ಶಿವಮೊಗ್ಗ: ವಿಧಾನಪರಿಷತ್ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಮತ್ತು ಕೇಂದ್ರ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯೇ ಅಥವಾ ಪುನರ್ ರಚನೆಯೇ ಎಂಬ ಕುರಿತು ಮುಖ್ಯಮಂತ್ರಿಗಳು ಮತ್ತು ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆಯೇ ಬೇರೆ, ವಿಧಾನಸಭಾ ಅಭ್ಯರ್ಥಿಗಳ ಆಯ್ಕೆಯೇ ಬೇರೆ. ರಾಜ್ಯಸಭೆಗೆ ಕೇಂದ್ರ ಸಮಿತಿ ರಾಜ್ಯದಿಂದ ಪ್ರತಿಕ್ರಿಯೆ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆಯೇ ಬೇರೆಯಾಗಿದೆ. ಹಿಂದೆ ಕಾಂಗ್ರೆಸ್ -ಜೆಡಿಎಸ್ ಪಕ್ಷದಲ್ಲಿದ್ದವರು ಬಿಜೆಪಿಗೆ ಬಂದಿದ್ದು, ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಋಣ ತೀರಿಸಬೇಕಿದೆ. ಯಾರಿಗೂ ಮೋಸ ಮಾಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದರು.
ಸೋಮವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು ಎಂದರು.
ಈಗ ಹಳಬರು, ಹೊಸಬರು ಎನ್ನುವ ಪ್ರಶ್ನೆ ಇಲ್ಲ. ಸರ್ಕಾರ ರಚನೆಗೆ ಕಾರಣರಾದವರನ್ನು ಮರೆಯಲಾಗುವುದಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ಕೂಡ ಕಡೆಗಣಿಸುವುದಿಲ್ಲ. ಎಲ್ಲರಿಗೂ ಅವಕಾಶ ನೀಡಿ ಸರ್ಕಾರ ಮುಂದಿನ 3 ವರ್ಷ ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳಲಾಗುವುದೆಂದರು.
ಪಕ್ಷದಲ್ಲಿ ಜಾತಿವಾರು, ಜಿಲ್ಲಾವಾರು ಟಿಕೆಟ್ ಕೇಳುವುದು ಸಹಜ. ಆಕಾಂಕ್ಷಿಗಳು ಇರುತ್ತಾರೆ. ಅದೇ ಅಂತಿಮವಲ್ಲ. ಬಿಜೆಪಿ ಎಂದಿಗೂ ಜಾತಿಯನ್ನು ನೋಡಿಲ್ಲ. ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡುತ್ತದೆ ಎಂದರು.