Advertisement

ಪ್ರಬಂಧ: ಬೌ ಬೌ!

07:16 PM Sep 28, 2019 | mahesh |

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ - ಜಿ. ಪಿ. ರಾಜರತ್ನಂರವರ ಈ ಸುಪ್ರಸಿದ್ಧ ಮಕ್ಕಳ ಪದ್ಯ ಬಾಲ್ಯದಲ್ಲಿ ಎಲ್ಲರೂ ಗುನುಗುನಿಸುತ್ತಿದ್ದ ಕವನ. ಹಳ್ಳಿಗಳಲ್ಲಿ ನಾಯಿ ಇಲ್ಲದ ಮನೆಯೇ ಇಲ್ಲ. ಪಟ್ಟಣಗಳ ಮನೆಗಳಲ್ಲಿ ನಾಯಿ ಸಾಕಿರುತ್ತಾರೆ, ಗೇಟ್‌ ಎದುರಲ್ಲಿ “ನಾಯಿ ಇದೆ, ಎಚ್ಚರಿಕೆ’ ಎಂಬ ಫ‌ಲಕವನ್ನೂ ತೂಗಿಸಿರುತ್ತಾರೆ. ಕೆಲವರು ನಾಯಿ ಸಾಕದೆಯೇ, “ನಾಯಿ ಇದೆ, ಎಚ್ಚರಿಕೆ’ ಎಂಬ ಫ‌ಲಕವನ್ನು ಹಾಕಿಬಿಡುತ್ತಾರೆ! ನಾಯಿ ಇಲ್ಲದಿದ್ದರೇನಂತೆ, ಫ‌ಲಕದ ಬಲವಿದ್ದರೆ ಸಾಕು! ನಾಯಿ ಸಾಕುವುದು ಕಳ್ಳಕಾಕರಿಂದ ರಕ್ಷಣೆಗೆ ಎಂಬುದು ಒಂದು ಗ್ರಹಿಕೆ. ಆದರೆ, ಮುದ್ದು ಮಾಡಲೆಂದೇ ನಾಯಿ ಸಾಕುವವರೂ ಸಾಕಷ್ಟು ಮಂದಿ ಇದ್ದಾರೆ. ಶ್ರೀಮಂತರ ಮನೆಯಲ್ಲಿ ನಾಯಿಯಾಗಿ ಹುಟ್ಟುವುದೇ ಪುಣ್ಯ ಎಂದು ಹೇಳಿರುವುದರಲ್ಲಿ ಉತ್ಪ್ರೇಕ್ಷೆ ಇಲ್ಲ. ತಾಜಾ ಹಾಲು, ಬೇಯಿಸಿದ ಮೊಟ್ಟೆ, ಬಿಸಿ ಬಿಸಿ ಅನ್ನ, ಮೀನು ಸಾರು, ಪೆಡಿಗ್ರಿ, ಹಣ್ಣು ! ಬಿಸಿನೀರಲ್ಲಿ ಶ್ಯಾಂಪೂ-ಸಾಬೂನಿನಲ್ಲಿ ಸ್ನಾನ, ಮೈತುಂಬ ಪೌಡರಿನ ಘಮ ! ಯಾವ ಮನುಷ್ಯನಿಗೆ ಈ ಭಾಗ್ಯ ಇದೆ ಹೇಳಿ! ಮನುಷ್ಯರಿಗಿಂತ ಅಂದ-ಚಂದದ ಹೆಸರನ್ನು ನಾಯಿಗಳಿಗೇ ಇಡುತ್ತಾರೆ : ಜೂಲಿ, ಸ್ಕೂಬಿ, ರಾಕಿ, ರೆಬೆಲ್, ಪಿಂಕಿ, ರೂಬಿ !

Advertisement

ನಾಯಿಯ ಹೆಸರಿನ ಕುರಿತು ಹೇಳುವಾಗ ನನಗೊಂದು ನಗುವ ಪ್ರಸಂಗ ನೆನಪಾಗುತ್ತಿದೆ. ನಮ್ಮ ಮನೆಗೆ ಪ್ರತಿದಿನ ಸನಿ ಹದ ಮನೆಯವರೊಬ್ಬರ ನಾಯಿಯೊಂದು ಬರುತ್ತಿತ್ತು. ರಾತ್ರಿ-ಹಗಲು ನಮ್ಮ ಮನೆಬಿಟ್ಟು ಕದಲುತ್ತಿರಲಿಲ್ಲ . ನಾಯಿಯ ಯಜಮಾನ ಅದನ್ನು ಕರೆದುಕೊಂಡು ಹೋಗಲು ಆಗಾಗ್ಗೆ ಬರುತ್ತಿದ್ದರು. ಆ ನಾಯಿಯ ಹೆಸರು ನಮಗೆ ಗೊತ್ತಿರಲಿಲ್ಲ. ಹಾಗಾಗಿ, ಆ ನಾಯಿಗೆ ಮನೆಯ ಯಜಮಾನನ ಹೆಸರನ್ನೇ ಇಟ್ಟು ಕರೆಯುತ್ತಿದ್ದೆವು! ಆದರೆ, ಯಜಮಾನರು ಬಂದಾಗ ನಾವು ಹಾಗೆ ಕರೆಯುತ್ತಿರಲಿಲ್ಲ. ಒಮ್ಮೆ ಅವರು ನಮ್ಮ ಮನೆಗೆ ಬಂದು ನಾಯಿಯನ್ನು ಹುಡುಕಾಡಲಾರಂಭಿಸಿದರು. ಅದು ಸಿಗಲಿಲ್ಲ. ಆಗ, ನನ್ನ ಪುಟ್ಟ ಮಗಳು ಜೋರಾಗಿ, ಯಜಮಾನನರ ಹೆಸರು ಹಿಡಿದು ನಾಯಿಯನ್ನು ಕರೆಯಲಾರಂಭಿಸಿದಳು. ನಮಗೆಲ್ಲ ಮುಜುಗರವೆನಿಸಿತು. ನಾನು ಆಕೆಯ ಬಾಯಿಗೆ ಕೈ ಇಟ್ಟು ಕೊಂಡು ಒಳಗೆ ಕರೆದೊಯ್ದೆ. ಆ ನಾಯಿಯ ಯಜಮಾನರ ಕೂಡ ನಕ್ಕರು. ನಗದೆ ಇನ್ನೇನು ತಾನೆ ಮಾಡುವುದು! ಅಂತೂ ಪ್ರಸಂಗ ತಿಳಿಯಾಯಿತು.

ಒಮ್ಮೆ ಬಂಧುಗಳ ಮನೆಯಿಂದ ಎರಡು ಮುದ್ದಾಗಿದ್ದ ನಾಯಿಮರಿಗಳನ್ನು ತಂದಿದ್ದೆವು. ಎರಡೂ ಗಂಡು-ಹೆಣ್ಣು ಮರಿಗಳು. ಆ ಮರಿಗಳಿಗೆ ರಾಜಕೀಯ ಪಕ್ಷವೊಂದರ ಮುಖಂಡರ ಹೆಸರನ್ನು ಇಟ್ಟಿದ್ದರು. ಅದು, ನಾಯಿ ಮರಿಗಳ ಮೇಲಿನ ಅತಿ ಮಮತೆಯೋ ರಾಜಕೀಯ ಪಕ್ಷಗಳ ಮುಖಂಡರ ಮೇಲಿನ ಸಿಟ್ಟೋ, ಗೊತ್ತಾಗಲಿಲ್ಲ. ನಾವು ಕೂಡ ಆ ಹೆಸರುಗಳನ್ನು ಬದಲಾಯಿಸುವ ಗೋಜಿಗೆ ಹೋಗಲಿಲ್ಲ. ಆದರೆ, ಆಗಂತು ಕರ ಮುಂದೆ ನಾಯಿಗಳನ್ನು ಹೆಸರು ಹಿಡಿದು ಕರೆಯಲು ಸಂಕೋಚ ಎನ್ನಿಸುತ್ತಿತ್ತು.

ಒಮ್ಮೆ ಸಂಸದರೊಬ್ಬರು ನಮ್ಮ ಮನೆಯಲ್ಲಿ ಉಳಿಯಲು ಬಂದಿದ್ದರು. ಅವರೊಂದಿಗೆ ಹಿಂ-ಬಾಲಕರೂ ಇದ್ದರು. ಆಗ ನಾನು ನಾಯಿಯನ್ನು ಹೆಸರು ಹಿಡಿದು ಕರೆಯಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊರಗೆ ತಿರುಗಾಡಲು ತೆರಳುವ ನಾಯಿಗಳು ಹೆಸರು ಹಿಡಿದು ಕರೆಯದೆ ಮರಳಿ ಬರುತ್ತಿರಲಿಲ್ಲ.
ನಮ್ಮ ಮನೆಯಲ್ಲಿದ್ದ ಒಂದು ನಾಯಿಗಂತೂ ಚಪ್ಪಲಿ ಎಗರಿಸಿಕೊಂಡು ಹೋಗುವ ಬುದ್ಧಿಯಿತ್ತು.

ನಮ್ಮ ಮನೆಯಲ್ಲಿ ಅತಿಥಿಗಳು ಬಂದು ಹೊರಗೆ ರಾಶಿ ರಾಶಿ ಚಪ್ಪಲಿಗಳಿದ್ದರೆ ಅಂದು ಅದಕ್ಕೆ ಹಬ್ಬ ! ಒಮ್ಮೆಯಂತೂ ನಮ್ಮ ಮನೆಗೆ ಬಂದಿದ್ದ ಸೇಲ್ಸ್‌ ಹುಡುಗಿಯ ಕೈಯಲ್ಲಿದ್ದ ಪರ್ಸ್‌ನ್ನು ಹಾರಿಸಿಕೊಂಡು ಹೋಗಿತ್ತು. ಅಂದು ಮನೆಯವರೆಲ್ಲರೂ ಆಕೆಯ ಪರ್ಸ್‌ ಹುಡುಕುವುದೇ ದೊಡ್ಡ ಕೆಲಸವಾಗಿತ್ತು.

Advertisement

ನಾನು ಮದುವೆಯಾಗಿ ಬಂದ ಮೇಲೆ ಈ ಮನೆಯಲ್ಲಿ ಹತ್ತು-ಹನ್ನೊಂದು ನಾಯಿಗಳು ಬದಲಾಗಿರಬಹುದು. ಮೂರೂ ಹೊತ್ತು ನಾಯಿಗಳಿಗೆ ಊಟ ಹಾಕುವುದು ನಾನೇ. ನಿಜ ಹೇಳಬೇಕೆಂದರೆ, ನನಗೆ ನಾಯಿಗಳನ್ನು ಕಂಡರಾಗುವುದಿಲ್ಲ. ನಮ್ಮ ಜನ್ಮನಕ್ಷತ್ರಕ್ಕೆ ಅನುಗುಣವಾಗಿ ನಮಗೆ ಇಷ್ಟ ಇರುವ ಮತ್ತು ಇಷ್ಟ ಇಲ್ಲದ ಪ್ರಾಣಿಗಳಿರುತ್ತವೆ. ನನ್ನ ಜನ್ಮ ನಕ್ಷತ್ರದ ಪ್ರಕಾರ ನನಗೆ ಆಗದ ಪ್ರಾಣಿ ನಾಯಿ. ಕೆಲವರಂತೂ ನನ್ನನ್ನು ಕಂಡರೆ ನಾಯಿ ಹೆಚ್ಚು ಬೊಗಳುವುದು ಅನ್ನುತ್ತಾರೆ. ಇನ್ನು ಕೆಲವರನ್ನು ಕಂಡರೆ ನಾಯಿ ಬಾಲ ಅಲ್ಲಾಡಿಸಿ ತೆಪ್ಪಗಾಗುತ್ತದೆ. ನಾಯಿಗೂ ಮನುಷ್ಯನಿಗೂ ವಿಶಿಷ್ಟವಾದ ಸಂಬಂಧ! ನಮ್ಮ ತೋಟದ ಬೆಳೆಗಳಾದ ಕೊಕ್ಕೊ, ಬಾಳೆ, ಹಲಸುಗಳನ್ನು ತಿನ್ನಲು ಕಾಡಿನಿಂದ ಕೋತಿಗಳು ಧಾವಿಸಿ ಬರುವುದು ತೀರಾ ಸಾಮಾನ್ಯ. ಅವುಗಳನ್ನು ಹೆದರಿಸಿ ಅಟ್ಟಿಸಿ ಓಡಿಸಲು ನಾಯಿಗಳು ಬೇಕೇಬೇಕು. ನಾವೊಮ್ಮೆ ಒಳ್ಳೆ ತಳಿಯ ಜರ್ಮನ್‌ ಶೆಫ‌ರ್ಡ್‌ ನಾಯಿಯನ್ನು ಸಾಕಿದ್ದೆವು. ಅದು ಗಡದ್ದಾಗಿ ಉಂಡು ತಿಂದು ಮಲಗಿ ಗೊರಕೆ ಹೊಡೆಯುತ್ತಿತ್ತು. ಮಂಗ ಓಡಿಸುವ ಕೆಲಸ ಅದರ ಘನತೆಗೆ ಕುಂದು ಎಂದು ಭಾವಿಸಿರಬೇಕು. ಮಂಗಗಳು ಮೈಮೇಲೆ ಓಡಾಡಿದರೂ ಅದು ನಿರ್ಲಿಪ್ತ ಸಂನ್ಯಾಸಿಯ ಭಾವದಲ್ಲಿರುತ್ತಿತ್ತು. ಆಮೇಲೆ ಸಾಮಾನ್ಯ ಜಾತಿಯ ನಾಯಿಯೊಂದನ್ನು ಸಾಕಿದೆವು. ಅದು ಅಡ್ಡಿಯಿಲ್ಲ. ತೋಟವಿಡೀ ಓಡಾಡಿ ಮಂಗಗಳನ್ನು ಓಡಿಸುತ್ತಿರುತ್ತದೆ. ನಾಯಿಗಳು ಮೇಲ್ನೋಟಕ್ಕೆ ನಾಯಿಗಳೇ. ಆದರೆ, ಪೇಟೆಯ ನಾಯಿಗಳೇ ಬೇರೆ, ಹಳ್ಳಿಯ ನಾಯಿಗಳೇಬೇರೆ.

ಪತ್ರಿಕೆಗಳಲ್ಲಿ “ನಾಯಿ ಕಾಣೆಯಾಗಿದೆ’ ಎಂಬ ಜಾಹೀರಾತನ್ನು ಕಂಡಿದ್ದೇನೆ. ನಾಯಿಗಳಿಗೆ ಮನುಷ್ಯರಷ್ಟೇ ಪ್ರಾಮುಖ್ಯ ಕೊಡುವವರಿದ್ದಾರೆ. ಎಂಥ ಕಾಲ ನೋಡಿ !

ನಮ್ಮ ಪರಿಚಯದವರೊಬ್ಬರು ಸಾವಿರಾರು ರೂಪಾಯಿ ಹಣ ಕೊಟ್ಟು ನಾಯಿಯೊಂದನ್ನು ತಂದು ಸಾಕುತ್ತಿದ್ದರು. ಅದು ಮರಿ ಹಾಕಲಿಲ್ಲ. ಕೊನೆಗೆ ಅದನ್ನು ಮಾರಾಟ ಮಾಡಲೆಂದು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರು. ಕರೆಗಳ ಸುರಿಮಳೆಯೇ ಬಂತು. ಒಬ್ಬೊಬ್ಬರ ಪ್ರಶ್ನೆಗಳಿಗೆ ಉತ್ತರಿಸಿಯೇ ಅವರಿಗೆ ಸಾಕು ಬೇಕಾಯಿತಂತೆ. ಒಬ್ಬರಂತೂ ಪೋನ್‌ ಮಾಡಿ, “ನಾಯಿ ಬೊಗಳುತ್ತದೆಯೆ?’ ಎಂದು ಕೇಳಿದರಂತೆ. ಇವರು ತಾನೆ ಏನು ಹೇಳಿ ಯಾರು! ನಾಯಿ ಬೊಗಳದಿರುತ್ತದೆಯೆ? ಬೊಗಳದಿರುವುದು ನಾಯಿಯೆ? ಇವರಿಗೆ ನಗು ತಡೆಯಲಾಗಲಿಲ್ಲವಂತೆ. ಆಗ ಆ ಕಡೆಯವರು ನಗುತ್ತ, “ಹಾಗಲ್ಲ, ನಾಯಿ ತುಂಬ ಬೊಗಳ್ತದ ಅಂತ ಕೇಳಿದೆ’ ಎಂದರಂತೆ. ನಾಯಿಯ ಬೊಗಳುವಿಕೆಯ ಸ್ವರ ಹೇಗಿದೆ? ದೊಡ್ಡದಾ, ಸಣ್ಣದಾ? ಎಂದು ಕೇಳಿದವರಿದ್ದಾರೆ. ತುಂಬ ತಿನ್ನುತ್ತದೆಯೆ ಎಂದು ಕೆಲವರ ಪ್ರಶ್ನೆ. ಕೊನೆಗೆ ಗಿರಾಕಿಗಳೇ ಸಿಗದೆ, ನಾಯಿ ಅವರ ಮನೆಯಲ್ಲಿಯೇ ಉಳಿಯಿತು.

ನಾಯಿ ಅತಿಯಾದ ಸೂಕ್ಷ್ಮ ಮತ್ತು ನಿಯತ್ತಿನ ಪ್ರಾಣಿ. ಮಳೆಗಾಲದಲ್ಲಿ ಗುಡುಗಿನ ಶಬ್ದ ಜೋರಾದರೆ ಹೆದರಿ ಮನೆಯೊಳಗಡೆ ಬರುವ ನಾಯಿಗಳಿವೆ. ಮನೆಯಲ್ಲಿ ಕೋಳಿ, ಬೆಕ್ಕು, ದನ, ಆಡು, ಹಂದಿ ಮುಂತಾದ ಪ್ರಾಣಿಗಳ ರಕ್ಷಣೆಯನ್ನೂ ಮನೆಯ ನಾಯಿ ವಹಿಸುವುದಿದೆ. ಬೊಗಳುವ ನಾಯಿ ಕಚ್ಚುವುದಿಲ್ಲ ಎಂಬ ಮಾತಿದೆ. ಇದರ ಧ್ವನ್ಯರ್ಥವೇನೇ ಇರಲಿ, ನೇರವಾದ ಅರ್ಥದಲ್ಲಿಯೂ ಇದು ನಿಜವೇ. ನನ್ನ ಗೆಳತಿಯೊಬ್ಬಳಿಗೆ ಬೆಂಗಳೂರಿನ ರಸ್ತೆಯಲ್ಲಿ ನಡೆಯುತ್ತಿದ್ದಾಗ ಯಾವುದೋ ನಾಯಿಯೊಂದು ಬಂದು ಅಚಾನಕ್ಕಾಗಿ ಕಚ್ಚಿಬಿಟ್ಟಿತು. ಕಚ್ಚುವ ಮುನ್ನ ಅದು ಬೊಗ ಳಿದ್ದೇ ಇಲ್ಲ. ಹೊಕ್ಕಳ ಸುತ್ತ ವಾರಕ್ಕೊಂದರಂತೆ ಎಂಟು ಇಂಜೆಕ್ಷನ್‌ ತೆಗೆದುಕೊಂಡು ತುಂಬಾ ಯಾತನೆ ಪಟ್ಟಿದ್ದಳು. ಪಟ್ಟಣ ಪ್ರದೇಶಗಳಲ್ಲಿ ನಾಯಿಗಳ ಹಾವಳಿ ತುಂಬ. ಪ್ರಾಣಿದಯಾಸಂಘದವರು ಬೀಡಾಡಿ ನಾಯಿಗಳಿಗೆ ಊಟ ಹಾಕಿ ಸಲಹುತ್ತಾರೆ. ನಾಯಿ ಮನೆಯ ಸಾಕುಪ್ರಾಣಿ ನಿಜವೇ. ಅದು ಬೀದಿ ಪ್ರಾಣಿ ಎಂಬುದು ಅಷ್ಟೇ ನಿಜ.

ಕೆಲವರ ಮನೆಯೊಳಗಡೆ ನಾಯಿಗಳಿಗೆ ಓಡಾಡುವ ಅವಕಾಶವಿದೆ. ನಮ್ಮ ಪಕ್ಕದ ಮನೆಯಲ್ಲಿ ಮುದ್ದು ಮಾಡಲೆಂದೇ ಪ್ರೀತಿಯಿಂದ ಸಾಕಿದ ಏಳೆಂಟು ಪಮೋರಿಯನ್‌ ನಾಯಿಗಳಿವೆ. ಅವುಗಳು ಮನೆಯ ಸದಸ್ಯರಂತೆ ಒಳಗಡೆಯೇ ಎಲ್ಲೆಂದರಲ್ಲಿ ಹಗಲಿಡೀ ಓಡಾಡಿಕೊಂಡು ಇರುತ್ತವೆ. ನಾವು ಅವರ ಮನೆಗೆ ಹೋಗಬೇಕಾದರೆ ನಾಯಿಗಳನ್ನು ಕೋಣೆಯೊಳಗೆ ಹಾಕಿ ಅಂತ ದೂರವಾಣಿ ಮೂಲಕ ಪೂರ್ವ ಭಾವಿಯಾಗಿ ಹೇಳಿಯೇ ಹೋಗಬೇಕು. ಅವುಗಳಿಗೂ ಮನೆಯೊಳಗೆ ಮನುಷ್ಯರಂತೆ ಒಂದೆರಡು ಪ್ರತ್ಯೇಕ ಕೋಣೆಗಳಿವೆ. ಅವು ಮಾತ್ರ ಕೋಣೆ ಯನ್ನು ಬಿಟ್ಟು ಸೋಫಾ, ದಿವಾನ, ಹಾಸಿಗೆ, ಕುರ್ಚಿ ಹೀಗೆ ಎಲ್ಲೆಂದರಲ್ಲಿ ಕುಳಿತು ಅಧ್ವಾನ ಮಾಡುತ್ತಿರುತ್ತವೆ. ಮನೆಯವರು ಸಂಜೆ ತಮ್ಮ ಸ್ವಂತ ವಾಹನದಲ್ಲಿ ಕರೆದುಕೊಂಡು ಅವುಗಳನ್ನು ಓಡಾಡಿಸುತ್ತಾರೆ. ಎಷ್ಟೋ ಮಂದಿ ಮನು ಷ್ಯರಿಗೆ ಕಾರಿನಲ್ಲಿ ಓಡಾಡುವ ಭಾಗ್ಯವಿಲ್ಲ!

ಮೂಕಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು, ನಿಜ. ಪ್ರೀತಿ ಸಹ್ಯವಾಗುವ ರೀತಿಯಲ್ಲಿದ್ದರೆ ಚೆನ್ನ. ಎಷ್ಟೇ ಪ್ರೀತಿ ತೋರಿಸಲಿ, ನಾವು ತೋರಿಸುವ ಪ್ರೀತಿಗಿಂತಲೂ ಅದು ಕೊಡುವ ನಿಯತ್ತು ಹೆಚ್ಚಿನದ್ದಾಗಿರುತ್ತದೆ.

ಸಂಗೀತ ರವಿರಾಜ್‌

Advertisement

Udayavani is now on Telegram. Click here to join our channel and stay updated with the latest news.

Next