Advertisement
“ನೀವು ರಾಜ್ಯ ಬಿಜೆಪಿ ಅಧ್ಯಕ್ಷರು, ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದಾಗ ನಾವು ಖುಷಿಯಿಂದ ಒಪ್ಪಿಕೊಂಡಿದ್ದೇವೆ. ಹಾಗೆಂದ ಮಾತ್ರಕ್ಕೆ ನಿಮಗೆ ಬೇಕಾಗಿದ್ದನ್ನಮಾಡಿಕೊಂಡು ಹೋದರೆ ಸುಮ್ಮನಿರಲು ಸಾಧ್ಯವಿಲ್ಲ. ನಿಮ್ಮ ಸರ್ವಾಧಿಕಾರಿ ಧೋರಣೆ ಬಿಜೆಪಿಯಲ್ಲಿ ನಡೆಯುವುದಿಲ್ಲ’ ಎಂದು ಯಡಿಯೂರಪ್ಪ ಅವರಿಗೆ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶವಿರುವ ಸಂದರ್ಭದಲ್ಲಿ ಎಲ್ಲರೂ ಪಕ್ಷದಲ್ಲಿರುವ ಅಸಮಾಧಾನದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನಮಗೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಆಸೆಯಿದೆ ಹಾಗೂ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸವೂ ಇದೆ. ಆದರೆ, ಹೇಗೋ ಸರ್ಕಾರ ಬರಬೇಕು. ಬಿಜೆಪಿಯ ತತ್ವ, ಸಿದ್ಧಾಂತ, ಸಂಘಟನೆ ಬಗ್ಗೆ ಗೊತ್ತಿಲ್ಲದೇ ಇದ್ದರೂ ಪರವಾಗಿಲ್ಲ, ಅಂಥವರನ್ನೆಲ್ಲಾ ಗೆಲ್ಲಿಸಿಕೊಂಡು ಬಂದು ಸರ್ಕಾರ ಮಾಡಲು ಅವಕಾಶ ನೀಡುವುದಿಲ್ಲ. ಸಂಘಟನೆಯೂ ಉಳಿಯಬೇಕು. ಮತ್ತು ಆ ಸಂಘಟನೆಯದ್ದೇ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಹೋರಾಟ. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದವರು, ಪೊಲೀಸರಿಂದ ಒದೆ ತಿಂದು ಸಂಘಟನೆ ಕಟ್ಟಿದವರು, ನಿಷ್ಠಾವಂತ ಕಾರ್ಯಕರ್ತರ ಬಿಜೆಪಿ ಸರ್ಕಾರ ಧಿಕಾರಕ್ಕೆ ಬರಬೇಕು ಎಂದು ಈ ಸಭೆ ಕರೆದಿದ್ದೇವೆ. ಇಲ್ಲಿಗೆ ಬಂದಿರುವವರು ಜೀವನದ ಕೊನೆಯವರೆಗೂ ಬಿಜೆಪಿಯಲ್ಲಿ ಇರುವವರು, ಪಕ್ಷ ಉಳಿಸುತ್ತೇವೆ ಎನ್ನುವವರು. ಪ್ರಾಣ ಬಿಟ್ಟಾರೇ ಹೊರತು ಪಕ್ಷ ಬಿಡದವರು ಎಂದು ಹೇಳಿದರು.
Related Articles
Advertisement
ಗೊಂದಲ ಬಗೆಹರಿಸಲು ರಾಷ್ಟ್ರೀಯ ಅಧ್ಯಕ್ಷರು ಹೇಳಿದರೂ ಸಭೆ ಕರೆಯುವುದಿಲ್ಲ ಎನ್ನುವುದು, 24 ಮಂದಿ ಅಸಮಾಧಾನ ವ್ಯಕ್ತಪಡಿಸಿದಾಗ ಇಬ್ಬಿಬ್ಬರನ್ನು ಕರೆದು ಚರ್ಚಿಸುತ್ತೇನೆ ಎಂದು ಹೇಳುವುದು ಸರಿಯಲ್ಲ. ಈಗಲೂ ಹೇಳುತ್ತೇನೆ. ಇನ್ನೂ ಕಾಲ ಮಿಂಚಿಲ್ಲ. ಎಲ್ಲವನ್ನೂ ಚರ್ಚೆ, ಮಾತುಕತೆ ಮೂಲಕ ಬಗೆಹರಿಸಿಕೊಂಡು ಹೋಗೋಣ ಎಂದು ಸಲಹೆ ಮಾಡಿದರು.
ಯಡಿಯೂರಪ್ಪ ಅವರಿಗೆ ಈಶ್ವರಪ್ಪ ಹಾಕಿರುವ ಪಂಚ ಪ್ರಶ್ನೆಗಳು– ಬಿಜೆಪಿಯಲ್ಲಿ ನಿಮಗೇನು ಕಮ್ಮಿ ಮಾಡಲಾಯಿತು ಎಂದು ಕೆಜೆಪಿ ಕಟ್ಟಿದ್ದಿರಿ? ಅಲ್ಲಿ ಹೋಗಿ ಕೇವಲ ಆರು ಸ್ಥಾನ ಗಳಿಸಿದ್ದೀರಿ. ಬಿಜೆಪಿಗೆ 40 ಸ್ಥಾನ ಬಂತು. ಅನ್ಯಾಯವಾಗಿ ನಿಮ್ಮಿಂದ ಬಿಜೆಪಿ ಬದಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತಾಯಿತು. ಆಗ ನಿಮ್ಮ ಜತೆಗಿದ್ದವರು ಕೆಜೆಪಿ ಕಟ್ಟುವಂತೆ ಮಾಡಿ ನಿಮ್ಮನ್ನು ಮಣ್ಣು ಮುಕ್ಕಿಸಿದರು. ಈಗ ಮತ್ತೆ ಅಂತಹದ್ದೇ ಪ್ರಯತ್ನಕ್ಕೆ ಮುಂದಾಗುತ್ತಿದ್ದು, ಅವರ ಮಾತು ನಂಬಿ 20-30 ವರ್ಷ ಪಕ್ಷಕ್ಕೆ ದುಡಿದ ನಿಷ್ಠಾವಂತರನ್ನು ಮೂಲೆಗುಂಪು ಮಾಡುವುದು ಸರಿಯೇ? – ಈಗಾಗಲೇ ನಿಮ್ಮನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು, ಎಲ್ಲರೂ ಅದಕ್ಕೆ ಒಪ್ಪಿ ಕೆಲಸ ಮಾಡುತ್ತಿದ್ದೇವೆ. ಆದರೆ, ನೀವು ಯಡಿಯೂರಪ್ಪ ಅವರ ಸುತ್ತ ಸುತ್ತಿದರೆ, ಅವರಿಗೆ ಜಿಂದಾಬಾದ್ ಕೂಗಿದರೆ ಪದಾಧಿಕಾರಿಗಳಾಗಬಹುದು ಎಂದು ಭಾವಿಸಿ ಆ ಕೆಲಸ ಮಾಡಿದವರನ್ನು ಹಿಂದುಳಿದ ವರ್ಗಗಳ ಮೋರ್ಚಾ, ಸ್ಲಂ ಮೋರ್ಚಾಗೆ ಅಧ್ಯಕ್ಷರನ್ನಾಗಿ ನೇಮಿಸಿದಿರಿ. ಈಗಲೂ ಸುಮ್ಮನಿದ್ದರೆ ಮುಂದೆ ಸರ್ಕಾರ ಬಂದಾಗ ಅವರೇ ಮಂತ್ರಿಗಳಾಗುವ ಸಾಧ್ಯತೆಯಿದೆ – ಹಿಂದೆ ಯಾರಧ್ದೋ ಮಾತು ಕೇಳಿಕೊಂಡು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಮತ್ತೆ ಬಿಜೆಪಿಗೆ ಬಂದಾಗ, ಬಿಜೆಪಿಯಲ್ಲಿರುವ ದೇವ ದುರ್ಲಬ ಕಾರ್ಯಕರ್ತರು ಎಲ್ಲೂ ಸಿಗುವುದಿಲ್ಲ ಎಂದು ನನ್ನ ಬಳಿ ಹೇಳಿಕೊಂಡಿದ್ದೀರಿ. ಆದರೆ, ಈಗ ಇನ್ಯಾರಧ್ದೋ ಮಾತು ಕೇಳಿಕೊಂಡು ರಾಜ್ಯದಲ್ಲಿ ಒಂದು ಕೋಟಿ ಬಿಜೆಪಿ ಸದಸ್ಯತ್ವ ಮಾಡಿದ ಅಂತಹ ಪ್ರಾಮಾಣಿಕ, ದೇವ ದುರ್ಲಭ ಕಾರ್ಯಕರ್ತರನ್ನೇ ಅಮಾನತು ಮಾಡುತ್ತೀರಾ? – ಅಮಿತ್ ಶಾ ಅವರು ಸಂಧಾನ ಸಭೆ ನಡೆಸಿದಾಗ ಕಾಂಗ್ರೆಸ್‌ನವರು ಹಿಂದುಳಿದ ವರ್ಗಗಳಿಗೆ ಮೋಸ ಮಾಡಿದ್ದಾರೆ. ಆದ್ದರಿಂದ ಬ್ರಿಗೇಡ್ ಮುಂದುವರಿಸಿ ಹಿಂದುಳಿದವರನ್ನು ಸಂಘಟಿಸಿ ಎಂದು ಹೇಳಿದ್ದರು. ಅದರಂತೆ ನಡೆದುಕೊಂಡಿದ್ದರು. ಅದೇ ಸಂದರ್ಭದಲ್ಲಿ ಸಂಘಟನೆ ಮತ್ತು ಕಾರ್ಯಕರ್ತರ ಗೊಂದಲವನ್ನು ಫೆ. 10ರೊಳಗೆ ಬಗೆಹರಿಸಿ ಎಂದು ನಿಮಗೆ ಹೇಳಿದ್ದರು. ಅದಕ್ಕೆ ಸಮಿತಿ ಮಾಡಿದ್ದರು. ಜಿಲ್ಲೆಯ ಕಾರ್ಯಕರ್ತರನ್ನು ಕರೆದು ಗೊಂದಲ ನಿವಾರಣೆ ಮಾಡಿ ಅಂದಿದ್ದರು. ಆದರೆ, ಇವತ್ತಿನವರೆಗೆ ಆ ಫೆ. 10 ಬಂದಿಲ್ಲ. ಇದಕ್ಕೇನು ಹೇಳುತ್ತೀರಿ? – ಒಬ್ಬಿಬ್ಬರ ಜತೆ ಸೇರಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ. ನಿಷ್ಠಾವಂತರನ್ನು ಕಸ ಸರಿಸಿದಂತೆ ಬದಿಗೆ ಸರಿಸಿದ್ದೀರಿ. ಅದನ್ನು ಪ್ರಶ್ನಿಸಿದರೆ ಎಚ್ಚರಿಕೆ ಕೊಡುತ್ತೀರಿ. ನೀವು ಒಮ್ಮೆ ದುಡುಕಿ ತಪ್ಪು ಮಾಡಿದ್ದೀರಿ. ಪಕ್ಷ ಉಳಿಸಲು ಜತೆಗೆ ಬರುವವರನ್ನು ಕೂಡಿಸಿಕೊಂಡು ಉತ್ಕೃಷ್ಟ ಸರ್ಕಾರ ತರುತ್ತೀರಿ ಎಂದು ಈಗಲೂ ನನಗೆ ನಂಬಿಕೆ ಇದೆ. ಇದಕ್ಕಾಗಿ ನೀವೇನು ಮಾಡುತ್ತೀರಿ?