Advertisement
ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯ ಅವರನ್ನು ನೋಡಿ ರಾಜ್ಯದ ಜನ ಮತ ಹಾಕಿದ್ದಾರೆ. ರಾಜ್ಯದ ಜನರ ಆಶೀರ್ವಾದ, 136 ಶಾಸಕರ ಬೆಂಬಲ, ಹೈಕಮಾಂಡ್ ನಿರ್ಧಾರದಿಂದ ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಸ್ಥಾನಮಾನ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಮಾತನಾಡುವುದನ್ನು ನಾವು ಸಹಿಸುವುದಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಅನುಭವವುಳ್ಳ ಬಿ.ಕೆ. ಹರಿಪ್ರಸಾರ್ ಅವರಿಂದ ಇಂತಹ ಮಾತುಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಲಿಂಗಾಯತ, ಒಕ್ಕಲಿಗ ಮುಖ್ಯಮಂತ್ರಿ ಆದಾಗ ಸ್ವಜಾತಿ ಸಚಿವರೇ ಹೆಚ್ಚಾಗಿ ಇರುತ್ತಾರೆ. ಆದರೆ ಸಿದ್ದರಾಮಯ್ಯ ಸಚಿವ ಸಂಪುಟ ಬಸವಣ್ಣನ ಅನುಭವ ಮಂಟಪದ ಮಾದರಿಯಲ್ಲಿದೆ. ಅಲ್ಲಿ ಎಲ್ಲ ಜಾತಿ, ಜನಾಂಗದವರಿಗೂ ಸಚಿವ ಸ್ಥಾನ ನೀಡಿದ್ದಾರೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಕುರುಬ ಸಮಾಜದ ಒಬ್ಬರು ಮಾತ್ರ ಸಚಿವರಾಗಿದ್ದರು. ಈ ಬಾರಿಯೂ ಒಬ್ಬರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಸಿದ್ದರಾಮಯ್ಯ ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ ಎಂಬುದನ್ನು ಹರಿಪ್ರಸಾದ್ ಅರ್ಥ ಮಾಡಿಕೊಳ್ಳಬೇಕು ಎಂದರು. ಕನ್ನಡಿಗರ ಆಸ್ತಿ
ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದುದ್ದಕ್ಕೂ ಬಡವರ, ಮಹಿಳೆಯರ, ದಲಿತರ ಪರವಾಗಿ ಧ್ವನಿ ಎತ್ತಿದ ಜನ ನಾಯಕ. ಶೋಷಿತ, ಧ್ವನಿ ಇಲ್ಲದ ಜನಾಂಗಗಳಿಗೆ, ಅವಕಾಶ ವಂಚಿತರಿಗೆ ರಾಜಕೀಯ ಶಕ್ತಿ ತುಂಬಿದವರು. ಅವರ ರಾಜಕೀಯ ಜೀವನ ಆದರ್ಶ ಮತ್ತು ಅನುಕರಣೀಯ. ಅಹಿಂದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಇರುವ ಬದ್ಧತೆಯನ್ನು ಹಿಂದುಳಿದ ವರ್ಗದ ಜನರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಜನರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲಬೇಕು. ಅವರು ಕನ್ನಡಿಗರ ಆಸ್ತಿಯಾಗಿದ್ದು, ಕೋಟ್ಯಂತರ ಜನರ ಮನಸ್ಸಿನಲ್ಲಿ ಹಾಸು ಹೊಕ್ಕಾಗಿದ್ದಾರೆ. ಅದನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದರು.