Advertisement

ಪ್ರಬಂಧ: ವಾಹನ ಪುರಾಣ !

06:00 AM Nov 04, 2018 | |

ಹಿಂದೊಮ್ಮೆ ಯಾವಾಗಲೋ ಐದು-ಆರನೇ ಕ್ಲಾಸಿನಲ್ಲಿರುವಾಗ, ಮನೆಗೊಂದು ಸೈಕಲ್‌ ಕೂಡ ಇಲ್ಲದ ಕಟಾನುಕಟಿ ದಿನಗಳಲ್ಲಿ ಒಂದು ತಾಸಿಗೆ ನಾಲ್ಕಾಣೆಯಂತೆ ನೀಡಿ ಬಾಡಿಗೆ ಸೈಕಲ್‌ ತಂದು ನಾನು, ನನ್ನ ಗೆಳತಿಯರು ಓಣಿಯ ತುಂಬ ಬೀಳುತ್ತ ಏಳುತ್ತ ಅಂತೂ ಸೈಕಲ್‌ ಕಲಿತೇ ಸೈ ಎಂದಿದ್ದೆವು. ಆದರೆ, ಮುಂದೆ ಹೈಸ್ಕೂಲಿಗೆ ಹೋಗುವಾಗ ಆಗಲಿ, ದೂರದ ಕಾಲೇಜಿಗೆ ಕಾಲೆಳೆದುಕೊಂಡು ನಡೆದು ಹೋಗುವ ಸಮಯದಲ್ಲಾಗಲಿ, ಸೈಕಲ್ಲೊಂದನ್ನು ಕೊಂಡು ಸಮಯ ಉಳಿಸಬಹುದೆಂಬ ಪರಿಜ್ಞಾನ ನಮಗಾಗಲಿ ನಮ್ಮ ಪಾಲಕರಿಗಾಗಲಿ ಎಂದೂ ಮೂಡಲೇ ಇಲ್ಲವಲ್ಲ! ನಡೆಯುವುದೇ ಎಲ್ಲರ ನಿತ್ಯ ಕಾಯಕದ ಮುಖ್ಯ ಭಾಗವಾದ ಆ ದಿನಗಳಲ್ಲಿ, ತೀರಾ ದೂರವೆನಿಸಿದ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನೇ ಹೊತ್ತೂಯ್ಯುತ್ತ ಯೌವನದಿಂದ ತುಂಬಿ ತೊನೆದಾಡುತ್ತಿದ್ದ ಸಿಟಿಬಸ್‌ಗಳ ಜಮಾನಾದ ಎಂಬತ್ತು-ತೊಂಬತ್ತರ ದಶಕಗಳಲ್ಲಿ ಸೈಕಲ್ಲೊಂದಕ್ಕೆ ರೇಟ್‌ ಏನಿರಬಹುದೆಂದು ಕೂಡ ನಾವ್ಯಾರೂ ತಲೆಕೆಡಿಸಿಕೊಂಡವರಲ್ಲ. ಕಾಲುಗಳೆಂಬ ಹನ್ನೊಂದು ನಂಬರಿನ ಗಾಡಿ ನಮ್ಮಲ್ಲಿರುವಾಗ, ಮತ್ತವು ಸಾಕಷ್ಟು ಗಟ್ಟಿಯಿರುವಾಗ ಬೆಳಿಗ್ಗೆ ಹತ್ತು ಗಂಟೆಯ ಕ್ಲಾಸಿಗೆ ಒಂಬತ್ತೂ ನಲವತ್ತಕ್ಕೆಲ್ಲ ಮನೆಬಿಟ್ಟು ಕಾಲೇಜು ಸೇರುತ್ತಿದ್ದ ನಮಗೆ ಅದೊಂದು ಪ್ರಯಾಸದ ಕೆಲಸವೆಂದು ಯಾವತ್ತೂ ಅನಿಸಿರಲೇ ಇಲ್ಲ, (ಎರಡು ಹೆಜ್ಜೆಗೆ ಸೈಕಲ್‌-ಬೈಕ್‌ ಅಂತ ತಲೆ ತಿನ್ನುವ ಮಕ್ಕಳಿಗೆ ಈಗ ಇದನ್ನೆಲ್ಲ ಹೇಳಿದರೆ ನಿಮ್ಮ ಕಾಲದ ಗತವೈಭವದ ರೀಲು ಈಗ ಬಿಡಬೇಡ, ಆಗ ಹಾಗಿತ್ತು, ಈಗ ಬೇರೆಯಾಗಿದೆ ಎನ್ನುತ್ತಾರೆ.) ಈ ಜನ್ಮದಲ್ಲಿ ನಾನೂ ಒಂದು ದ್ವಿಚಕ್ರ ವಾಹನದ ಮೇಲೆ ಕುಳಿತು ತಿರುಗಾಡಬಹುದೆಂಬ ದುಬಾರಿ ಕನಸನ್ನು ಹಗಲಿನಲ್ಲಾಗಲಿ ಇರುಳಿನಲ್ಲಾಗಲಿ ಕಂಡದ್ದೇ ಇಲ್ಲ. ನಮ್ಮ ಮನೆಯೇ ಅಂತಲ್ಲ, ನಮ್ಮ ಸುತ್ತಮುತ್ತಲಿನ ಯಾರ ಮನೆಗಳಲ್ಲೂ ಯಾವುದೇ ವಾಹನಗಳು ಇರಲಿಲ್ಲ. ಕೆಲವರ ಮನೆಗಳ ಪಡಸಾಲೆಗಳಲ್ಲಿ ಗೋಡೆಗೊರಗಿ ನಿಂತ ಸೈಕಲ್ಲುಗಳ ಮೇಲೆ ನನಗಂತೂ ಎಂದೂ ಲವ್ವಾಗಿರಲಿಲ್ಲ. ಯಾರೋ ಕೆಲವರ ಮನೆಗಳಲ್ಲಿ ಅನುಕೂಲವಿದ್ದವರು ಬಜಾಜ ಸ್ಕೂಟರಿಗೆ ನಂಬರು ಹಚ್ಚಿ ವರ್ಷಾನುಗಟ್ಟಲೇ ಕಾದು ನಂಬರು ಬಂದಾಗ ಅದನ್ನು ಬೇರೆಯವರಿಗೆ ಕೊಟ್ಟು ಅದರ ಮೇಲೊಂದಿಷ್ಟು ಹೆಚ್ಚಿಗೆ ದುಡ್ಡು ಇಸಿದುಕೊಂಡು ಫಾಯಿದೆ ಮಾಡಿಕೊಳ್ಳುತ್ತಿದ್ದರೇ ವಿನಹ ತಾವೇ ಕೊಂಡು ಸವಾರಿ ಮಾಡುವಷ್ಟು ಹವ್ಯಾಸವನ್ನು ಬೆಳೆಸಿಕೊಂಡಿರಲಿಲ್ಲ.  

Advertisement

ನಾವು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನಮ್ಮ ಎಲ್ಲ ಲೆಕ್ಚರರುಗಳು ಕೂಡ ನಡೆದೇ ಬರುತ್ತಿದ್ದರು. ಕೇವಲ ಒಬ್ಬರ ಬಳಿ ಲ್ಯಾಂಬ್ರೆಟ್ಟಾ ಎನ್ನುವ ಸ್ಕೂಟರ್‌ ಇತ್ತು. ಮತ್ತದು “ಫ‌ಡ್‌ ಫ‌ಡ್‌’ ಸಪ್ಪಳವಿಲ್ಲದೇ ಬರುತ್ತಿರಲಿಲ್ಲ. ನಮ್ಮ ಒಬ್ಬನೇ ಒಬ್ಬ ಕ್ಲಾಸ್‌ಮೇಟನ ಹತ್ತಿರ, ಆಗ ಬಹಳ ಚಾಲ್ತಿಯಲ್ಲಿದ್ದ ಇಂಡ್‌-ಸುಝುಕಿ ಬೈಕ್‌ ಇತ್ತು. ಅದರ ಮೇಲೆ ಅವನು “ಭರ್‌’ ಎಂದು ಹೋಗುವುದನ್ನು ನೋಡಿದಾಗಲೆಲ್ಲ ಎರಡು ಫೀಲಿಂಗ್‌ಗಳು ನನ್ನನ್ನು ಕಾಡುತ್ತಿದ್ದವು. ಒಂದು, ನಾನು ಮದುವೆಯಾಗುವ ಹುಡುಗನ ಹತ್ತಿರವೂ ಒಂದು ಬೈಕಿರಬೇಕು, ಇನ್ನೊಂದು ಈ ನಮ್ಮ ಕ್ಲಾಸಮೇಟ್‌ ಮಹಾರಾಯನಷ್ಟು ವೇಗವಾಗಿ ಆತ ಓಡಿಸದಿರಲಿ ಅಂತ. 

ಮುಂದೆ, ನನ್ನ ಪತಿರಾಯರು ಮದುವೆಗೆ ಒಂದಷ್ಟೇ ದಿನ ಮೊದಲು ಒಂದು ಸೆಕೆಂಡ್‌ ಹ್ಯಾಂಡ್‌ ಲೂನಾ ಖರೀದಿಸಿ ನನ್ನನ್ನು ನಿರಾಸೆಯ ಕೂಪಕ್ಕೆ ತಳ್ಳಿದರೂ ಮುಂದೆ ಮೂರು ಬೇರೆ ಬೇರೆ ಬೈಕುಗಳ ಮೇಲೆ ನನ್ನನ್ನು ಹತ್ತಿಸಿಕೊಂಡು ತಿರುಗಾಡಿದರು. ಇದೀಗ ರಾಯಲ್‌ ಎನ್‌ಫೀಲ್ಡ್‌ನ ದುರಾಸೆಗೆ ಬಿದ್ದು ಅದರ ಭಾರವನ್ನು ನಿಭಾಯಿಸುವುದರಲ್ಲೆ ಬೆವರಿಳಿಸುತ್ತಿರುವಾಗ ನನ್ನ ಆಸೆಯ ಭಾರವನ್ನೂ ಅವರ ಮೇಲೆ ಹಾಕುವುದು ಬೇಡವೇ ಬೇಡವೆಂದುಕೊಂಡು ಬೈಕಿನ ಬಗ್ಗೆ ನಿರ್ಮೋಹಿಯಾಗಿಬಿಟ್ಟಿದ್ದೇನೆ.

ನಾನು ಬ್ಯಾಂಕಿನ ಕೆಲಸಕ್ಕೆ ಸೇರಿ ವಿಜಾಪುರಕ್ಕೆ ಹೋದಾಗ ಒಂದು ಸೈಕಲ್ಲಾದರೂ ಕೊಳ್ಳಬೇಕೆಂಬ ಆಸೆ ಬಲವತ್ತರವಾಯಿತು. ಇಬ್ರಾಹಿಂಪುರದ ಹತ್ತಿರದ ನನ್ನ ಬಾಡಿಗೆ ಮನೆಯಿಂದ ಒಂದಿಷ್ಟು ನಡೆದು ಬಸ್‌ಸ್ಟಾಪ್‌ ತಲುಪಿ ನಂತರ ಸಿಟಿಬಸ್‌ ಹಿಡಿದು ಮೀನಾಕ್ಷಿ ಚೌಕ್‌ನಲ್ಲಿ ಇಳಿದುಕೊಂಡು ಮತ್ತೆ ಅಲ್ಲಿಂದ ಸಿದ್ಧೇಶ್ವರ ರೋಡಿನಲ್ಲಿದ್ದ ನನ್ನ ಬ್ಯಾಂಕಿಗೆ ತಲುಪಿದಾಗ ಹತ್ತು ಇಲ್ಲವೇ ಹತ್ತೂಕಾಲು ಆಗಿರುತ್ತಿತ್ತು. ಇನ್ನೂ ಹತ್ತು-ಹದಿನೈದು ನಿಮಿಷ ಉಳಿದಿರುತ್ತಿತ್ತು. ಈ ಎಲ್ಲ ಧಾವಂತಕ್ಕಿಂತ ಒಂದು ಸೈಕಲ್‌ ಕೊಂಡುಬಿಟ್ಟರೆ ಹತ್ತು ಗಂಟೆಗೆ ಮನೆ ಬಿಟ್ಟರೂ ಆರಾಮವಾಗಿ ಟೈಮಿಗೆ ಸರಿಯಾಗಿ ನಾನು ಬ್ಯಾಂಕ್‌ ತಲುಪಬಹುದಾಗಿತ್ತು. ಆದರೆ, ನನ್ನಾಸೆಯನ್ನು ನಾನು ಯಾರ ಮುಂದೆಯೂ ಹೇಳಲು ಹೋಗಲೇ ಇಲ್ಲ, ಸ್ವತಃ ನಿರ್ಣಯವನ್ನೂ ಮಾಡಲಿಲ್ಲ. ಹೀಗಾಗಿ, ಸೈಕಲ್‌ ಕೊಳ್ಳುವ ನನ್ನ ಕನಸು ಕನಸಾಗಿಯೇ ಉಳಿದುಹೋಗಿದೆ. ಈಗ ಕೊಳ್ಳಬಹುದಾದರೂ ನನ್ನ ಭಾರವಾದ ದೇಹವನ್ನು ಹೊತ್ತುಕೊಂಡು ಅದು “ಕಿರ್‌ ಕಿರ್‌’ ಎಂದು ಕಿರುಚುವುದು ಬೇಡವೆಂದು ನಾನೇ ಸುಮ್ಮನಾಗಿದ್ದೇನೆ. ಮದುವೆಯ ನಂತರ ಮಧ್ಯೆ ಒಂದಿಷ್ಟು ದಿನಗಳು ಹುಬ್ಬಳ್ಳಿಯಿಂದ ಗದಗವರೆಗೆ ಮಾಡಿದ ಪ್ರಯಾಣದಲ್ಲಿ ನಮ್ಮ ಲೂನಾ, ಸಿಟಿಬಸ್ಸುಗಳು ಮತ್ತು ರೈಲು ಎಲ್ಲ ಪ್ರಕಾರದ ವಾಹನಗಳು ಏಕಪ್ರಕಾರವಾಗಿ ನನಗೆ ಸೇವೆ ಒದಗಿಸಿ ಕೃತಾರ್ಥವಾಗಿವೆ.

ಮತ್ತೆ ಬೆಳಗಾವಿಗೆ ಬಂದಾಗ ಆಗಿನ್ನೂ ಬಜಾಜ್‌ ಚೇತಕ ಸ್ಕೂಟರನ್ನು ಕೊಂಡಿದ್ದ ಪತಿರಾಯರು ದಿನಾಲೂ ಸಂಜೆ ಬ್ಯಾಂಕು ಬಿಡುವ ಹೊತ್ತಿಗೆ ಬಾಗಿಲಿನ ಎದುರು ಹಾಜರಾಗಿ ಹಾರ್ನ್ ಹಾಕಿದರೆಂದರೆ ಸಹೋದ್ಯೋಗಿಗಳ ಬಾಯಿಂದ ನಾನಾ ರೀತಿಯ ಕಮೆಂಟುಗಳು ಉದುರುತ್ತಿದ್ದವು. “ನಿನ್ನ ಪೈಲಟ್‌ ಬಂದರು, ಓಡು’, “ನಿನ್ನ ಡ್ರೈವರ್‌ ಹಾಜರಾದರು ಹೊರಡು’ ಹೀಗೆ ಕಾಲೆಳೆಯುತ್ತಿದ್ದರು. ಅಂತೂ ಹೀಗೆ ನನ್ನ ಕಾಲುಗಳನ್ನು, ಇವರ ಸ್ಕೂಟರನ್ನು ನಂಬಿಕೊಂಡು ವರ್ಷಗಳನ್ನೇ ತಳ್ಳಿದ್ದಾಯ್ತು.

Advertisement

ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಮಹಿಳಾ ಸಹಕಾರಿ ಬ್ಯಾಂಕಿಗೆ ಮ್ಯಾನೇಜರ್‌ ಆಗಿ ಸೇರಿಕೊಂಡ ಮೇಲೆ ಮಾತ್ರ ಅಲ್ಲಿನ ಆಡಳಿತ ಮಂಡಳಿಯವರು, “ಮ್ಯಾನೇಜರ್‌ ಎಂದಮೇಲೆ ಹೊರಗೆ ತಿರುಗಾಟ ಇದ್ದೇ ಇರುತ್ತದೆ, ನಾವೇ ಸಾಲ ಕೊಡುತ್ತೇವೆ, ಒಂದು ದ್ವೀಚಕ್ರ ವಾಹನವನ್ನು ಖರೀದಿಸಲೇಬೇಕು’ ಎಂದು ಖಡಾಖಂಡಿತವಾಗಿ ಹೇಳಿದ ಮೇಲೆ ನಾನು ನನ್ನ ಸ್ವಂತ ವಾಹನದ ಮೇಲೆ ವಿರಾಜಮಾನಳಾದೆ. 

ಆಗಿನ್ನೂ ಹೊಸದಾಗಿ ಟಿವಿಎಸ್‌ ಸ್ಕೂಟಿ ಬಂದಿತ್ತು. ನೋಡಲು ತೆಳ್ಳಗೆ ಕ್ಯೂಟಾಗಿತ್ತು. ಮತ್ತೆ ಅದಾಗಲೇ ಸಾಕಷ್ಟು ಸದ್ದು ಮಾಡಿ ಮೈಲೇಜ್‌ ಸಾಧಿಸಿದ್ದ ಕೈನೆಟಿಕ್‌ ಹೊಂಡಾ ಗಾಡಿಗಿಂತ ತೂಕ ಮತ್ತು ಬೆಲೆ ಎರಡರಲ್ಲೂ ಹಗುರವಾಗಿತ್ತು. ಹಾಗಾಗಿ, ನನ್ನ ನ್ಯಾಚುರಲ್‌ ಚಾಯ್ಸ ಸ್ಕೂಟಿನೇ ಆಗಿತ್ತು. ನಮ್ಮ ಬ್ಯಾಂಕಿನ ಮಹಿಳಾ ಅಕೌಂಟೆಂಟ್‌ ತನ್ನ ಎತ್ತರ ಮತ್ತು ಗಾತ್ರಕ್ಕೆ ತಕ್ಕಂತೆ ಕೈನಿ ಕೊಂಡಿದ್ದಳು. ಇನ್ನಿಬ್ಬರು ಮಹಿಳಾ ಸ್ಟಾಫ್ ಆಗಿನ್ನೂ ವಾಹನ ಕೊಂಡಿರಲಿಲ್ಲ. ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಪ್ರಾರಂಭವಾದ, ಮಹಿಳಾ ನಿರ್ದೇಶಕರು ಮತ್ತು ಉದ್ಯೋಗಿಗಳೇ ಇದ್ದ ಬ್ಯಾಂಕು ನಮ್ಮದು. ಎಂದೆಂದೂ ಬ್ಯಾಂಕಿನ ಮೆಟ್ಟಲನ್ನೇ ಏರದ, ಕೇವಲ ಅಡುಗೆ ಮತ್ತು ಮನೆಗೆಲಸಗಳಲ್ಲಿ, ಶ್ರಾವಣದ ವ್ರತಗಳು, ದೀಪಾವಳಿಯ ಫ‌ರಾಳಗಳು, ಅಮಾವಾಸ್ಯೆಯ ಹೋಳಿಗೆ ಎಡೆಗಳು ಇವುಗಳಲ್ಲೇ ಕಳೆದುಹೋದ ಸುತ್ತಮುತ್ತಲಿನ ಹೆಣ್ಣುಮಕ್ಕಳನ್ನು ಬ್ಯಾಂಕಿನ ಮೆಟ್ಟಲೇರುವಂತೆ, ತಮ್ಮದೇ ಒಂದು ಖಾತೆಯನ್ನು ತೆರೆಯುವಂತೆ ಮನವೊಲಿಸಲು ನಾವು ನಮ್ಮೆಲ್ಲ ಜಾಣತನವನ್ನು ಖರ್ಚು ಮಾಡುತ್ತಿದ್ದ ಕಾಲವದು. ಜನರೊಂದಿಗೆ ಬೆರೆಯುವುದರಿಂದ ಮಾತ್ರ ಬ್ಯಾಂಕಿಂಗನ್ನು ಬೆಳೆಸಬಹುದೆಂದು ನಾವೆಲ್ಲ ಬಲವಾಗಿ ನಂಬಿದ್ದರಿಂದ ಯಾರು ಯಾವ ಸಭೆ-ಸಮಾರಂಭಗಳಿಗೆ ಕರೆದರೂ ತಪ್ಪದೇ ಹಾಜರಿ ಕೊಡುತ್ತಿದ್ದೆವು. ನಮ್ಮ ಎರಡು ದ್ವಿಚಕ್ರ ವಾಹನಗಳ ಮೇಲೆ ನಾವು ನಾಲ್ಕು ಜನ ಮಹಿಳಾ ಸಿಬ್ಬಂದಿ ಎಲ್ಲೆಂದರಲ್ಲಿ ಅಲೆಯಲು ಶುರುಮಾಡಿ ಸಾಕಷ್ಟು ಹೆಸರು ಮಾಡಿದೆವೆಂದೇ ಹೇಳಬೇಕು. ನಮ್ಮ ಗಾಡಿಗಳಿಗೆ ಸ್ಟ್ಯಾಂಡ್‌ ಹಾಕಿ ನಿಲ್ಲಿಸುವಷ್ಟರಲ್ಲಿ “ಮಹಿಳಾ ಬ್ಯಾಂಕಿನವರು ಬಂದ್ರು’ ಅಂತ ಹೆಣ್ಣುಮಕ್ಕಳು, ಅವರ ಗಂಡಂದಿರು ಮಾತನಾಡಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುವ‌ಷ್ಟರ ಮಟ್ಟಿಗೆ ನಮ್ಮ ಕೀರ್ತಿಪತಾಕೆಗಳು ಹಾರಾಡಲು ಕಾರಣ ನಮ್ಮ ಈ ಎರಡು ದ್ವಿಚಕ್ರ ವಾಹನಗಳೇ ಆಗಿದ್ದವೆಂದು ನಾನಂತೂ ಬಲವಾಗಿ ನಂಬಿದ್ದೇನೆ. ಎಲ್ಲೆಂದರಲ್ಲಿ, ಯಾವಾಗ ಬೇಕೆಂದಾಗ, ಯಾರ ಮರ್ಜಿಗೂ ಕಾಯದೇ ನಾವು ನಾವೇ ನಮ್ಮ ಪ್ರೀತಿಯ ವಾಹನಗಳ ಮೇಲೆ ಹೆಮ್ಮೆಯಿಂದ ಕುಳಿತು ಓಡಾಡಿದಾಗ ಸ್ತ್ರೀಸ್ವಾತಂತ್ರ್ಯದ ಎರಡನೆಯ ಮಜಲನ್ನು ಮುಟ್ಟಿ ಆನಂದ ಪಟ್ಟಿ¨ªೆವು. 

ಮಕ್ಕಳು-ಮರಿಗಳೆಂದು ನಮ್ಮ ಸಂಸಾರದ ಜವಾಬ್ದಾರಿಗಳೂ ಬೆಳೆಯಲಾರಂಭಿಸಿದಾಗ, ಈ ಕಡೆ ಆಫೀಸಿನ ಕೆಲಸಗಳೂ ವಿಪರೀತವಾಗಿ ತೊಡಗಿಸಿಕೊಳ್ಳಲಾರಂಭಿಸಿದಾಗ ಇವೇ ವಾಹನಗಳು ನಮ್ಮ ಆಪದಾºಂಧವರಾಗಿ ಕೆಲಸಗಳನ್ನೆಲ್ಲ ಹಗುರಗೊಳಿಸಿದವು. ಬೆಳಿಗ್ಗೆ ಶಾಲೆಗೆ ಹೋದ ಮಗರಾಯ ಸಂಜೆ ಅಜ್ಜಿಯ ಮನೆ ತಲುಪಿ, ಒಂದಿಷ್ಟು ತಿಂಡಿ ತಿಂದು ಆಟವಾಡುವ ಹೊತ್ತಿಗೆ ಸರಿಯಾಗಿ ಹೋಗಿ ಅವನನ್ನು ಕರೆದುಕೊಂಡು, ಬರುಬರುತ್ತ ಮಾರ್ಕೆಟ್ಟಿನಲ್ಲಿ ತರಕಾರಿ ಕೊಂಡು, ಮತ್ತೇನೋ ಮನೆಗೆ ಬೇಕಾಗುವ ನೂರೆಂಟು ಸಾಮಾನುಗಳಲ್ಲಿ ಅರ್ಜೆಂಟಿಗೆ ಬೇಕಾದದ್ದನ್ನು ಕೊಂಡು ನಮ್ಮ ಮತ್ತು ವಾಹನದ ಎಡ-ಬಲಗಳಲ್ಲೂ ಹಾಕಿ ಹರಡಿ ಮನೆ ಮುಟ್ಟುವುದೆಂದರೆ ನಿತ್ಯ ಯುದ್ಧ ಗೆದ್ದು ಬಂದಂತೆ. ಅಂಥ ಯುದ್ಧಗಳಲ್ಲಿ ನನ್ನ ಸ್ಕೂಟಿಯೇ ನನ್ನ ರಥ. ಒಮ್ಮೊಮ್ಮೆ ಕೆಲಸ ಹೆಚ್ಚಾಗಿ ಇನ್ನೂ ದಾರಿಯಲ್ಲಿರುವಾಗಲೇ ಆಗಸವೆಲ್ಲ ಕಪ್ಪಡರಿ ಬೆಳ್ಳಿನಕ್ಷತ್ರಗಳು ಫ‌ಳ-ಫ‌ಳ ಹೊಳೆಯಲಾರಂಭಿಸುವಷ್ಟು ತಡವಾದಾಗ, ಇದೇ ಸ್ಕೂಟಿಯ ಮೇಲೆ ಹಿಂಬದಿಯ ಸವಾರನಾಗಿ ಬೆರಗುಗಣ್ಣುಗಳಿಂದ ಬಾನಂಗಳವನ್ನೇ ನೋಡುತ್ತಿದ್ದ ಮಗನಿಗೆ, ನಿದ್ದೆ ಬರಲೆಂದು ರಾತ್ರಿ ಹೇಳಿರುತ್ತಿದ್ದ ಕಥೆಗಳೆಲ್ಲ ಮನದ ಓಣಿಯ ತುಂಬ ಮೆರವಣಿಗೆ ಹೊರಟು, “ಅಮ್ಮಾ ಈಗ ಗಣಪ್ಪ ಅಲ್ಲಿ ಆಕಾಶದಲ್ಲಿ ಇಲಿಯ ಮೇಲೆ ಕುಳಿತು ಮನೆಗೆ ಹೊರಟಿದ್ದಾನೆಯೇ?’ ಎಂದು ಪ್ರಶ್ನೆ ಎಸೆಯುತ್ತಿದ್ದ. ಅದಕ್ಕೇನಾದರೂ ಉತ್ತರ ಕೊಟ್ಟು ಮುಂದೆ ಸಾಗುತ್ತಿದ್ದಂತೇ “ಅಮ್ಮಾ, ಈಗ ಯಾವ್ಯಾವ ದೇವರು ಆಕಾಶದಲ್ಲಿ ಸಂಚರಿಸುತ್ತಿದ್ದಾರೆ?’ ಎಂದು ಇನ್ನೊಂದು ಪ್ರಶ್ನೆ. ಅವನಿಗೆ ಕನ್ವಿನ್ಸ್‌ ಆಗುವ ರೀತಿಯಲ್ಲಿ ಉತ್ತರ ಕೊಡುವುದಕ್ಕೆ ಗೋಳಾಡುತ್ತ ಮನೆಗೆ ಬರುವುದು. ಮಳೆಗಾಲದಲ್ಲಿ ಮಾತ್ರ ಈ ಸ್ಕೂಟಿಯ ಸಹವಾಸವೇ ಬೇಡ ಎನ್ನುವಷ್ಟು ಹೆದರಿಕೆ, ತಾಪತ್ರಯ. ಗುಂಡಿಗಳನ್ನು ದಾಟಲು ಸ್ಕೂಟಿಯನ್ನು ಆ ಕಡೆ ಈಕಡೆ ತಿರುಗಿಸುತ್ತ ಕ್ರಾಸ್‌ಕಂಟ್ರಿ ಆಟ ಆಡುತ್ತ ಹೋಗುವಾಗ ಯಾವುದೋ ಸಿನೆಮಾದಲ್ಲಿ ಮಂಜುಳಾ ಅಡ್ಡಾ ಗುಡ್ಡಾ ದಾಟಿ ಬಂದೆ, ಕದ್ದು ಕಣವೆ ಹಾರಿ ಬಂದೆ- ನೆನಪಾಗುತ್ತಿತ್ತು. ರೇನ್‌ಕೋಟ್‌ ಹಾಕಿಕೊಂಡರೂ ಬ್ಯಾಂಕು ತಲುಪುವಷ್ಟರಲ್ಲಿ ಸೀರೆಯೆಲ್ಲ ನೆನೆದು, ಗಡಗಡ ನಡುಗುತ್ತ ಕುರ್ಚಿಯ ಮೇಲೆ ಆಸೀನಳಾಗಿ ಸೀನಲು ಆರಂಭಿಸಿದರೆ ಯಾವತ್ತಾದರೂ ಒಂದಿನ ಒಂದು ಪುಟ್ಟ ಮಾರುತಿ 800 ಕೊಳ್ಳುವ ಭಾಗ್ಯ ಈ ಜೀವಕ್ಕಿದೆಯೇ ಎಂದುಕೊಳ್ಳುತ್ತಿದ್ದೆ. ಅದು ಬರುವ ತನಕವಾದರೂ ಹಳೆ ಗಂಡನ ಪಾದವೇ ಗತಿ ಎಂಬಂತೆ ಈ ಹಳೆ ಸ್ಕೂಟಿ ನಂಬಿಕೊಂಡು ಜೀವನ ರಥವನ್ನು ಸಾಗಿಸಲೇ ಬೇಕಿತ್ತು. 

ಬರೀ ಆರ್ಥಿಕ ಸ್ವಾತಂತ್ರ್ಯವಷ್ಟೇ ಮಹಿಳಾ ಸಬಲೀಕರಣವಲ್ಲ, ಸ್ವತಂತ್ರವಾಗಿ ಓಡಾಡುವ ಸ್ವಾತಂತ್ರ್ಯವೂ ಸೇರಿದಾಗ ಮಾತ್ರ ನಿಜ ಅರ್ಥದ ಮಹಿಳಾ ಸಬಲೀಕರಣ ಎಂದೆಲ್ಲ ಆಗಲೇ ಅನಿಸಿದ್ದು ಮತ್ತು ಅದು ಇಂದಿಗೂ ಸುಳ್ಳಲ್ಲ ಎಂದು ಮನದಟ್ಟಾದದ್ದು ಎಲ್ಲವೂ ಈ ನನ್ನ ಪುಟ್ಟ ದ್ವಿಚಕ್ರ ವಾಹನದ ದೆಸೆಯಿಂದಲೇ.

ನಂತರದ ದಿನಗಳಲ್ಲಿ ನಾನು ಇಷ್ಟಪಟ್ಟು ಮಾರುತಿ ಕಾರನ್ನು ಒಲಿಸಿಕೊಳ್ಳಲು ಹೊರಟರೂ ಅದೇಕೋ ಕೈಗೂಡದೇ ಭಗ್ನಪ್ರೇಮದಲ್ಲಿ ಪರ್ಯಾವಸಾನವಾಯಿತು. ಈ ವಿದ್ರೋಹದಲ್ಲಿ ಹೊರಗಿನ ಜನರ ಜೊತೆಜೊತೆಗೆ ನನ್ನ ಮನೆಮಂದಿಯೂ ಅಷ್ಟೇ ಪ್ರಮಾಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ನನ್ನ ಸಂಶಯ ಇಂದಿಗೂ ಬಲವಾಗಿಯೇ ಇದೆ. ಹೊಸದಾಗಿ ಕಾರು ಕಲಿತ ನಾನು ಎರಡನೆಯ ಮಗನನ್ನು ತಾಯಿಯ ಮನೆಯಲ್ಲಿ ಬಿಟ್ಟು ಬ್ಯಾಂಕಿಗೆ ಹೋಗಬೇಕಿತ್ತು. ಕಾರಿನಲ್ಲಿ ಅವನನ್ನು ಕೂರಿಸಿಕೊಂಡು ಹೋಗುವಾಗ ಏನಾದರೊಂದು ಕಸರತ್ತು ಮಾಡಿ ಧೊಪ್ಪೆಂದು ಬೀಳುತ್ತಿದ್ದ. ಬಿಝಿ ರೋಡಿನಲ್ಲಿ ನಾನು ರಸ್ತೆಯ ಮೇಲೆ ಗಮನ ಕೊಡಲೋ, ಬಿದ್ದು ಅಳುತ್ತಿರುವ ಮಗನನ್ನು ಎತ್ತಿಕೊಳ್ಳಲೋ ತಿಳಿಯದೇ ಚಡಪಡಿಸುವಂತಾಗುತ್ತಿತ್ತು. ನಾನು ಗಾಬರಿ ಬೀಳುತ್ತಿದ್ದೆ. ಮೊದಲೇ ನೂರಾರು ತಿರುವುಗಳು, ಸಂದಿ-ಗೊಂದಿಗಳಿಂದ ಕೂಡಿದ ಸಣ್ಣ ಸಣ್ಣ ಓಣಿಗಳ ಊರು ಬೆಳಗಾವಿ. (ಈಗ ರಸ್ತೆಗಳು ಅಗಲವಾಗುತ್ತಿವೆ.) ಇಡೀ ರಸ್ತೆಯೇ ನಮ್ಮ ಮನೆಯ ಅಂಗಳವೆಂದು ತಿಳಿದುಕೊಂಡು ಕೈ ಕೈ ಹಿಡಿದುಕೊಂಡು ನಿತ್ಯ ಮ್ಯಾರಥಾನ್‌ ನಡೆಸುವ ಬೆಳಗಾವಿಯ ರಸಿಕ ಜನರು. ಅಂಥಾದ್ದರಲ್ಲಿ ಒಟ್ಟಿಗೇ ಕ್ಲಚ್ಚು, ಗೇರು, ಬ್ರೇಕು ಮತ್ತು ಎಕ್ಸೆಲರೇಟರು ಎಂದು ಮ್ಯಾನೇಜ್‌ ಮಾಡುತ್ತ, ಹಿಂದೆ-ಮುಂದೆ, ಅಕ್ಕ-ಪಕ್ಕ ನೋಡಿಕೊಂಡು ಗಾಡಿ ಓಡಿಸುವುದೆಂದರೆ ಅದೊಂದು ಮಹಾಪರಾಕ್ರಮವೇ ಸೈ. ಅಂಥಾದ್ದರಲ್ಲಿ ಒಂದು ದಿನ ನನ್ನ ಮಾರುತಿಯ ಮನಸ್ಸು ಅದೇಕೆ “ಎಲ್ಲಿ ಜಾರೀತೋ, ಮನವು ಎಲ್ಲೆ ಮೀರಿತೋ’, ಅದು ತನ್ನಷ್ಟಕ್ಕೆ ತಾನು ಕೈಬೀಸಿಕೊಂಡು ಆನಂದವಾಗಿ ನಡೆದುಕೊಂಡು ಹೋಗುತ್ತಿದ್ದ ದಾರಿಹೋಕನೊಬ್ಬನ ಹಿಂಗಾಲಿಗೆ ಸಿಹಿಚುಂಬನದ ಸ್ಪರ್ಶವನ್ನು ನೀಡಿಯೇಬಿಟ್ಟಿತು. ಆತ ತಪ್ಪೆಲ್ಲ ನನ್ನದೇ ಎನ್ನುವಂತೆ ಕೆಕ್ಕರಿಸಿ ನೋಡಿದ. ನಾನು ಅವನ ಅದೃಶ್ಯ ಮೂರನೆಯ ಕಣ್ಣಿನ ಉರಿನೋಟದಿಂದ ತಪ್ಪಿಸಿಕೊಂಡು ಬಂದು “ಹುಶ್ಶಂತ’ ಕುಳಿತು ಮಾರುತಿಯ ಪ್ರೇಮ ಪ್ರಕರಣದ ಬಗ್ಗೆ ಹೇಳುತ್ತಿದ್ದರೆ, ಮನೆಯವರೆಲ್ಲ ನನ್ನ ಮೇಲೆಯೇ ಉರಿದುಬಿದ್ದು, “ನೀನು, ನಿನ್ನ ಮಾರುತಿ ಹೀಗೆಯೇ ಜನರನ್ನು ತಬ್ಬಿಕೊಳ್ಳುತ್ತ ಹೋದರೆ, ಎಮಿÌಸಿ  ಕೇಸುಗಳು ಬಂದು ನಿಮ್ಮನ್ನು ಅಪ್ಪಿಕೊಳ್ಳುತ್ತವೆ, ಮತ್ತು ಜೈಲಿನಲ್ಲಿ ಮಧುಚಂದ್ರದ ಏರ್ಪಾಡಾಗುತ್ತದೆ’ ಎಂದು ಹೆದರಿಸಿಬಿಟ್ಟರು. ನಾನು ಈ ಮಾರುತಿಯ ಸಹವಾಸವೇ ಬೇಡವೆಂದುಕೊಂಡು, ನನ್ನ ಹಳೆಯ ಸ್ನೇಹವೇ ವಾಸಿಯೆಂದು ಇನ್ನೊಂದು ಸ್ಕೂಟಿಯನ್ನೇ ಕೊಂಡುತಂದೆ. ಮತ್ತಾರು ವರ್ಷಗಳು ಕಳೆಯುವುದರಲ್ಲಿ ಆಗಿನ್ನೂ ಹೊಸದಾಗಿ ಬಂದಿದ್ದ ಪ್ಲೆಜರ್‌ ನನ್ನ ಮಿತ್ರನಾಗಿ ಜೊತೆಯಾಯಿತು. ಹೀಗೆ ಇಪ್ಪತ್ತು ವರ್ಷಗಳ ತನಕ ಇಡೀ ಬೆಳಗಾವಿಯ ಸಂದಿ-ಗೊಂದಿಗಳಲ್ಲಿ, ಇಕ್ಕಟ್ಟು ಓಣಿಗಳಲ್ಲಿ, ತಿರುವುಗಳಲ್ಲಿ, ರಸ್ತೆಮಧ್ಯೆ ಧುತ್ತೆಂದು ಅವತರಿಸುವ ಬೆಟ್ಟಗುಡ್ಡಗಳಲ್ಲಿ, ಭೋರೆಂಬೋ ಮಳೆಯ ಧಾರೆ ಮಾಡಿದ ಗುಂಡಿ-ಕೊರಕಲುಗಳಲ್ಲಿ, ಕೆಸರು ಕೊಚ್ಚೆಗಳಲ್ಲಿ ನನ್ನ ಜೊತೆಜೊತೆಯಾಗಿ ಕಷ್ಟ-ಸುಖಗಳನ್ನನುಭವಿಸಿದ್ದು ಇವೇ ದ್ವಿಚಕ್ರ ವಾಹನಗಳು. ನನ್ನ-ಅವುಗಳ ಅವಿನಾಭಾವ ಸಂಬಂಧದ ಆಳ-ಎತ್ತರಗಳನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಮೊದಲು ಕಚೇರಿ, ನಂತರ ಕಾಲೇಜಿನ ಕೆಲಸ, ಇದೀಗ ಮನೆಯ ನೂರಾರು ಕೆಲಸಗಳ ಜೊತೆಗೆ ಸಂಸಾರದಲ್ಲಿನ ಸರಿಗಮವು ಯಾವತ್ತೂ ಬೇಸೂರಾಗದಿರಲಿ ಎಂದು ಹಂಬಲಿಸಿ, ನನ್ನ ಶಕ್ತಿಮೀರಿ ಪ್ರಯತ್ನಿಸುವಾಗ, ಮನೆಯಿಂದ ಆಫೀಸಿಗೆ, ಅಲ್ಲಿಂದ ಮತ್ತೆ ಕೆಲಸದ ಮೇಲೆ ಬೇರೆ ಬೇರೆ ಕಡೆ ತಿರುಗಾಡುವಾಗ, ಮಕ್ಕಳನ್ನು ಟ್ಯೂಶನ್ನು, ಗೆಳೆಯರ ಮನೆ ಎಂದೆಲ್ಲ ಬಿಟ್ಟು-ಕರೆದುಕೊಂಡು ಬರುವಾಗ, ತರಕಾರಿ ಪೇಟೆಗೆ ಹೋಗುವಾಗ, ಅಮ್ಮನ ಮನೆಗೆ ಭೇಟಿ ಕೊಡುವಾಗ, ಒಂಟಿಯಾಗಿ ಶಾಪಿಂಗ್‌ನ ಆನಂದವನ್ನು ಪಡೆಯುವಾಸೆಯಾದಾಗ, ಹೀಗೆ ಮನೆಯಲ್ಲಿರುವುದಕ್ಕಿಂತ ಹೆಚ್ಚು ರಸ್ತೆಯ ಮೇಲೇ ಇರುವಾಗ, ಯಾವಾಗಲೂ ನನ್ನ ಜೊತೆಯಾದದ್ದು ನನ್ನ ಪ್ರೀತಿಯ ಟೂ ವ್ಹೀಲರ್‌. 

ಒಂದು ದಿನ ಸರ್ವಿಸಿಂಗಿಗೋ ರಿಪೇರಿಗೋ ಕೂಡ ಬಿಡಲಾರದಷ್ಟು ಅಂಟು-ನಂಟು ಬೆಸೆದುಕೊಂಡಿದ್ದ ಟೂ-ವ್ಹೀಲರನ್ನು ಮತ್ತೂಮ್ಮೆ ಬದಲಾಯಿಸುವಷ್ಟು ವಯಸ್ಸು, ಸರ್ವೀಸು ಅದಕ್ಕೆ ಆದಾಗ ನನ್ನಲ್ಲಿ ಹತ್ತಾರು ಯೋಚನೆಗಳು ದಶದಿಕ್ಕುಗಳಲ್ಲಿ ಓಡಲಾರಂಭಿಸಿದವು. ಇದೀಗ ಮತ್ತೆ ದ್ವಿಚಕ್ರ ವಾಹನವನ್ನು ಕೊಳ್ಳಬೇಕೆಂದರೆ ಮತ್ತೆ ಅದಕ್ಕೆ ಎಪ್ಪತ್ತು ಸಾವಿರವಾದರೂ ಹಾಕಬೇಕು. ದ್ವಿಚಕ್ರ ವಾಹನವು ನನ್ನನ್ನು ಮತ್ತು ನಾನು ಅದನ್ನು ಎಷ್ಟೇ ಪ್ರೀತಿಸಿದರೂ, ಬೆಳಗಾವಿಯ ಮಳೆಯಿಂದ ಮತ್ತು ವರ್ಷದಿಂದ ವರ್ಷಕ್ಕೆ ಹೆಚ್ಚು ನಿಷ್ಕರುಣಿಯಾಗಿ ಉರಿಯುತ್ತಿರುವ ಸೂರ್ಯನಿಂದ ಅದು ನನ್ನನ್ನು ರಕ್ಷಿಸಲಾರದು. ಮೇಲಾಗಿ, ಇಪ್ಪತ್ತೈದು ಕಿಲೋಮಿಟರ್‌ ದೂರದಲ್ಲಿರುವ ಯೂನಿವರ್ಸಿಟಿಯಲ್ಲಿ ಕೆಲಸವಿದ್ದಾಗಲೆಲ್ಲ ಹೈವೇ ಮೇಲಿಂದ ನನ್ನನ್ನು ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಕರೆತರುವುದು ಅದರ ಶಕ್ತಿಮೀರಿದ ಕೆಲಸ. ಇಂಥ ಎಲ್ಲ ಕಾರಣಗಳನ್ನು ಮುಂದೆ ಮಾಡಿ ನಾನು ಪಾಯಿಂಟ್‌ ಬೈ ಪಾಯಿಂಟ್‌ ವಿವರಿಸಿ ನಾನೇಕೆ ಸಣ್ಣದೊಂದು ಕಾರನ್ನು ಸ್ವಂತಕ್ಕಾಗಿ ತೆಗೆದುಕೊಳ್ಳಬಾರದು ಎನ್ನುವ ಅಹವಾಲನ್ನು ಮುಂದಿಟ್ಟಾಗ, ಮನೆಮಂದಿಯೆಲ್ಲ “ಜೈ’ ಎಂದು ಜೋಷ್‌ ನೀಡಿ, ಆ ಕಾರು ಈ ಕಾರೆಂದು ತುಲನಾತ್ಮಕ ವಿಶ್ಲೇಷಣೆಗಳನ್ನು ನಡೆಸಿದರೂ, ಮನದಲ್ಲಿ ಅಚ್ಚೊತ್ತಿದ್ದ ಆಟೋ ಗೇರ್‌ ನ್ಯಾನೋ ಕಾರನ್ನು ಬಿಟ್ಟು ಬೇರಾವುದನ್ನು ವರಿಸಬಾರದೆಂದು ನಾನಾಗಲೇ ನಿರ್ಣಯಿಸಿ ಆಗಿತ್ತು.

ಅಂತೂ ಇಂತೂ ಜೀವನದ ಫ‌ರ್ಸ್ಡ್ ಹಾಫ್ನ ಹೊಸ್ತಿಲಲ್ಲಿ ಬಂದು ನಿಂತಿರುವ ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣದ ಹೊಸ ದಾರಿಯೊಂದು ನನ್ನೆದುರಿಗೆ ತೆರೆದುಕೊಂಡು, ಅದರ ಮೇಲಿನ ನನ್ನ ಸುಖಕರ ಪಯಣಕ್ಕೆ ಸಾಥ್‌ ನೀಡಲು ಹೊಸ ಕೆಂಪು ನ್ಯಾನೋ ಕಾರು ಬಂದು ನಿಂತಿತು. ಇದು ಕೂಡ ನನ್ನ ಹಳೆಯ ದ್ವಿಚಕ್ರ ವಾಹನಗಳಂತೆಯೇ ನನ್ನನ್ನು ಎಲ್ಲೆಂದರಲ್ಲಿ ಹೊತ್ತು ಒಯ್ದು ಕೆಲಸಗಳನ್ನು ಹಗುರಗೊಳಿಸುತ್ತಿರುವದನ್ನು ಅನುಭವಿಸಿದಾಗ ಸ್ತ್ರೀ ಸ್ವಾತಂತ್ರ್ಯದ ಮೂರನೆಯ ಮೆಟ್ಟಿಲನ್ನು ಏರಿ ನಿಂತಂತಾಗಿ, ಖುಷಿಯಿಂದ ಈ ಎಲ್ಲ ವಾಹನಗಳಿಗೆ ಅಕ್ಷರದ ಅಭಿನಂದನೆಗಳನ್ನೂ, ಅಕ್ಕರೆಯ ಧನ್ಯವಾದಗಳನ್ನೂ ಸಲ್ಲಿಸುವ ಬಯಕೆ ಭುಗಿಲೆದ್ದ ಕಾರಣ, ಈ ಲೇಖನವನ್ನು ಬರೆದು ಅವುಗಳ ಹೆಸರಿನಲ್ಲಿ ಅರ್ಪಿಸಬೇಕಾಯಿತು.

ನೀತಾ ರಾವ್‌, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next