Advertisement
ಆದರೆ ಇಂದು ನಾವು ಹೊಟೇಲ್‌ಗೆ ಹೋದರೆ ಅಲ್ಲಿನ ಚಿತ್ರಣವೇ ಬೇರೆಯಾಗಿರುತ್ತದೆ. ಹರಟೆ ಹೊಡೆಯುತ್ತ ಕಾಲಕಳೆಯಲು, ಕಾಫಿ ಹೀರಲು ನಮಗೆ ಅಲ್ಲಿ ಸಾಕಷ್ಟು ಸಮಯ ಸಿಗೋದಿಲ್ಲ. ಆರಾಮದಲ್ಲಿ ತಿಂಡಿ ತಿನ್ನುವ ಎಂದರೂ ಅದಕ್ಕೆ ಅವಕಾಶವಿಲ್ಲ. ಪಕ್ಕದಲ್ಲೇ ನಾಲ್ಕೈದು ಜನ ಸೀಟಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಯಾವಾಗ ನಾವು ಎದ್ದು ಹೋಗುತ್ತೇವೆ? ಯಾವಾಗ ಅವರು ಈ ಸೀಟಿನಲ್ಲಿ ಕೂತು ಕೊಳ್ಳುವುದು ಎಂದು. ಹಾಗಾಗಿ, ಈಗ ಹೋಟೇಲ್‌ಗೆ ಹೋದರೆ ಶಾಂತಿ, ಸಮಾಧಾನಗಳ ಬದಲು ಬರೀ ಕಿರಿಕಿರಿ ಉಂಟಾಗುತ್ತವೆ. ನಾವು ನೆಮ್ಮದಿಯಿಂದ ತಿನ್ನಲು ಇತರ ಗ್ರಾಹಕರು ಬಿಡೋದಿಲ್ಲ. “ಆಯ್ತಾ,? ಆಯ್ತಾ?’ ಎಂದು ನಮ್ಮ ಶಾಂತಿ ಕದಡುತ್ತಾರೆ. ನಾವೇನು ಆ ಹೊಟೇಲ್‌ನಲ್ಲಿ ಶಾಶ್ವತವಾಗಿ ಇರಲು ಬಂದವರಾ!
Related Articles
Advertisement
ನಾರ್ತ್ ಇಂಡಿಯನ್ ಫುಡ್ ಆರ್ಡರ್ ಮಾಡಿದಾಗ ನಾವು ಕೇಳದೆ ಇದ್ದರೂ ಸ್ವಲ್ಪ ನೀರುಳ್ಳಿ , ಮುಳ್ಳುಸೌತೆ ತುಂಡುಗಳು ಬಂದು ನಮ್ಮೆದುರಿನ ಪ್ಲೇಟ್‌ಗಳಲ್ಲಿ ವಿಜೃಂಭಿಸುತ್ತವೆ. ಈ ಸಪ್ಲಾಯರ್ ಎಷ್ಟು ಒಳ್ಳೆಯವನು, ಈ ಹೊಟೇಲ್‌ನವರು ಎಷ್ಟು ಒಳ್ಳೆಯವರು ಎಂದು ನಾವು ಮನಸ್ಸಿನಲ್ಲೇ ಅವರನ್ನು ಹೊಗಳುತ್ತೇವೆ. ಆದರೆ, ಬಿಲ್ಲು ಬಂದಾಗ ನಮ್ಮ ಮುಖದಲ್ಲಿನ ಸಂತೋಷ ಮಾಯವಾಗುತ್ತದೆ. ನೀರುಳ್ಳಿ, ಮುಳ್ಳುಸೌತೆ ತುಂಡುಗಳ ಛಾರ್ಜು ಬಿಲ್ಲಲ್ಲಿ ಪ್ರತ್ಯಕ್ಷವಾಗಿರುತ್ತವೆ!
ಮಾಣಿಗೆ ವೆಯ್ಟರ್ ಅಂತ ಕೂಡ ಕರೆಯುತ್ತಿದ್ದರು. ಈಗ ಆ ಹೆಸರಿನಿಂದ ಕರಿಯುವುದು ಭಾರೀ ಕಡಿಮೆ. ಯಾಕೆಂದರೆ, ಈಗ ಆರ್ಡರ್ ಕೊಟ್ಟು ಸುಮಾರು ಅರ್ಧ ಗಂಟೆ ಕಾಯಬೇಕಾಗುವುದು ನಾವು. ಹೀಗಿರುವಾಗ ಮಾಣಿ ವೆಯ್ಟರ್ ಆಗಲು ಹೇಗೆ ಸಾಧ್ಯ?
ಅನೇಕ ಬಾರಿ ಮಾಣಿಗೆ ಹೊಟೇಲಿನಲ್ಲಿ ಮಾಡುವ ತಿಂಡಿ, ಪದಾರ್ಥಗಳ ಬಗ್ಗೆ ಸಾಮಾನ್ಯ ಜ್ಞಾನವೂ ಇರೋದಿಲ್ಲ. ಮೆನುಕಾರ್ಡ್ ನೋಡಿ ಹೀಗೆಂದರೆ ಏನು? ಅದು ಸ್ವೀಟಾ? ಖಾರವಾ? ಎಂದರೆ ಅವನು “ಮೀಡಿಯಂ’ ಎಂದು ರೆಡಿಮೇಡ್ ಉತ್ತರ ನೀಡುತ್ತಾನೆ. ಇದರಲ್ಲಿ ಅವನ ತಪ್ಪು ಇಲ್ಲ ಬಿಡಿ. ಅವನಿಗೆ ತಿನ್ನಲು ಕೊಟ್ಟರೆ ತಾನೆ ಅವನಿಗೆ ಅದರ ರುಚಿ ಏನು ಎಂದು ತಿಳಿಯುವುದು?
ಒಮ್ಮೆ ನಾನು, “”ಏನಯ್ಯ, ಹೊಟೇಲಲ್ಲಿ ಇದ್ದೂ ನಿನಗೆ ಅದು ಸ್ವೀಟೋ, ಖಾರವೋ ಎಂದು ಗೊತ್ತಿಲ್ಲವಲ್ಲ?” ಎಂದಾಗ ಆತ, “”ಸಾರ್, ನೀವು ಕನ್ನಡ ಮೇಷ್ಟ್ರು… ಹೋಗಿ ಲೆಕ್ಕ ಪಾಠ ಮಾಡಿ ಅಂದ್ರೆ ನೀವು ಏನು ಮಾಡ್ತೀರಿ? ನಮಗೆ ಇಲ್ಲಿ ತಿಂಡಿ ಬಗ್ಗೆ ತರಬೇತಿ ಏನೂ ಇಲ್ಲ. ಹೇಳಿದ ಕೆಲಸ ಮಾಡೋದು ಅಷ್ಟೇ” ಎಂದಾಗ ನನಗೂ ಹೌದಲ್ಲ ಅನಿಸಿತು.
ಅಶೋಕ್ ಕುಮಾರ್