ಬೆಂಗಳೂರು: “ಗೃಹಜ್ಯೋತಿ’ ಯೋಜನೆ ಅಡಿ ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರು ತಮ್ಮ ಮುಂಗಡ ಠೇವಣಿ ಮೇಲಿನ ಬಡ್ಡಿ ಪಡೆಯಬೇಕಾ? ಹಾಗಿದ್ದರೆ ನಿಮಗೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ವಿದ್ಯುತ್ ಬಳಸಿ. ಆ ಮೂಲಕ ಶೂನ್ಯಬಿಲ್‌ನಿಂದ ಹೊರಬನ್ನಿ. ನಿಮಗೆ ಬರಬೇಕಾದ ಬಡ್ಡಿ ಪಡೆದುಕೊಳ್ಳಿ!
– ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ತಮ್ಮ ಗ್ರಾಹಕರಿಗೆ ಇಂಥದ್ದೊಂದು ಅಲಿಖಿತ ಫರ್ಮಾನು ಹೊರಡಿಸುತ್ತಿವೆ.
“ಗೃಹಜ್ಯೋತಿ’ ಅಡಿ ರಾಜ್ಯದ ಪ್ರತೀ ಗ್ರಾಹಕನಿಗೆ 200 ಯೂನಿಟ್‌ವರೆಗೆ ಸರಕಾರ ಉಚಿತ ವಿದ್ಯುತ್ ನೀಡುತ್ತಿದೆ. ಇದರಡಿ 1.65 ಕೋಟಿ ಗ್ರಾಹಕರು ನೋಂದಣಿಯಾಗಿದ್ದಾರೆ. ಈ ಪೈಕಿ ಸರಿಸುಮಾರು 85 ಲಕ್ಷಕ್ಕೂ ಅಧಿಕ ಗ್ರಾಹಕರು ಸರಕಾರ ನಿಗದಿಪಡಿಸಿದ ಸರಾಸರಿ ಮಿತಿಯಲ್ಲೇ ವಿದ್ಯುತ್ ಬಳಕೆ ಮಾಡುತ್ತಿದ್ದು, ಪ್ರತೀ ತಿಂಗಳು ಶೂನ್ಯಬಿಲ್ ಪಡೆಯುತ್ತಿದ್ದಾರೆ. ಆದರೆ ಆ ವರ್ಗಕ್ಕೆ ವರ್ಷದ ಮೊದಲ ತ್ತೈಮಾಸಿಕದಲ್ಲಿ ನೀಡಲಾಗುವ ಮುಂಗಡ ಠೇವಣಿ ಮೇಲಿನ ಬಡ್ಡಿ ಇನ್ನೂ ಸಿಕ್ಕಿಲ್ಲ. ಅದನ್ನು ಪಡೆಯಬೇಕಾದರೆ ಈಗ ಅವರು ತಮ್ಮ ನಿಗದಿತ ಮಿತಿಯನ್ನು ಮೀರಿ ವಿದ್ಯುತ್ ಬಳಕೆ ಮಾಡುವ ಅನಿವಾರ್ಯ ಸೃಷ್ಟಿಯಾಗಿದೆ.
ಏಕೆಂದರೆ ಎಸ್ಕಾಂಗಳ ಬಳಿ ತಮ್ಮ ಗ್ರಾಹಕರ ಆರ್.ಆರ್. ಸಂಖ್ಯೆ ಹೊರತುಪಡಿಸಿ, ಬ್ಯಾಂಕ್ ಖಾತೆ ಸೇರಿದಂತೆ ಮತ್ತಾವುದೇ ಪೂರಕ ದಾಖಲೆಗಳು ಇರುವುದಿಲ್ಲ. ಹೀಗಿರುವಾಗ ಅವರ ಮುಂಗಡ ಠೇವಣಿಯ ಮೇಲಿನ ಬಡ್ಡಿ ಪಾವತಿಸುವುದು ಹೇಗೆ ಎಂಬ ಜಿಜ್ಞಾಸೆ ತಲೆದೋರಿದೆ. ಇದಕ್ಕಾಗಿ ಎಸ್ಕಾಂಗಳು ಮಾಡಿರುವ ಯೋಚನೆ ಇಷ್ಟೇ- ಈಗ ಶೂನ್ಯಬಿಲ್ ಪಡೆಯುತ್ತಿರುವವರು ಮುಂದೆ ಯಾವತ್ತಾದರೂ ಹೆಚ್ಚುವರಿ ವಿದ್ಯುತ್ ಬಳಕೆ ಮಾಡುತ್ತಾರೆ ಅಥವಾ ಬಡ್ಡಿ ಬೇಕಾದವರು ನಿಗದಿತ ಮಿತಿ ಮೀರಿ ಬಳಕೆ ಮಾಡುತ್ತಾರೆ. ಆಗ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿದರಾಯ್ತು ಎಂಬ ನಿರ್ಧಾರಕ್ಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಶೂನ್ಯಬಿಲ್ ಪಡೆಯುತ್ತಿರುವ ಬಳಕೆದಾರರ ಮುಂಗಡ ಠೇವಣಿ ಎಷ್ಟಿದೆ ಎಂಬ ಮಾಹಿತಿ ಎಸ್ಕಾಂಗಳ ಬಳಿ ಇಲ್ಲ. ಮತ್ತೂಂದೆಡೆ ವರ್ಷಕ್ಕೊಮ್ಮೆ ಬರುವ 100-200 ರೂ. ಬಡ್ಡಿ ಪಡೆಯಲು ಹೋಗಿ 300-400 ರೂ. ವಿದ್ಯುತ್ ಬಿಲ್ ಬರುವ ಆತಂಕ ಗ್ರಾಹಕರನ್ನು ಕಾಡುತ್ತಿದೆ. ಉಳಿದಂತೆ 200 ಯೂನಿಟ್ ಅಥವಾ ಸರಾಸರಿ ಮಿತಿ ಮೀರಿ ಬಳಕೆ ಮಾಡುತ್ತಿರುವವರಿಗೆ ಹೆಚ್ಚುವರಿ ಬಳಕೆಯ ಬಿಲ್ ಬರುತ್ತದೆ. ಅದರಲ್ಲೇ ಈ ಮುಂಗಡ ಠೇವಣಿ ಮೆಲಿನ ಬಡ್ಡಿಯನ್ನು ನಮೂದಿಸಿ, ಮೊತ್ತದಲ್ಲಿ ಕಡಿತಗೊಳಿಸಲಾಗುತ್ತದೆ. ಹಾಗಾಗಿ, ಈ ವರ್ಗಕ್ಕೆ ಯಾವುದೇ ಸಮಸ್ಯೆ ಇಲ್ಲ.
ಠೇವಣಿ ಮೇಲಿನ ಬಡ್ಡಿಯೇ 656 ಕೋಟಿ ರೂ.ಹಾಗೆಂದು ಗ್ರಾಹಕರಿಗೆ ಪಾವತಿಸಬೇಕಾದ ಠೇವಣಿ ಮೇಲಿನ ಬಡ್ಡಿ ಹಣ ಕಡಿಮೆ ಏನಿಲ್ಲ. ಒಟ್ಟು 656.61 ಕೋಟಿ ರೂ. ಗ್ರಾಹಕರಿಗೆ ಎಲ್ಲ ಎಸ್ಕಾಂಗಳು ಹಂಚಬೇಕಿವೆ. ಈ ಪೈಕಿ ಬೆಸ್ಕಾಂ ಅತಿಹೆಚ್ಚು 385.81 ಕೋಟಿ ರೂ., ಮೆಸ್ಕಾಂ 59.24, ಸೆಸ್ಕ್ 67.57, ಜೆಸ್ಕಾಂ 52.35 ಕೋಟಿ ರೂ.ಗಳನ್ನು ಗ್ರಾಹಕರಿಗೆ ನೀಡಬೇಕಿದೆ.
ಇನ್ನು ಕೆಇಆರ್‌ಸಿ ಗ್ರಾಹಕರ ಠೇವಣಿಗೆ ಬಡ್ಡಿ ದರ ನಿಗದಿಪಡಿಸುವಾಗ ತಾರತಮ್ಯ ಮಾಡಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಬೇರೆ ಪ್ರಕರಣಗಳಲ್ಲಿ ಬಡ್ಡಿದರವನ್ನು ನಿಗದಿಪಡಿಸುವಾಗ ಎಂಸಿಎಲ್‌ಆರ್ (ಠೇವಣಿ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿದರ) ದರ ಎಂದು ಹೇಳಿದೆ. ಗ್ರಾಹಕರ ಠೇವಣಿಗೆ ಮಾತ್ರ ಆರ್‌ಬಿಐ ದರ ಎಂದು ಹೇಳಿದೆ. ಇದು ಎಂಸಿಎಲ್‌ಆರ್‌ಗಿಂತ ಕಡಿಮೆ. ಈ ದರದಲ್ಲಿ ಬ್ಯಾಂಕ್‌ಗಳು ಆರ್‌ಬಿಐನಿಂದ ಹಣ ಪಡೆಯುತ್ತವೆ. ಆದರೆ ಗ್ರಾಹಕರು ಸಾಲ ಕೇಳಲು ಹೋದರೆ, ಅದೇ ಬ್ಯಾಂಕ್‌ಗಳು ಈ ಬಡ್ಡಿ ದರದಲ್ಲಿ ಸಾಲ ನೀಡುವುದಿಲ್ಲ. ಗ್ರಾಹಕರ ಠೇವಣಿಗೆ ಮಾತ್ರ ಕಡಿಮೆ ಬಡ್ಡಿ ಯಾಕೆ? ಗ್ರಾಹಕರ ಠೇವಣಿಗೆ ಬಡ್ಡಿ ದರ ನಿಗದಿಪಡಿಸಿದ ಕೆಇಆರ್‌ಸಿ ಈಗ ಗ್ರಾಹಕರಿಗೆ ಬಡ್ಡಿ ಪಾವತಿ ಆಗುತ್ತಿಲ್ಲ ಎಂದರೆ ಸ್ವಯಂಪ್ರೇರಣೆಯಿಂದ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಗ್ರಾಹಕರಿಂದ ಕೇಳಿಬರುತ್ತಿದೆ.
ಠೇವಣಿ ಇಟ್ಟ ಗ್ರಾಹಕರು ಹೆಚ್ಚುವರಿ ವಿದ್ಯುತ್ ಬಳಸಿ ಶೂನ್ಯ ಬಿಲ್‌ನಿಂದ ಹೊರಬಂದಾಗ ಬಡ್ಡಿಯನ್ನು ಆ ಬಿಲ್‌ನಲ್ಲಿ ಕಡಿತಗೊಳಿಸಲಾಗುವುದು. ಅಲ್ಲಿಯವರೆಗೆ ಆಯಾ ಗ್ರಾಹಕರ ಆರ್.ಆರ್. ಸಂಖ್ಯೆಯಲ್ಲೇ ಮೊತ್ತ ಜಮೆ ಇರಲಿದೆ.
– ಮಹಾಂತೇಶ ಬೀಳಗಿ,
ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ
-ವಿಜಯ ಕುಮಾರ ಚಂದರಗಿ