Advertisement

ನರಸಿಂಹ ಅವತಾರದ ಮೂಲಪಾಠ

12:18 PM Aug 11, 2018 | |

ನರಸಿಂಹ ಎಂಬ ಅವತಾರದ ಮೂಲಪಾಠವನ್ನು ನಾವು ಅರಿತು ನಡೆಯಬೇಕಾದ ಅಗತ್ಯವಿದೆ. ನರ ಮತ್ತು ಸಿಂಹ ಎಂದಿಗೂ ಒಂದಾಗಲೂ ಸಾಧ್ಯವೇ ಇಲ್ಲ. ಆದರೆ ಇಲ್ಲಿ ದೇವನೇ ಆರೂಪದಲ್ಲಿ ಬಂದಿದ್ದಾನೆಂದರೆ ಅದರ ಅರ್ಥ ನರನಲ್ಲಿರುವ ಸಿಂಹರೂಪದ ದರ್ಶನದ ಪ್ರತೀಕ. ಹಿರಣ್ಯಕಶಿಪು ಬ್ರಹ್ಮನಿಂದ ವರಪಡೆಯುವಾಗ ಈತನಿಗೆ ಸಾವೇ ಇಲ್ಲ ಎಂದುಕೊಳ್ಳುತ್ತೇವೆ. ಆದರೆ, ನರಸಿಂಹರೂಪ ತಾಳಿ ಬಂದ ದೇವರು ಅಧರ್ಮಕ್ಕೆ ಸಾವಿದೆ ಎಂಬುದನ್ನು ನಿರೂಪಿಸುತ್ತಾನೆ. ಎಂಥಾ ವರವನ್ನು ಪಡೆದರೂ ಅದು ಅಧರ್ಮದ ಮುಂದೆ ನಶ್ವರ.

Advertisement

ಮಹಾವಿಷ್ಣುವು ಅವತಾರ ಪುರುಷ. ದೇವಾನು ದೇವತೆಗಳೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ, ಮಾನವನು ಬದುಕುವ ದಾರಿಯನ್ನು ತೋರುತ್ತಲೇ ಬಂದಿದ್ದಾರೆ. ಅದರಲ್ಲಿ ಪಾಲನಾಕರ್ತನಾದ ಮಹಾವಿಷ್ಣುವು ವಿವಿಧ ಅವತಾರ ತಾಳಿ ಮಾನವನ ಜೀವನದಲ್ಲಿ ಮಾರ್ಗದರ್ಶಕ, ಚಿಂತಕ, ರಕ್ಷಕನಾಗಿ ಕಾರ್ಯನಿರ್ವಹಿಸುತ್ತ ಆದಿಮಾಯೆಯ ನಿರ್ದೇಶನದಂತೆ ಲೋಕಹಿತವನ್ನು ಕಾಪಾಡುತ್ತ ಬಂದಿರುವುದನ್ನು ಪುರಾಣ ಪುಣ್ಯಕಥೆಗಳಿಂದ ನಾವು ತಿಳಿದಿದ್ದೇವೆ. ಲೋಕೋ ಭಿನ್ನ ರುಚಿಃ ಎಂಬ ಉಕ್ತಿಯಂತೆ ಹಲವಾರು ರುಚಿಗಳಿಂದ ಕೂಡಿದ ವ್ಯಕ್ತಿಗಳು ಒಂದೇ ಪ್ರದೇಶದಲ್ಲಿ ಬಾಳುವಾಗ, ವಿರಸದ ಸಂದರ್ಭಗಳು ಉಂಟಾಗುವುದು ಸಹಜವಾದರೂ ಅದು ಲೋಕದ ಸಂಸ್ಕೃತಿಯನ್ನು ಎಂದಿಗೂ ಹಾಳು ಮಾಡಬಾರದು.

ಸಂಸ್ಕಾರವನ್ನು ಮೀರಿ ನಡೆಯುವ ಪ್ರವೃತ್ತಿ ಹೆಚ್ಚಾದಾಗ, ಅದರಿಂದ ದುಷ್ಟತನವೇ ಹೆಚ್ಚಿದಾಗ, ಅಧರ್ಮದ ಬೆಂಕಿಹೊತ್ತಿದಾಗ ಇವೆಲ್ಲವನ್ನು ಸರಿಪಡಿಸುವ ಉದ್ದೇಶ ಹೊತ್ತು ದೇವನು ಅವತಾರತಾಳಿ ಬರುತ್ತಾನೆ. ಅಂತಹ ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ಈ ನಿಮಿತ್ತ ವೈಶಾಖ ಮಾಸ, ಶುಕ್ಲಪಕ್ಷದ ಚತುರ್ದಶಿಯಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ.

ಹಿರಣ್ಯಕಶಿಪು ಬ್ರಹ್ಮನಿಂದ, ನರನಿಂದಾಗಲೀ ಪ್ರಾಣಿಯಿಂದಾಗಲೀ, ಹಗಲಲ್ಲಾಗಲೀ ರಾತ್ರಿಯಲ್ಲಾಗಲೀ, ಆಗಸದಲ್ಲಾಗಲೀ ಭೂಮಿಯಲ್ಲಾಗಲೀ, ಮನೆಯ ಒಳಗಾಗಲೀ ಹೊರಗಾಗಲೀ ಮತ್ತು ಯಾವುದೇ ಅಸ್ತ್ರಗಳಿಂದ ನನಗೆ ಮರಣ ಸಂಭವಿಸದಿರಲಿ ಎಂದು ವರ ಪಡೆಯುತ್ತಾನೆ. ಆದರೆ ಆತನ ದುಷ್ಟತನ ಮಿತಿಮೀರಿದಾಗ ವಿಷ್ಣುವು ನರನೂ ಅಲ್ಲದ ಪ್ರಾಣಿಯೂ ಅಲ್ಲದ ನರಸಿಂಹ ರೂಪತಾಳಿ, ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಮುಸ್ಸಂಜೆಯಲ್ಲಿ, ಒಳಗೂ ಅಲ್ಲದ ಹೊರಗೂ ಅಲ್ಲದ ಬಾಗಿಲ ಹೊಸಿಲಿನಲ್ಲಿ, ಆಗಸವೂ ಅಲ್ಲದ ಭೂಮಿಯೂ ಅಲ್ಲದ ತನ್ನ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಇರಿಸಿಕೊಂಡು ಯಾವುದೇ ಅಸ್ತ್ರ ಉಪಯೋಗಿಸದೆ ತನ್ನ ಚೂಪಾದ ಉಗುರಿನಿಂದ ಕರುಳನ್ನು ಬಗೆದು ಸಂಹರಿಸುತ್ತಾನೆ. ಇದು ತುಂಬಾ ಸುಂದರವಾದ ಭಾಗ. ಎಲ್ಲಿಯೂ ಸಾವು ಬರದಂತೆ ಸೃಷ್ಟಿಕರ್ತನಿಂದಲೇ ವರ ಪಡೆದಿದ್ದರೂ ಸಹ ಅಧರ್ಮದ ದಾರಿಯಲ್ಲಿ ನಡೆದಾಗ ಸಾವಿಗೂ ಒಂದು ದಾರಿಯಿದೆ ಎಂಬುದನ್ನು ಹಿರಣ್ಯಕಶಿಪುವಿನ ಜೀವನದ ತೋರಿಸಿಕೊಡುತ್ತದೆ.

ನರಸಿಂಹ ಎಂಬ ಅವತಾರದ ಮೂಲಪಾಠವನ್ನು ನಾವು ಅರಿತು ನಡೆಯಬೇಕಾದ ಅಗತ್ಯವಿದೆ. ನರ ಮತ್ತು ಸಿಂಹ ಎಂದಿಗೂ ಒಂದಾಗಲೂ ಸಾಧ್ಯವೇ ಇಲ್ಲ. ಆದರೆ ಇಲ್ಲಿ ದೇವನೇ ಆರೂಪದಲ್ಲಿ ಬಂದಿದ್ದಾನೆಂದರೆ ಅದರ ಅರ್ಥ ನರನಲ್ಲಿರುವ ಸಿಂಹರೂಪದ ದರ್ಶನದ ಪ್ರತೀಕ. ಹಿರಣ್ಯಕಶಿಪು ನರನಾಗಿದ್ದರೂ ಸಿಂಹದ ಕ್ರೂರತೆ ಆತನಲ್ಲಿತ್ತು. ಚಾಣಾಕ್ಷ$ಮತಿಯಿಂದ ವರವನ್ನು ಪಡೆದಿದ್ದರೂ, ಆ ವರವೂ ಸುಳ್ಳಾಗದೇ ಆತನಿಗೆ ಮರಣ ಸಂಭವಿಸಿತು. ಅಂದರೆ ಮನುಷ್ಯನಲ್ಲಿರುವ ಸಿಂಹದ ಕ್ರೂರತೆ ಹೆಚ್ಚುತ್ತಾ ಹೋದಂತೆ ಆತ ಎಷ್ಟೇ ಬಲವಂತನಾಗಿದ್ದರೂ ಅಧಃಪತನದ ದಾರಿಯಲ್ಲಿ ಸಾಗಬೇಕಾಗುತ್ತದೆ. ನರಸಿಂಹ ರೂಪವು ಜೀವನದಲ್ಲಿ ಮನುಷ್ಯ ನರನಾಗಿಯೇ ಇರಬೇಕೇ ಹೊರತು ಸಿಂಹವಾಗಬಾರದೆಂಬುದನ್ನು ಸೂಚಿಸುತ್ತದೆ.

Advertisement

ಹಿರಣ್ಯಕಶಿಪು ಬ್ರಹ್ಮನಿಂದ ವರಪಡೆಯುವಾಗ ಈತನಿಗೆ ಸಾವೇ ಇಲ್ಲ ಎಂದುಕೊಳ್ಳುತ್ತೇವೆ. ಆದರೆ, ನರಸಿಂಹರೂಪ ತಾಳಿ ಬಂದ ದೇವರು ಅಧರ್ಮಕ್ಕೆ ಸಾವಿದೆ ಎಂಬುದನ್ನು ನಿರೂಪಿಸುತ್ತಾನೆ. ಎಂಥಾ ವರವನ್ನು ಪಡೆದರೂ ಅದು ಅಧರ್ಮದ ಮುಂದೆ ನಶ್ವರ. ಅಂತೆಯೇ ಎಂಥಾ ಜ್ಞಾನವಂತನಾದರೂ ಆತ ಅಧರ್ಮದ ಹಾದಿತುಳಿದರೆ, ನರತ್ವವನ್ನು ಬಿಟ್ಟು ಸಿಂಹನಾದರೆ ನರಸಿಂಹ ದೇವರು 
ಶಿಕ್ಷಿಸದೇ ಇರಲಾರ.

ದೇವನ ಅವತಾರವೆಂಬುದು ಕೇವಲ ಭಜಿಸಲೋ ಪೂಜಿಸಲೋ ಸೀಮಿತವಾಗಿಲ್ಲ. ಅದಕ್ಕೆ ವಿಶಾಲ ಅರ್ಥ ಇದ್ದೇ ಇದೆ. ಅದನ್ನು ಅರಿಯುವ ಮನಸ್ಸು ಬೇಕು, ಪಾಲಿಸುವ ಗುಣ ಸಂಸ್ಕಾರ ಬೇಕು. ನಮ್ಮ ಸಿಟ್ಟು ಅಥವಾ ಉಗ್ರತೆಯೂ ಹೆಚ್ಚಬಾರದೆಂಬುದಕ್ಕೆ ಸೂಚಕವೋ ಎಂಬಂತೆ ನರಸಿಂಹ ದೇವರ ಇದಿರಿನಲ್ಲಿ ಭಕ್ತಿಯ ಸೌಮ್ಯತೆಯ ಸಾಕಾರಮೂರ್ತಿ ಆಂಜನೇಯನಿರುತ್ತಾನೆ. ನರನು ಉತ್ತಮನಾದಾಗ ನಾರಾಯಣನನ್ನು ಸೇರುವುದು ಸುಲಭವೆಂಬುದು ಪ್ರಹ್ಲಾದನಿಂದ ನಾವು ಕಲಿತ ಪಾಠ.

ಪಾಠ: ದೇವರೂ ಎಲ್ಲೆಲ್ಲಿಯೂ ಇದ್ದಾನೆ ಎಂಬ ನಂಬಿಕೆಯೇ ನಮ್ಮನ್ನು ಸುಸಂಸ್ಕೃತ ದಾರಿಯಲ್ಲಿ ನಡೆಸಿದರೆ  ನರಸಿಂಹ ಅವತಾರದ ಜ್ಞಾನ ನಮ್ಮ ಜೀವನವನ್ನು ಆನಂದಮಯವಾಗಿಸೀತು.

 ವಿಷ್ಣು ಭಟ್ಟ ಹೊಸ್ಮನೆ.

Advertisement

Udayavani is now on Telegram. Click here to join our channel and stay updated with the latest news.

Next