Advertisement

ಉಡುಪಿಗೆ 100 ಬೆಡ್‌ಗಳ ಇಎಸ್‌ಐ ಆಸ್ಪತ್ರೆ : ಹಲವು ದಶಕಗಳ ಹೋರಾಟದ ಫ‌ಲ

12:28 AM Jul 15, 2022 | Team Udayavani |

ಉಡುಪಿ : ಉಡುಪಿ ಜಿಲ್ಲೆಯ ಬಹುದಿನದ ಬೇಡಿಕೆಯಾದ ಇಎಸ್‌ಐ ಆಸ್ಪತ್ರೆಗೆ ಕೇಂದ್ರ ಸರಕಾರ ತಾತ್ವಿಕ ಅನುಮೋದನೆ ನೀಡಿದೆ. ಆಸ್ಪತ್ರೆ ಎಲ್ಲಿ ನಿರ್ಮಾಣವಾಗಲಿದೆ ಮತ್ತು ನಿರ್ವಹಣೆ ಹಾಗೂ ಅಲ್ಲಿ ಸಿಗಲಿರುವ ಸೇವೆಗಳ ಬಗ್ಗೆ ಇನ್ನಷ್ಟೇ ಕೇಂದ್ರದಿಂದ ವಿವರ ಬರಬೇಕಿದೆ.

Advertisement

ಕೇಂದ್ರ ಕಾರ್ಮಿಕ ಸಚಿವಾಲಯ ದೇಶದಾದ್ಯಂತ 23 ನೂತನ ಎಸ್‌ಐ ಆಸ್ಪತ್ರೆಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ ಕರ್ನಾಟಕದ ಉಡುಪಿ ಹಾಗೂ ತುಮಕೂರಿನಲ್ಲಿ 100 ಬೆಡ್‌ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆಗಳ ನಿರ್ಮಾಣಕ್ಕೆ ತಾತ್ವಿಕ ಅನುಮೋದನೆ ಕಲ್ಪಿಸಿದೆ.

ಉಡುಪಿ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಈ ಹಿಂದೆಯೇ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಈ ಕುರಿತು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಕೂಡ ಭೇಟಿಯಾಗಿ ಚರ್ಚಿಸಿ, ಉಡುಪಿಗೆ ಇಎಸ್‌ಐ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ವಿನಂತಿಸಿಕೊಂಡಿದ್ದರು.

ಇದರ ಪರಿಣಾಮವಾಗಿ, ಇಎಸ್‌ಐಸಿ ತನ್ನ 188ನೇ ಸಾಮಾನ್ಯ ಸಭೆಯಲ್ಲಿ ಉಡುಪಿ ಜಿÇÉೆಗೆ ಇಎಸ್‌ಐ ಆಸ್ಪತ್ರೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಪೂರ್ಣ ಪ್ರಮಾಣದ ಸೌಲಭ್ಯ ಬರಬೇಕು
ಇಎಸ್‌ಐ ಆಸ್ಪತ್ರೆ ಉಡುಪಿ ಭಾಗದ ಜನತೆಯ ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಉಡುಪಿಗೆ 100 ಬೆಡ್‌ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆ ಮಂಜೂರಾಗಿದೆ. ಆದಷ್ಟು ಬೇಗ ಆಸ್ಪತ್ರೆಗೆ ಜಾಗ ಗುರುತಿಸಿ, ಕಟ್ಟಡ ನಿರ್ಮಾಣ ಕಾಮಗಾರಿಯು ಶುರುವಾಗಬೇಕು. ಎಷ್ಟು ಬೇಗ ಆಸ್ಪತ್ರೆಯ ನಿರ್ಮಾಣವಾಗಲಿದೆಯೋ ಅಷ್ಟು ಬೇಗ ಜನರಿಗೆ ಇದರ ಸೇವೆ ಲಭ್ಯವಾಗಲಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಮಸ್ಯೆ ಇದೆ. ಹೊಸದಾಗಿ ನಿರ್ಮಾಣ ಆಗಲಿರುವ ಇಎಸ್‌ಐ ಆಸ್ಪತ್ರೆಗೆ ಎಲ್ಲ ಸೌಲಭ್ಯವನ್ನು ಒದಗಿಸುವಂತಾಗಬೇಕು.

Advertisement

ಉಡುಪಿ ಜಿಲ್ಲೆಗೆ ಒಂದು ಇಎಸ್‌ಐ ಆಸ್ಪತ್ರೆ ತರಬೇಕು ಎಂಬ ನಿಟ್ಟಿನಲ್ಲಿ ಹಲವು ಬಾರಿ ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಚರ್ಚೆ ಮಾಡಿದ್ದು, ಈಗ 100 ಬೆಡ್‌ನ‌ ಆಸ್ಪತ್ರೆ ಮಂಜೂರಾಗಿದೆ. ಶ್ರಮಿಕ ವರ್ಗಕ್ಕೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.
– ಶೋಭಾ ಕರಂದ್ಲಾಜೆ,, ಕೇಂದ್ರ ಸಚಿವೆ

ಉದಯವಾಣಿ ಗಮನ ಸೆಳೆದಿತ್ತು
ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೆ ಏರಬೇಕು ಹಾಗೂ ಸೌಲಭ್ಯಗಳು ಉನ್ನತೀಕರಣವಾಗಬೇಕು ಎನ್ನುವ ಬಗ್ಗೆ ಉದಯವಾಣಿ ಹಲವಾರು ಬಾರಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next