ಬೀದರ್ : ರಾಜ್ಯದ ಬಗ್ಗೆ ಪದೇ ಪದೇ ಅಸಡ್ಡೆ ತೋರುತ್ತಿರುವ ನರೇಂದ್ರ ಮೋದಿ ಸರ್ಕಾರ, ವೈದ್ಯಕೀಯ ಆಕ್ಸಿಜನ್ ಹಂಚಿಕೆಯಲ್ಲೂ ಅನ್ಯಾಯ ಎಸಗುತ್ತಿದೆ. ರಾಜ್ಯದ ಜನರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾಕಿಷ್ಟು ಆಕ್ರೋಶ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 1,013 ಮೆಟ್ರಿಕ್ ಟನ್ ವೈದ್ಯಕೀಯ ಆಕ್ಸಿಜನ್ ಉತ್ಪಾದನೆ ಆಗುತ್ತದೆ; ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಹಂಚಿಕೆ ಮಾಡಿರುವುದು ಕೇವಲ 742 ಮೆಟ್ರಿಕ್ ಟನ್ ಮಾತ್ರ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ, ಆಕ್ಸಿಜನ್ ಕೊರತೆಯಿಂದ ಜನ ಹಾದಿ ಬೀದಿಯಲ್ಲಿ ಸಾಯುತ್ತಿರುವುದು ಇವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸತ್ ಸದಸ್ಯರಿಗೆ ರಾಜ್ಯದ ಜನರ ಪ್ರಾಣ ಕಾಪಾಡುವ ಬದ್ಧತೆ ಇಲ್ಲವೇ? ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯದ ಜನರ ಪ್ರಾಣ ರಕ್ಷಿಸಲು ಅಗತ್ಯ ಪ್ರಮಾಣದ ಆಕ್ಸಿಜನ್, ರೆಮ್ಡಿಸಿವೀರ್ ಚುಚ್ಚುಮದ್ದು ತರಿಸುವಷ್ಟು ಶಕ್ತಿಯೂ ಇವರಿಗಿಲ್ಲವಾಗಿದೆಯೇ? ಅಥವಾ ಜನರ ಬಗ್ಗೆ ನಿರ್ಲಕ್ಷ್ಯ ಧೋರಣೆಯೇ. ಮತಕೊಟ್ಟು ಗೆಲ್ಲಿಸಿದ ರಾಜ್ಯದ ಜನರ ಪ್ರಾಣ ಇವರಿಗೆ ಇಷ್ಟು ನಿಕೃಷ್ಟವಾಯಿತೇ ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಕೋವಿಡ್ ಸೋಂಕು ದೃಢಪಟ್ಟವರಲ್ಲಿ ಶೇ.20ರಷ್ಟು ಜನರ ಮೊಬೈಲ್ ಸ್ವಿಚ್‌ಆಫ್ ; ಆರ್. ಅಶೋಕ್
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಹಲವರು ಮಾರ್ಗ ಮಧ್ಯೆ ಸಾವಿಗೀಡಾಗುತ್ತಿದ್ದಾರೆ. ಇನ್ನು ಸತ್ತ ಬಳಿಕವೂ ಶವ ಸಂಸ್ಕಾರಕ್ಕೆ ದಿನಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವ ರಾಜ್ಯ ಸರ್ಕಾರವನ್ನು ಮತ್ತು ಸಂಸದರನ್ನು ಜನರರಷ್ಟೇ ಅಲ್ಲ ದೇವರೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕೂಡಲೇ ಅವ್ಯವಸ್ಥೆ ಸರಿಪಡಿಸಿ, ರಾಜ್ಯದ ಜನರಿಗೆ ನೆಮ್ಮದಿ ನೀಡುವಂತೆ, ಸೋಂಕಿತರಿಗೆ ಚಿಕಿತ್ಸೆಯ ಖಾತ್ರಿ ಪಡಿಸುವಂತೆ ಆಗ್ರಹಿಸಿದ್ದಾರೆ.