Advertisement

ಉಡುಪಿ: “ಇಲ್ಲ’ಗಳಿಂದ ಬಾಧಿತವಾದ ಇಎಸ್‌ಐ ಡಿಸ್ಪೆನ್ಸರಿಗಳು

10:22 AM Dec 15, 2018 | |

ಉಡುಪಿ: ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳದಲ್ಲಿರುವ ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ವೈದ್ಯರು, ದಾದಿಯರು, ಸಿಬಂದಿ ಕೊರತೆಯಿಂದಾಗಿ ಸೇವೆ ವಿಳಂಬವಾಗುತ್ತಿದ್ದು, ಸಾವಿರಾರು ಮಂದಿ ತೊಂದರೆಗೀಡಾಗಿದ್ದಾರೆ.

Advertisement

ಹತ್ತು ವರ್ಷಗಳ ಹಿಂದೆಯೇ ಉಡುಪಿ ಇಎಸ್‌ಐ ಡಿಸ್ಪೆನ್ಸರಿಗೆ ನಾಲ್ಕು, ಕುಂದಾಪುರ, ಮಣಿಪಾಲ ಡಿಸ್ಪೆನ್ಸರಿಗಳಿಗೆ ತಲಾ 2 ವೈದ್ಯರ ಹುದ್ದೆ ಮಂಜೂರಾಗಿತ್ತು. ಆದರೆ ಕುಂದಾಪುರ ದಲ್ಲಿ ಮಾತ್ರ ಓರ್ವರು ರೆಗ್ಯುಲರ್‌ ವೈದ್ಯಾಧಿ ಕಾರಿ ಇದ್ದಾರೆ. ಉಳಿದಂತೆ ಎಲ್ಲ ಡಿಸ್ಪೆನ್ಸರಿಗಳಲ್ಲಿ ತಲಾ ಓರ್ವರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಜೆಯಲ್ಲಿದ್ದರೆ ನರ್ಸ್‌ಗಳೇ ಔಷಧ ಕೊಡಬೇಕಾದ ಸ್ಥಿತಿ ಇದೆ.

ಸದಸ್ಯರ ಸಂಖ್ಯೆ ಮೂರು ಪಟ್ಟು ಹೆಚ್ಚಳ
ಇಎಸ್‌ಐ ವೇತನ ಮಿತಿಯನ್ನು 21,000 ರೂ.ಗಳಿಗೆ ಹೆಚ್ಚಿಸಿದ ಅನಂತರ ಫ‌ಲಾನುಭವಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. ಈ ಹಿಂದೆ ಜಿಲ್ಲೆಯ ಒಂದೊಂದು ಡಿಸ್ಪೆನ್ಸರಿಗಳಲ್ಲಿ ದಿನಕ್ಕೆ 70ರಷ್ಟು ಮಂದಿ ಸೇವೆ ಪಡೆದು ಕೊಳ್ಳುತ್ತಿದ್ದರೆ ಈಗ 180ರಿಂದ 200ಕ್ಕೆ ಹೆಚ್ಚಿದೆ. ಆದರೆ ಅದಕ್ಕೆ ಸರಿಯಾಗಿ ವೈದ್ಯರು, ಸಿಬಂದಿಯ ನೇಮಕ ಆಗಿಲ್ಲ. ವೈದ್ಯಕೀಯ ಉಪಕರಣಗಳು, ಮೂಲ ಸೌಕರ್ಯಗಳ ಕೊರತೆಯೂ ಇದೆ. 

ಒಂದು ಲಕ್ಷ ಚಂದಾದಾರರು
ಉಡುಪಿ ಜಿಲ್ಲೆಯಲ್ಲಿ ಇಎಸ್‌ಐಗೆ 1 ಲಕ್ಷ ಚಂದಾದಾ ರರಿದ್ದಾರೆ. ತಿಂಗಳಿಗೆ ಸರಾಸರಿ ಒಬ್ಬರಿಂದ 1,200 ರೂ. ಸಂಗ್ರಹವಾಗುತ್ತದೆ. ಇಎಸ್‌ಐ ಸೌಲಭ್ಯ ಪಡೆಯುವವರು ಕೇವಲ ಶೇ.11 ಮಂದಿ ಮಾತ್ರ ಎನ್ನುತ್ತಾರೆ ಇಎಸ್‌ಐ ಸೌಲಭ್ಯ ಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಜಿ.ಎ. ಕೋಟೆಯಾರ್‌.

ಆನ್‌ಲೈನ್‌ ಕೆಲಸವೂ ದಾದಿಯರಿಗೆ
ಹೆಚ್ಚಿನ ದಾಖಲೆಗಳನ್ನು ಆನ್‌ಲೈನ್‌ ಎಂಟ್ರಿ ಮಾಡಬೇಕಾಗಿ ರುವುದರಿಂದ ಸ್ಟಾಫ್ ನರ್ಸ್‌ಗಳು ಕಂಪ್ಯೂಟರ್‌ ಎದುರು ಹೆಚ್ಚು ಕಾಲ ವ್ಯಯಿಸುವುದು ಅನಿವಾರ್ಯ. ಇದರಿಂದ ವೈದ್ಯರಿಗೆ ಸಹಾಯ, ರೋಗಿ ಸೇವೆಗೆ ಸಮಯ ಕಡಿಮೆ ಯಾಗಿದೆ. ಕುಂದಾಪುರ, ಕಾರ್ಕಳ ಡಿಸ್ಪೆನ್ಸರಿಗಳಲ್ಲಿ ಒಬ್ಬ ಗುಮಾಸ್ತರಿದ್ದು, ಇವರು ವಾರದಲ್ಲಿ ಮೂರು ದಿನ ಕಾರ್ಕಳ, ಮೂರು ದಿನ ಕುಂದಾಪುರದಲ್ಲಿರಬೇಕು. ಹಾಗಾಗಿ ಕಡತಗಳ ವಿಲೇವಾರಿಯೂ ವಿಳಂಬವಾಗುತ್ತಿದೆ. ಮಣಿಪಾಲದ ಗುಮಾಸ್ತರು ಪಣಂಬೂರು ಡಿಸ್ಪೆನ್ಸರಿಯಲ್ಲಿ 3 ದಿನ ಕೆಲಸ ಮಾಡಬೇಕು. ಡಾಟಾ ಎಂಟ್ರಿ ಆಪರೇಟರ್‌ ಎಲ್ಲೂ ಇಲ್ಲ. 3 ತಿಂಗಳುಗಳಿಂದ ಕೆಲವು ಔಷಧಗಳೂ ಲಭ್ಯವಾಗುತ್ತಿಲ್ಲ. 

Advertisement

ಬ್ರಹ್ಮಾವರದಲ್ಲಿ ಇಎಸ್‌ಐ ಆಸ್ಪತ್ರೆ?
ಉಡುಪಿಗೆ ಇಎಸ್‌ಐ ಆಸ್ಪತ್ರೆ ಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಭರವಸೆ ನೀಡಿ ದ್ದರು. ಬ್ರಹ್ಮಾವರದಲ್ಲಿ ನಿರ್ಮಾಣವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆಯಾದರೂ ಅಧಿಕೃತಗೊಂಡಿಲ್ಲ. 

ಮುಖ್ಯ ಬೇಡಿಕೆಗಳು
*ಅಗತ್ಯ ಸಂಖ್ಯೆಯ ವೈದ್ಯರು, ನರ್ಸ್‌ ಹಾಗೂ ಸಿಬಂದಿ ನೇಮಿಸಬೇಕು. ಅಗತ್ಯ ಔಷಧಿಗಳನ್ನು
ದಾಸ್ತಾನಿರಿಸಬೇಕು.
* ಉಡುಪಿ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪಿಸಬೇಕು. 3,000 ಮತ್ತು ಅದಕ್ಕಿಂತ ಹೆಚ್ಚು ಚಂದಾದಾರರು ಇರುವ
ಪ್ರದೇಶದಲ್ಲಿ ಇಎಸ್‌ಐ ಡಿಸ್ಪೆನ್ಸರಿ ತೆರೆಯಬೇಕು.
* ಉಡುಪಿಯಲ್ಲಿ ಇಎಸ್‌ಐ ಪ್ರಾದೇಶಿಕ ಕಚೇರಿ ಆರಂಭಿಸಬೇಕು. ಆ್ಯಂಬುಲೆನ್ಸ್‌ ಸೇವೆಒದಗಿಸಬೇಕು.

ಕಾದು ಸುಸ್ತು
ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಬಂದು ಡಿಸ್ಪೆನ್ಸರಿಯಲ್ಲಿ ಸಹಿ ಮತ್ತು ದಾಖಲೆಗಳನ್ನು ಪಡೆಯುವಾಗ ತಡವಾಗುತ್ತದೆ. ಕೆಲವೊಮ್ಮೆ ತುಂಬಾ ಜನ ಸರತಿಯಲ್ಲಿ ಇರುತ್ತಾರೆ. ನನಗೆ ಎರಡು ಮೂರು ಬಾರಿ ಇಂತಹ ಅನುಭವ ಆಗಿದೆ. ಸಿಬಂದಿ ಸಂಖ್ಯೆ ಹೆಚ್ಚು ಮಾಡಿದರೆ ಅನುಕೂಲ. ವೈದ್ಯರು ಸೇವೆ ನೀಡುತ್ತಾರಾದರೂ ಅವರು ರಜೆಯಲ್ಲಿದ್ದರೆ ಬೇರೆ ವೈದ್ಯರಿಲ್ಲ. 
ಹೇಮಾವತಿ, ಇಎಸ್‌ಎಸ್‌ ಚಂದಾದಾರರು, ಮಣಿಪಾಲ

ಸಿಬಂದಿ ಹೆಚ್ಚಿಸಿ
ಮಣಿಪಾಲದಲ್ಲಿ ಕೆಎಂಸಿ ಆಸ್ಪತ್ರೆಗೆ ಬೇರೆ ಜಿಲ್ಲೆಯವರು ಕೂಡ ಬರುತ್ತಾರೆ. ಅವರ ಇಎಸ್‌ಐ ಕಾರ್ಡ್‌ಗಳ ಮಾಹಿತಿ ಕೂಡ ಮಣಿಪಾಲದ ಡಿಸ್ಪೆನ್ಸರಿ ಮತ್ತು ಉಡುಪಿಯ ಡಿಸ್ಪೆನ್ಸರಿಯಲ್ಲಿ ದಾಖಲಾಗುತ್ತವೆ. ಆದ್ದರಿಂದ ಸಿಬಂದಿ ಸಂಖ್ಯೆ ಹೆಚ್ಚಿಸಬೇಕು. 
 ಚಂದ್ರಶೇಖರ್‌, ಕುಕ್ಕಿಕಟ್ಟೆಕಾರ್ಮಿಕರು, ಇಎಸ್‌ಐ ಚಂದಾದಾರರು

ರಾಜ್ಯದಿಂದ ವರದಿ ಹೋಗಿಲ್ಲ
ಇಎಸ್‌ಐ ಆಸ್ಪತ್ರೆ ತೆರೆಯಲು ರಾಜ್ಯ ಸರಕಾರದಿಂದ ಕೇಂದ್ರಕ್ಕೆ ವರದಿ ಹೋಗಬೇಕು. ರಾಜ್ಯದ ಹಿಂದಿನ ಸರಕಾರವಾಗಲೀ, ಈಗಿನ ಸರಕಾರ ವಾಗಲೀ ಈ ವರದಿ ಕೊಟ್ಟಿಲ್ಲ. ನಾನು ಸಚಿವರಲ್ಲಿ ಈ ಕುರಿತು ಹೇಳಿದ್ದೇನೆ. ಇತ್ತೀಚೆ ಗಷ್ಟೇ ಕಾರ್ಮಿಕ ಇಲಾಖೆ ಕಾರ್ಯದರ್ಶಿಗೂ ತಿಳಿಸಿದ್ದೇನೆ. ನನ್ನ ಪ್ರಯತ್ನವನ್ನು ಮಾಡುತ್ತಲೇ ಇದ್ದೇನೆ. 
 ಶೋಭಾ ಕರಂದ್ಲಾಜೆ, ಸಂಸದೆ 

ಹೆಬ್ರಿ, ಕಾಪುವಿಗೂ ಡಿಸ್ಪೆನ್ಸರಿ ಬೇಡಿಕೆ
3,000 ಇಎಸ್‌ಐ ಚಂದಾದಾರರು ಇರುವಲ್ಲಿ ಒಂದು ಡಿಸ್ಪೆನ್ಸರಿ ಆರಂಭಿಸಬೇಕು ಎಂಬುದು ನಮ್ಮ ಬೇಡಿಕೆ ಗಳಲ್ಲೊಂದು. ಅದರಂತೆ ಹೆಬ್ರಿ, ಕಾಪುವಿನಲ್ಲಿ ತುರ್ತಾಗಿ ಆಗಬೇಕು. ಇಎಸ್‌ಐ ಮತ್ತು ಇಎಸ್‌ಐ ಕಾರ್ಪೊರೇಷನ್‌ನ್ನು ವಿಲೀನಗೊಳಿಸಿದರೆ ಇತರ ಸಮಸ್ಯೆ ಗಳು ಕೂಡ ಬಗೆಹರಿಯಬಹುದು. ಸುಸಜ್ಜಿತ ಇಎಸ್‌ಐ ಆಸ್ಪತ್ರೆಗಾಗಿ ಹೋರಾಟ ಮುಂದುವರಿಯಲಿದೆ. 
 ಜಿ.ಎ. ಕೋಟೆಯಾರ್‌,ಅಧ್ಯಕ್ಷರು, ಮಾಹಿತಿ ಸೇವಾ ಸಮಿತಿ ಮತ್ತು ಮಾಸ್‌ ಇಂಡಿಯಾ

 ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next