Advertisement
ಬಹುಶಃ ನೀವು ನಕ್ಕು ಬಿಡುತ್ತಿರೇನೊ? ಅದರಲ್ಲೇನಿದೆ ಮೀನು ಹಿಡಿಯುವುದು! ಅದ್ಯಾವ ಘನ ಕಾರ್ಯ ಅಂದುಕೊಳ್ಳುತ್ತಿರೇನೊ? ಇರಬಹುದು. ಆದರೆ, ಇದುವರೆಗೂ ಮೀನನ್ನೇ ಮುಟ್ಟಿರದ ನನ್ನಂಥವನಿಗೆ ಬಲು ಮೋಜಿನ ಕಾರ್ಯವಾಯಿತು. ಚಿಕ್ಕವನಿದ್ದಾಗ ನಮ್ಮೂರ ಕೆರೆಯಲ್ಲಿ ಹೆಂಗಸರ ಸೀರೆಯನ್ನು ಬಲೆಯಂತೆ ಚೆಲ್ಲಿ ಮೀನು ಹಿಡಿಯುವುದನ್ನು ನೋಡಿದ್ದೆ! ಯಾವುದೋ ಸೀರೆಯನ್ನೊ, ಪಂಚೆಯನ್ನೊ ಅಥವಾ ಒಂದು ಹೊಸ ಬಲೆಯನ್ನೊ ತಂದು ಈ ಮಹಾಕಾರ್ಯಕ್ಕೆ ಇಳಿದು ಬಿಡುವ ಯೋಚನೆ ನನ್ನಲ್ಲಿತ್ತು ಅಂದುಕೊಂಡ್ರಾ? ಇಲ್ಲ, ಖಂಡಿತ ಇಲ್ಲ! ಅದೆಂತಹ ಫಿಶಿಂಗ್? ಮೀನು ತಿನ್ನುವ ಚಪಲಕ್ಕೆ ಅರ್ಜೆಂಟಾಗಿ ಮಾಡಿಕೊಂಡ ಅನುಕೂಲಗಳವು. ನನ್ನ ಉದ್ದೇಶ ಬೇರೆಯದೇ ಆಗಿತ್ತು. ಗಾಳವನ್ನು ಹರಡಿಕೊಂಡು, ನೀರಿನ ಹಳ್ಳದ ದಡದ ಮೇಲೆ ಕೂತುಕೊಂಡು, ಹೀಗೆ ಮೌನವಾಗಿ ಯೋಚಿಸುತ್ತ, ಚಿಂತಿಸುತ್ತ, ಜೋಡಿ ಜೋಡಿಯಾಗಿ ಅಲೆಯುವ ಮೀನುಗಳನ್ನು ಕಣ್ ತುಂಬಿಕೊಳ್ಳುತ್ತಾ ಢಮಕ್ ಅಂತ ಗಾಳಕ್ಕೆ ಬೀಳುವ ಮೀನನ್ನು ಪಟ್ಟಂತೆ ಮೇಲೆಸೆದು ಅದನ್ನು ನೋಡಿ ಮತ್ತೆ ನೀರಿಗೆ ಬಿಡುವುದು. ಮೀನು ಹಿಡಿಯುವ ಕ್ರಿಯೆಯಲ್ಲೇ ಆನಂದ ಪಡೆಯುವುದು ನನ್ನ ಉದ್ದೇಶವಾಗಿತ್ತು.
Related Articles
Advertisement
ಕಟ್ಟಿ, ಬಿಚ್ಚಿ, ಎಳೆದಾಡಿ, ಕೂರಿಸಿ ಹೇಗೊ ಮಾಡಿ ಒಂದು ಗಾಳ ರೆಡಿ ಮಾಡಿದೆವು. ತೇಜಸ್ವಿಯವರು ಗಾಳದ ತುದಿಗೆ ಹುಳುವನ್ನು ಚುಚ್ಚುವುದನ್ನು ಓದಿದ್ದೆ. ನಾನು ಮಿರಾಶಿಗೆ ಅವುಗಳನ್ನು ಈಗ ಎಲ್ಲಿ ಹುಡುಕುವುದು ಎಂದೆ. ಅವನಿಗೂ ಕಸಿವಿಸಿಯಾಯ್ತು ಅನಿಸುತ್ತೆ. ನಾನು ಶೃಂಗೇರಿಯಲ್ಲಿ ಮೀನುಗಳಿಗೆ ಪುರಿ ಹಾಕುವುದನ್ನು ನೋಡಿದ್ದೆ. ನಾವು ಒಂದಿಷ್ಟು ಪುರಿ, ಪಪ್ಸ್, ಚಿಪ್ಸ್, ಗೋಬಿ ಮುಂತಾದ ತರಹೇವಾರಿ ತಿಂಡಿಗಳನ್ನು ಕಟ್ಟಿಸಿಕೊಂಡು ಹೊರಡುವ ತಯಾರಿ ಮಾಡಿದೆವು. ಸಂಜೆ ನಾಲ್ಕು ಗಂಟೆಗಾಗಲೇ ಊರಿನ ಬಳಿಯ ದೊಡ್ಡಕೆರೆಯ ಹತ್ತಿರ ನಮ್ಮ ತಿಂಡಿಗಳು ಮತ್ತು ಗಾಳದೊಂದಿಗೆ ಹಾಜರಿದ್ದೆವು.
“ಏನೊ ಮಿರಾಶಿ ಒಂದೂ ಮೀನು ಕಾಣ್ತಿಲ್ಲವಲ್ಲೊ’ ಅಂದೆ. “ಲೋ ಮೀನು ಇರೋದು ನೀರೊಳಗೆ, ನೀರಿನ ಮೇಲೆಲ್ಲ ತಿಂಡಿ ಎಸೆದ್ರೆ ಹೇಗೆ ಬರ್ತಾವೆ ನೋಡು’ ಅಂದ. ನಾನು ನನ್ನ ಕೈಯಲ್ಲಿದ್ದ ಪುರಿ ತಗೆದುಕೊಂಡು ಒಂದಿಷ್ಟನ್ನು ನೀರಿಗೆ ಎಸೆದೆ! ತೇಲಿದ ಪುರಿ ತಿನ್ನಲು ಆ ಕಡೆ ಈ ಕಡೆ ಈಜಿ ಹೋದವೇ ಹೊರತು ಒಂದು ಮೀನೂ ನಮ್ಮ ಕಡೆ ಬರಲಿಲ್ಲ. ಕೊನೆಗೆ ಗೋಬಿಯ ಒಂದು ತುಂಡನ್ನು ಗಾಳದ ಕೊಕ್ಕೆಗೆ ಸಿಕ್ಕಿಸಿ ನೀರಿನಲ್ಲಿ ಬಿಟ್ಟು ಕುಳಿತುಕೊಂಡೆವು. “ಹೋಗು, ನೀನು ಒಂದಿಷ್ಟು ಸೌದೆ ಎತ್ತಿಕೊಂಡು ಬಾ, ಮೀನು ಸುಡಬೇಕು’ ಅಂದ ಮಿರಾಶಿ. “ಇಲ್ಲ ಇಲ್ಲ, ಮೀನು ನಾನೇ ಹಿಡಿತೀನಿ ನೀನು ಹೋಗು’ ಅಂದೆ. “ನಿಂಗೆ ಹಿಡಿಯೋಕೆ ಬರಲ್ಲ ಹೋಗು’ ಅಂದ. “ಇಲ್ಲ ಇಲ್ಲ, ನಾನು ಇದರ ಬಗ್ಗೆ ಓದಿಕೊಂಡಿದ್ದೀನಿ ನನಗೆ ಗೊತ್ತಿದೆ’ ಅಂದೆ.
ಕೋಪದಲ್ಲೇ ಎದ್ದು ಹೋದ. ಗಾಳ ಹಿಡಿದುಕೊಂಡು ಕೂತೆ. ಮುಂದೆ ಬಂಡೆಗೆ ಸೇರಿದಂತೆ ಮುಕ್ಕಾಲು ಪಾಲು ಆವರಿಸಿದ ನೀರು, ಏಕಾಂತ, ಸಂಜೆಯ ತಣ್ಣನೆ ಗಾಳಿ, ವಾಕ್ ಹೊರಟ ಅಲೆಗಳು, ದೂರದಲ್ಲಿ ಈಜುತ್ತಿದ್ದ ಬೆಳ್ಳಕ್ಕಿಗಳು, ಮೇಲೆ ಮನೆ ಕಡೆಯ ಹಾದಿ ಹಿಡಿದಿದ್ದ ಬಣ್ಣ ಬಣ್ಣದ ಹಕ್ಕಿಗಳು ಎಂತಹ ಸುಂದರ ದೃಶ್ಯ ಇದು. ಕುವೆಂಪು, ತೇಜಸ್ವಿಯವರದು ಯಾಕೆ ಆ ಪರಿಯ ವ್ಯಕ್ತಿತ್ವದ ರೂಪುಗೊಂಡಿದ್ದು ಅಂತ ಗೊತ್ತಾಗತೊಡಗಿತು. ನನ್ನಲ್ಲಿ ಆ ಏಕಾಂತಕ್ಕೆ ಹಲವು ಯೋಚನೆಗಳು ಆರಂಭವಾದವು. ಪ್ರಕೃತಿಯೊಂದಿಗೆ ಬೆರೆತು ಹೋದೆನಾ? ಗೊತ್ತಿಲ್ಲ. ಕೈಯೊಳಗೆ ಗಾಳವಿದೆ. ತಾನು ಹಿಡಿಯಲು ಬಂದಿರುವುದು ಮೀನು ಅನ್ನುವುದು ಕೂಡ ನನಗೆ ಅರಿವಿಲ್ಲದಂತೆ ಅಲ್ಲಿನ ಪರಿಸರದಲ್ಲಿ ಮುಳುಗಿ ಹೋದೆ. ಹಾಗೆ ಎಷ್ಟು ಹೊತ್ತು ಕಳೆದೆನೋ ಗೊತ್ತಿಲ್ಲ.
ಕೈಯೊಳಗಿನ ಗಾಳ ಮಿಸಕಾಡಿದಂತಾಯ್ತು. ರಪ್ಪನೆ ನನ್ನ ಮೀನು ಹಿಡಿಯುವ ಪ್ರಪಂಚಕ್ಕೆ ಬಂದು ಬೀಳುವ ಹೊತ್ತಿಗೆ ಮೀನೊಂದು ಗೋಬಿಯ ತುಂಡು ಕಚ್ಚಿಕೊಂಡು ಹೋಗುವುದನ್ನು ಕಂಡೆ! ಗಾಳವನ್ನು ಮೇಲೆತ್ತಿದೆ. ಗಾಳದ ತುದಿ ಖಾಲಿ ಖಾಲಿ.
ಅದೇ ಹೊತ್ತಿಗೆ ಸೌದೆೆ ಹೊತ್ತುಕೊಂಡ ಬಂದ ಮಿರಾಶಿ. “ಎಷ್ಟು ಸಿಕೊÌ!?’ ಅಂದ. ನನ್ನ ಮುಖವನ್ನು ನೋಡಿಯೇ ತೀರ್ಮಾನಿಸಿ ಬಿಟ್ಟ. “ನನಗೆ ಗೊತ್ತಿತ್ತು, ನಿನ್ನಿಂದ ಇದು ಆಗಲ್ಲ ಅಂತ’ ಅಂದು ನನ್ನನ್ನು ಎಬ್ಬಿಸಿದ. ಅವನೇ ಕೂತು ಮತ್ತೂಂದು ತುಂಡು ಗೋಬಿ ಚೂರನ್ನು ಕೊಕ್ಕೆಗೆ ಸಿಕ್ಕಿಸಿ ಗಾಳ ಚೆಲ್ಲಿ ಕೂತ. ನಾನು ಅವನ ಪಕ್ಕ ಸುಮ್ಮನೆ ಕೂತೆ. ತಂದ ತಿನಿಸುಗಳನ್ನು ತಿನ್ನುತ್ತ, ಮಾತಾಡುತ್ತ ಕುಳಿತುಕೊಂಡೆವು. “ಮಾತಿರಲಿ, ಗಾಳದ ಕಡೆ ಗಮನ ಕೊಡು’ ಅಂದೆ. “ನಂಗೆಲ್ಲ ಗೊತ್ತಾಗುತ್ತೆ ನೀ ಸುಮ್ನೆ ತಿನ್ನು’ ಅಂದ. ಅರ್ಧ ಗಂಟೆಯಾದರೂ ಮೀನು ಬೀಳದೆ ಇರುವುದಕ್ಕೆ ಗಾಳವನ್ನು ಎತ್ತಿ ನೋಡಿದರೆ ಅಲ್ಲಿ ಗೋಬಿಯ ತುಣುಕೇ ಇರಲಿಲ್ಲ. ಏನೋ, ಕಾಲ ಬದಲಾದಂತೆ ಮೀನುಗಳು ಕೂಡ ತುಂಬಾ ಬುದ್ಧಿವಂತ ಆಗಿರಬೇಕು ಅಂದೆ. ಅವನ ಮುಖವೂ ಪೆಚ್ಚಾಗಿತ್ತು. ಇನ್ನೊಮ್ಮೆ ಅದೇ ಪ್ರಯತ್ನ ಮಾಡಿದೆವು. ನಮ್ಮ ಅದೃಷ್ಟಕ್ಕೆ ಒಂದೇ ಒಂದು ಸಣ್ಣ ಮೀನು ಕೂಡ ಸಿಗಲಿಲ್ಲ. ಸಂಜೆ ಕಳೆದು ರಾತ್ರಿ ಆವರಿಸ ತೊಡಗಿತು. ಮನೆಯ ಕಡೆ ಹೆಜ್ಜೆ ಹಾಕದೇ ವಿಧಿ ಇರಲಿಲ್ಲ. ಮಿರಾಶಿ ತಂದು ಹಾಕಿದ್ದ ಸೌದೆ ಮಿರಾಶಿಯನ್ನು ಅಣಕಿಸಿದಂತಿತ್ತು. ಇಬ್ಬರು ಪರಸ್ಪರ ಬೈದುಕೊಂಡು ನಮ್ಮ ಅಸಹಾಯಕತೆಯನ್ನು ಮುಚ್ಚಿಕೊಂಡು ಬಂದೆವು.
ಪ್ರಕೃತಿಯೇ ಹಾಗೆ ಅನಿಸಿತು! ಅದು ಎಷ್ಟೊಂದು ನಿಗೂಢ, ಕುತೂಹಲಕಾರಿ. ಅಲ್ಲಿ ಯಾವುದೂ ಪುಸ್ತಕದ ಮೇಲಿರುವಂತೆ ನಡೆಯುವುದಿಲ್ಲ. ಕೇವಲ ಒಂದೇ ಒಂದು ಸಂಜೆಗೆ ಸಾಕು ಅನಿಸಿದ ಕಾರ್ಯದಿಂದ ತೇಜಸ್ವಿಯವರ ತಾಳ್ಮೆಯ ಅರಿವಾಯ್ತು. ಅವರ ಹತ್ತುಹಲವು ಪ್ರಯೋಗಗಳು ಪ್ರಕೃತಿಯೊಂದಿಗೆ ಬೆರೆತಂಥವು. ಪ್ರಕೃತಿ ಬಯಸುವುದು ತಾಳ್ಮೆಯನ್ನು. ಅದು ಧ್ಯಾನ ಸ್ಥಿತಿ. ಅಲ್ಲಿ ಮುಳುಗಿದವನಿಗೆ ಮಾತ್ರ ಆಳದ ಮುತ್ತುಗಳು ಸಿಗಲು ಸಾಧ್ಯ!
ಸದಾಶಿವ ಸೊರಟೂರು