Advertisement

ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯ

02:03 AM Jun 16, 2020 | Sriram |

ಪುತ್ತೂರು: ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಶೌಚಾಲಯ, ವಿದ್ಯುತ್‌, ಸಂಪರ್ಕ ರಸ್ತೆ ಸಮಸ್ಯೆಗಳು ಇದ್ದಲ್ಲಿ ಆ ಬಗ್ಗೆ ಪಟ್ಟಿ ಮಾಡಿ ಕೇಂದ್ರ ವ್ಯಾಪ್ತಿಯ ಗ್ರಾ.ಪಂ. ಮತ್ತು ನಗರಸಭೆಗೆ ಕಳುಹಿಸಿ ತತ್‌ಕ್ಷಣ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಸಂಜೀವ ಮಠಂದೂರು ಅವರು ಕ್ಷೇತ್ರ ಶಿಕ್ಷಣಾಧಿಕಾರಿ, ತಾ.ಪಂ. ಇಒ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಮಿನಿ ವಿಧಾನಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಜೂ. 15ರಂದು ನಡೆದ ಎಸೆಸೆಲ್ಸಿ ಪರೀಕ್ಷಾ ಸಿದ್ಧತೆಗಳ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳು ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಪಾಲನೆ ಮಾಡ ಬೇಕು. ಕೋವಿಡ್-19 ಭೀತಿ ಕಾರಣ ಮಕ್ಕಳ ಜತೆ ಹೆತ್ತವರೂ ಪರೀಕ್ಷಾ ಕೇಂದ್ರಕ್ಕೆ ಬರುವ ಸಾಧ್ಯತೆ ಇದ್ದು, ಜನದಟ್ಟಣೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೇಂದ್ರಗಳಲ್ಲಿ ಹೆಚ್ಚುವರಿ ಮಾಸ್ಕ್ ತಂದಿರಿಸುವಂತೆ ಶಾಸಕರು ಸೂಚಿಸಿದರು.

ಮಳೆಗಾಲ: ನಿಗಾ ಇರಲಿ
ಈ ಬಾರಿ ಮಳೆಗಾಲ ಆಗಿದ್ದು, ವಿದ್ಯಾರ್ಥಿಗಳು ಹೊಳೆ, ತೋಡು ದಾಟಿ ಬರಬೇಕಿದ್ದಲ್ಲಿ ನಿಗಾ ವಹಿಸಬೇಕು. ಅಗತ್ಯವೆನಿಸಿದರೆ ವಾಹನ ವ್ಯವಸ್ಥೆ ಒದಗಿಸಬೇಕು. ಕೇರಳ ಗಡಿಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ವಾಹನ ಕಲ್ಪಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಸಿ. ಮಾತನಾಡಿ, ತಾ|ನಲ್ಲಿ ಒಟ್ಟು 5,007 ವಿದ್ಯಾರ್ಥಿಗಳಿದ್ದು, ಇದರಲ್ಲಿ 252 ಮಂದಿ ಹೊರ ಜಿಲ್ಲೆಗಳ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಹೊರ ಜಿಲ್ಲೆಯ 37 ಮಂದಿ ಪುತ್ತೂರು ತಾ|ನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರವೇಶಪತ್ರವನ್ನು ಕಳುಹಿಸಿಕೊಡಲಾಗಿದೆ. ಒಟ್ಟು 12 ಕೇಂದ್ರಗಳು ಹಾಗೂ 1 ಉಪ ಕೇಂದ್ರವಿದ್ದು, 253 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

Advertisement

ಪರೀಕ್ಷಾ ಕೇಂದ್ರ ಇರುವ ಪ್ರದೇಶದ ಕಂಟೈನ್ಮೆಂಟ್‌ ವಲಯ ಎಂದು ಘೋಷಿತವಾದಲ್ಲಿ ಅಲ್ಲಿನ ಪರೀಕ್ಷಾ ಕೇಂದ್ರ ರದ್ದುಪಡಿಸಿ ಬೇರೆ ಕಡೆ ಪರೀಕ್ಷೆಗೆ ವ್ಯವಸ್ಥೆ ಮಾಡುವ ಸಲುವಾಗಿ ಮುನ್ನೆಚ್ಚರಿಕೆ ದೃಷ್ಟಿಯಿಂದ ನಗರದ ಸುಧಾನ ವಸತಿಯುತ ಶಾಲೆ ಮತ್ತು ತೆಂಕಿಲ ಕನ್ನಡ ಮಾಧ್ಯಮ ಶಾಲೆಯಲ್ಲಿ ಹೆಚ್ಚುವರಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ ಎಂದರು.

ಗಡಿ ಭಾಗದ 70 ವಿದ್ಯಾರ್ಥಿಗಳು
ಕೇರಳ ಗಡಿ ಗ್ರಾಮ ವ್ಯಾಪ್ತಿಯ 11 ಶಾಲೆಗಳಿಂದ 70 ವಿದ್ಯಾರ್ಥಿಗಳು ಪರೀಕ್ಷೆ ಬರೆಯ ಲಿದ್ದು, ಅವರನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8ಕ್ಕೆ ವಾಹನ ಸ್ಥಳದಲ್ಲಿ ಇರಲಿದೆ. ಈ ವ್ಯವಸ್ಥೆಗಾಗಿ 11 ಶಾಲಾ ವ್ಯಾಪ್ತಿಯಲ್ಲಿ ತಲಾ ಓರ್ವ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದರು.

ಮಾಸ್ಕ್ ಕಡ್ಡಾಯ ಮನವಿ
ವಿದ್ಯಾರ್ಥಿಗಳು ಮಾಸ್ಕ್ ಕಡ್ಡಾಯವಾಗಿ ಬಳಸ ಬೇಕು. ಈ ಬಗ್ಗೆ ಹೆತ್ತವರು ಗಮನ ಹರಿಸಬೇಕು. ತಾ|ಗೆ 4 ಸಾವಿರ ಮಾಸ್ಕ್ ಬಂದಿದ್ದು, ಇನ್ನುಳಿ ದುದನ್ನು ಬೇರೆಡೆಯಿಂದ ಸಂಗ್ರಹಿಸಲಾಗು ವುದು. ಇದನ್ನು ಶಾಲೆ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌, ತಹಶೀಲ್ದಾರ್‌ ರಮೇಶ ಬಾಬು, ತಾ.ಪಂ. ಇಒ ನವೀನ್‌ ಭಂಡಾರಿ ಮತ್ತಿತರರಿದ್ದರು. ಎಸೆಸೆಲ್ಸಿ ನೋಡಲ್‌ ಅಧಿಕಾರಿ ಜಯರಾಮ ಶೆಟ್ಟಿ ವಂದಿಸಿದರು. ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಎನ್‌. ನಿರೂಪಿಸಿದರು.

ಕುಂಬ್ರದಲ್ಲಿ ಶೌಚಾಲಯ ಸಮಸ್ಯೆ
ಪರೀಕ್ಷಾ ಕೇಂದ್ರವಾಗಿರುವ ಕುಂಬ್ರ ಕೆಪಿಎಸ್‌ ಶಾಲೆಯಲ್ಲಿ ಶೌಚಾಲಯ ಸಮರ್ಪಕವಾಗಿಲ್ಲದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸ್ತಾವಿಸಿದರು. ಈ ಬಗ್ಗೆ ಮಾಹಿತಿ ಪಡೆದ ಶಾಸಕರು ತತ್‌ಕ್ಷಣ ಗಮನ ಹರಿಸುವಂತೆ ತಾ.ಪಂ. ಇಒ ಅವರಿಗೆ ಸೂಚಿಸಿದರು.

ಸರ್ವ ವ್ಯವಸ್ಥೆ
ಪ್ರತಿ ಕೇಂದ್ರಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ವ್ಯವಸ್ಥೆ ಇರಲಿದೆ. ವಿಶ್ರಾಂತಿ ಕೊಠಡಿ, ಅನಾರೋಗ್ಯ ಕಂಡು ಬಂದಲ್ಲಿ ಅಂತಹವರಿಗೆ ಪ್ರತ್ಯೇಕ ಕೇಂದ್ರಗಳಲ್ಲಿ ಬರೆಯಲು ಅವಕಾಶ ಇದೆ. ತಪಾಸಣೆ ಸಂದರ್ಭ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಅವರು ಪರೀಕ್ಷೆ ಬರೆಯಲು ಇಚ್ಛಿಸದಿದ್ದಲ್ಲಿ ಜುಲೈನಲ್ಲಿ ನಡೆಯುವ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು. ಇದನ್ನು ಮರು ಪರೀಕ್ಷೆ ಎಂದು ಪರಿಗಣಿಸಲಾಗುವುದಿಲ್ಲ.
– ಲೋಕೇಶ್‌ ಸಿ., ಕ್ಷೇತ್ರ ಶಿಕ್ಷಣಾಧಿಕಾರಿ

ಪೂರಕ ವ್ಯವಸ್ಥೆ ಕಲ್ಪಿಸಿ: ಅಂಗಾರ
ಸುಳ್ಯ: ಎಸೆಸೆಲ್ಸಿ ಪರೀಕ್ಷಾ ಅರ್ಹತೆ ಹೊಂದಿರುವ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗುವ ನಿಟ್ಟಿನಲ್ಲಿ ಪೂರಕ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಉತ್ತಮ ಫಲಿತಾಂಶ ದಾಖಲಿಸುವ ನಿಟ್ಟಿನಲ್ಲಿ ಆದ್ಯತೆ ನೀಡುವಂತೆ ಶಾಸಕ ಎಸ್‌. ಅಂಗಾರ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ನೇತೃತ್ವದಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು. ಪರೀಕ್ಷೆಗೆ ಹಾಜ ರಾಗಲು ವಿದ್ಯಾರ್ಥಿಗಳಿಗೆ ಸಮಸ್ಯೆ ಇದಲ್ಲಿ ತಾಲೂಕು ಆಡಳಿತದ ಗಮನಕ್ಕೆ ತರಬೇಕು. ಅಂಥವರಿಗೆ ಪೂರಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಎಸ್‌.ಪಿ., ಕ್ಷೇತ್ರ ಸಮನ್ವಯ ಕೇಂದ್ರದ ಸಂಪನ್ಮೂಲ ಅಧಿಕಾರಿ ವೀಣಾ ಸತೀಶ್‌, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ ಉಪಸ್ಥಿತರಿದ್ದರು.

ಆರು ಪರೀಕ್ಷಾ ಕೇಂದ್ರಗಳು
ತಾ|ನಲ್ಲಿ 6 ಪರೀಕ್ಷಾ ಕೇಂದ್ರಗಳಿವೆ. ಸರಕಾರದ ಸುತ್ತೋಲೆ ಪ್ರಕಾರ ಪ್ರತಿ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿ ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. ವಿದ್ಯಾರ್ಥಿಗಳು ಕೇಂದ್ರಕ್ಕೆ ಆಗಮಿಸಲು ವಾಹನದ ಅನನುಕೂಲತೆ ಇದ್ದಲ್ಲಿ ಖಾಸಗಿ ಶಾಲಾ ವಾಹನ ಅಥವಾ ದಾನಿಗಳ ಸಹಕಾರ ಪಡೆದು ವಾಹನದ ವ್ಯವಸ್ಥೆ ಮಾಡಲಾಗುವುದು.
– ಮಲ್ಲೇಸ್ವಾಮಿ, ಡಿಡಿಪಿಐ

 

Advertisement

Udayavani is now on Telegram. Click here to join our channel and stay updated with the latest news.

Next