Advertisement

ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕತರೂ ಮುಖ್ಯಮಂತ್ರಿ ಅಭ್ಯರ್ಥಿಯೇ : ಈಶ್ವರ ಖಂಡ್ರೆ

07:14 PM Dec 05, 2022 | Team Udayavani |

ದಾವಣಗೆರೆ: ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕತರೂ ಮುಖ್ಯಮಂತ್ರಿ ಅಭ್ಯರ್ಥಿಯೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಸಭಾ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರುವ ಶೇ. 99 ರಷ್ಟು ಜನರಿಗೆ ಟಿಕೆಟ್ ನೀಡಲಾಗುವುದು. ಇನ್ನು ಶೇ. 1 ರಷ್ಟು ಟಿಕೆಟ್ ಕೊಡುವ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅವರು, ಇವರು ಅಂತ ಏನಿಲ್ಲ. ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರೂ ಸಹ ಮುಖ್ಯಮಂತ್ರಿ ಅಭ್ಯರ್ಥಿಯೇ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದರು.

ಕಾಂಗ್ರೆಸ್ ಬಲವೃದ್ಧಿಗಾಗಿ ಆಸಕ್ತಿ ವಹಿಸಿ ಕೆಲಸ ಮಾಡಿ, ಇಲ್ಲದಿದ್ದರೆ ಕೆಲಸ ಮಾಡುವವರಿಗೆ ಅವಕಾಶ ಕೊಡಿ… ಎಂಬುದಾಗಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಸತ್ಯವಾಗಿದೆ. ರಾಜ್ಯ, ಜಿಲ್ಲಾ, ಬೂತ್ ಮಟ್ಟದಲ್ಲೂ ಅವರ ಮಾತು ಪಾಲಿಸುವಂತಾಗಬೇಕು. ರಾಷ್ಟ್ರೀಯ ಅಧ್ಯಕ್ಷರೇ ಆಸಕ್ತಿಯಿಂದ ಕೆಲಸ ಮಾಡ ಬೇಕು ಎಂದು ಖಡಕ್ ಆಗಿ ಸೂಚಿಸಿರುವಂತೆ ಎಲ್ಲರೂ ಕೆಲಸ ಮಾಡಬೇಕು ಎಂದರು.

ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ. ಸುಳ್ಳನ್ನೇ ನೂರು ಬಾರಿ ಹೇಳುವ ಮೂಲಕ ಸತ್ಯ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಕಾಂಗ್ರೆಸ್‌ನವರು ಭ್ರಷ್ಟಾಚಾರ, ಕಮಿಷನ್ ಬಗ್ಗೆ ದೂರಿದರೆ ಕಾಂಗ್ರೆಸ್ ಆಡಳಿತದಲ್ಲೂ ಇತ್ತು ಎಂದು ಹೇಳುತ್ತಾರೆ. ಎಲ್ಲ ಸರ್ಕಾರಗಳ ಅಧಿಕಾರಾವಧಿಯಲ್ಲಿ ಇರುವಂತೆ ಭ್ರಷ್ಟಾಚಾರ ಇರುತ್ತದೆ. ಬಿಜೆಪಿಯವರು ಕಡಿಮೆ ಮಾಡಲಿಕ್ಕೆ ಬಂದಿದ್ದಾರೋ ಅಥವಾ ಹೆಚ್ಚು ಮಾಡಲಿಕ್ಕೆ ಬಂದಿದ್ದಾರೋ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅತ್ಯಾಚಾರಗಳು ನಡೆದಿದ್ದವು. ನಾವು ಹೆಚ್ಚು ಮಾಡಲಿಕ್ಕೆ ಬಂದಿದ್ದೇವೆ ಎಂಬುದಾಗಿ ಹೇಳಲಿಕ್ಕೆ ಆಗುತ್ತದೆಯೇ. ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಕಾಂಗ್ರೆಸ್‌ನಲ್ಲೂ ರೌಡಿಗಳಿದ್ದಾರೆ ಎಂದು ಹೇಳುವ ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಹೋಗುವುದು ಅವರ ನಡೆಸಿದಂತಹ ಸಮೀಕ್ಷೆಯಲ್ಲೇ ಗೊತ್ತಾಗಿದೆ. ಹಾಗಾಗಿಯೇ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ರೌಡಿಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಮೋರ್ಚಾಗಳಂತೆ ರೌಡಿಗಳ ಮೋರ್ಚಾವನ್ನೂ ಪ್ರಾರಂಭಿಸಬಹುದು ಎಂದು ಲೇವಡಿ ಮಾಡಿದರು.

Advertisement

ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರ ಮುಗಿದ ಹೋಗಿರುವ ಅಧ್ಯಾಯ. ಮಹಾಜನ್ ವರದಿಯೇ ಅಂತಿಮ. ಆದರೂ, ರಾಜಕೀಯ ಕಾರಣಕ್ಕೆ ವಿನಾಕಾರಣ ಗಡಿ ವಿಚಾರ ಪ್ರಸ್ತಾಪ ಮಾಡಲಾಗುತ್ತದೆ ಎಂದು ಈಶ್ವರ ಖಂಡ್ರೆ ದೂರಿದರು.

ಕರ್ನಾಟಕದ ಒಂದಿಚೂ ಜಾಗ ಮಹಾರಾಷ್ಟ್ರಕ್ಕೆ ಹೋಗುವುದೂ ಇಲ್ಲ. ಮಹಾರಾಷ್ಟ್ರ ಬೆಳಗಾವಿ, ಖಾನಾಪುರ, ನಿಪ್ಪಾಣಿ ಕೇಳಿದಂತೆ ನಾವು ಕರ್ನಾಟಕದವರು ಸೊಲ್ಲಾಪುರ, ಕೊಲ್ಲಾಪುರ, ಜತ್, ಅಕ್ಕಲಕೋಟೆ ಕೇಳುತ್ತೇವೆ. ಬಿಟ್ಟು ಕೊಡುತ್ತಾರಾ ಎಂದು ಪ್ರಶ್ನಿಸಿದರು.

ಸರ್ವೋಚ್ಛ ನ್ಯಾಯಾಲಯ ಗಡಿ ವಿಚಾರದ ಅರ್ಜಿಯೇ ಕಾನೂನು ಮತ್ತು ಸಂವಿಧಾನ ಬದ್ಧವಾಗಿ ಇಲ್ಲ. ವಿನಾಕಾರಣ ನ್ಯಾಯಾಲಯದ ಸಮಯ ವ್ಯರ್ಥ ಮಾಡಲಾಗುತ್ತಿದೆ. ಮಹಾಜನ್ ವರದಿಯೇ ಅಂತಿಮ. 1956 ರ ನಂತರ ಮತ್ತೆ ಗಡಿ ವಿಚಾರವನ್ನ ನ್ಯಾಯಾಲಯಕ್ಕೆ ತಂದಿರುವುದು ಸರಿ ಅಲ್ಲ. ವಿಚಾರಣೆಗೆ ಅರ್ಹವಲ್ಲ ಎಂದು ಅರ್ಜಿ ವಜಾ ಮಾಡುವ ಜೊತೆಗೆ ಮಹಾರಾಷ್ಟ್ರಕ್ಕೆ 10 ಪಟ್ಟು ದಂಡ ವಿಧಿಸಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ಮಿವಿ ಯಿಂದ ಹೊಸ ಸ್ಮಾರ್ಟ್ ವಾಚ್‍ ‘ಮಾಡೆಲ್‍ ಇ’ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

Advertisement

Udayavani is now on Telegram. Click here to join our channel and stay updated with the latest news.

Next