹಾಜರಾಗಿ ದ್ದಾನೆ. ಈ ಇಬ್ಬರ ಭವಿಷ್ಯವೂ ಉಜ್ವಲವಾಗಿರಲಿ ಎಂದು ಸಚಿವರು ಶುಭಹಾರೈಸಿದರು.
ಬೆಳಗಾವಿ ನಗರದ ತಿಲಕವಾಡದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ 320 ಖಾಸಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಬಸ್ ವ್ಯವಸ್ಥೆ ಮಾಡಲಾಗಿದೆ. ಶಿರಸಿಯ ಮುಂಡ ಗೋಡದ ಚಿಪಗೇರಿ ಗ್ರಾಮದ 19 ಮಕ್ಕಳು ಸುಮಾರು 32 ಕಿ.ಮೀ. ದೂರದ ಕಾತೂರಿನ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರಕ್ಕೆ ಬರಲು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ. ಶಿರಸಿ ತಾಲೂಕಿನ ದನಗನಹಳ್ಳಿಯ ಕಾವ್ಯ ಕುಂಬಾರ ಎಂಬ ವಿದ್ಯಾರ್ಥಿನಿ ಕೋವಿಡ್ 19 ಭಯದಿಂದ ಪರೀಕ್ಷೆ ಬರೆದಿರಲಿಲ್ಲ,
ಸೋಮವಾರ ಶಿಕ್ಷಣ ಇಲಾಖೆ ಅಧಿಕಾರಿಗಳು ಆ ವಿದ್ಯಾರ್ಥಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ ಎಂದು ಹೇಳಿದರು. ಹಾಸನ ಜಿಲ್ಲೆಯ ಅರಸೀಕೆರೆಯ ಸೇಂಟ್ ಮೇರಿಸ್ ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜುಗಳಿಗೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಪೋಷಕರಿಗೆ ಕೋವಿಡ್ 19 ದೃಢಪಟ್ಟ ಹಿನ್ನೆಲೆಯಲ್ಲಿ ಈ ಮಕ್ಕಳನ್ನು ಸೋಮವಾರದ ಪರೀಕ್ಷೆಗೆ ವಿನಾಯಿತಿ ನೀಡಿ, ಪೂರಕ ಪರೀಕ್ಷೆ ಅವಕಾಶ ಕಲ್ಪಿಸಿದ್ದೇವೆ. ಈ ಇಬ್ಬರೂ ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣವಿಲ್ಲ, ಆದರೂ ಆರೋಗ್ಯ ತಪಾಸಣೆಗೆ ಸೂಚಿಸಲಾಗಿದೆ.
ಶನಿವಾರ ವಿದ್ಯಾರ್ಥಿಗಳ ಜತೆ ಕೊಠಡಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಇತರೆ ವಿದ್ಯಾರ್ಥಿಗಳನ್ನು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಗಲಕೋಟೆ ನವನಗರದ ಪರೀಕ್ಷಾ ಕೇಂದ್ರದಲ್ಲಿ ಗಣಿತ ಪರೀಕ್ಷೆ ದಿನ ಕೊಠಡಿ ಮೇಲ್ವಿಚಾರಕಿಯಾಗಿದ್ದ ಶಿಕ್ಷಕಿಯೊಬ್ಬರಿಗೆ ಸೋಂಕಿನ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶಿಕ್ಷಕಿ ಸಹಿತವಾಗಿ ಪರೀಕ್ಷೆಗೆ ನಿಯುಕ್ತಿಯಾಗಿದ್ದ ಎಲ್ಲ ಸಿಬ್ಬಂದಿಯನ್ನು ಪರೀಕ್ಷಾ ಕೆಲಸದಿಂದ ವಿಮುಕ್ತಿಗೊಳಿಸಿ ಇಡೀ ಕೇಂದ್ರಕ್ಕೆ ಬೇರೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರವನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದರು.