Advertisement

ಅತಿವೃಷ್ಟಿ ಹಾನಿ ಪರಿಶೀಲನೆಯಲ್ಲಿ ಬೀದರ್ ಬಗ್ಗೆ ಸಿಎಂ ಮಲತಾಯಿ ಧೋರಣೆ : ಈಶ್ವರ ಖಂಡ್ರೆ ಆರೋಪ

08:04 PM Oct 18, 2020 | sudhir |

ಬೀದರ್ : ಅತಿವೃಷ್ಠಿಯಿಂದ ಉಂಟಾಗಿರುವ ಹಾನಿಯ ಪರಿಶೀಲನೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿಗಳು ಕೈಗೊಳ್ಳುತ್ತಿರುವ ವೈಮಾನಿಕ ಸಮೀಕ್ಷೆಯಲ್ಲಿ ಬೀದರ್ ಜಿಲ್ಲೆಯನ್ನು ಕೈಬಿಡುವ ಮೂಲಕ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ಈಶ್ವರ ಖಂಡ್ರೆ ಆರೋಪಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಠಿಯಿಂದಾಗಿರುವ ಹಾನಿಯ ವಾಸ್ತವಿಕ ಪ್ರಮಾಣ ಅರಿಯಲು ಅ. 21ರಂದು ಕಲ್ಬುರ್ಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ಕೈಗೊಳ್ಳುತ್ತಿರುವ ಸಿಎಂ ಯಡಿಯೂರಪ್ಪ ಅವರು ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಎದುರಿಸುತ್ತಿರುವ ಬೀದರನ್ನು ಕಡೆಗಣಿಸಿದ್ದಾರೆ ಎಂದು ಕಿಡಿಕಾರಿದರು.

ಬೀದರ್ ಜಿಲ್ಲೆಯಲ್ಲೂ ಅತಿವೃಷ್ಠಿಯಿಂದಾಗಿ ಸಾಕಷ್ಟು ಬೆಳೆ, ಆಸ್ತಿ ಹಾನಿ ಆಗಿದೆ. ಜಿಲ್ಲೆಯಲ್ಲಿ ಇನ್ನೂ ಸಮೀಕ್ಷೆ ನಡೆಯುತ್ತಿದ್ದು, ಅಂದಾಜು ಪ್ರಕಾರ 3.70 ಲಕ್ಷ ಹೇಕ್ಟರ್ ಬಿತ್ತನೆ ಭೂಮಿಯಲ್ಲಿ ಶೇ. 80ರಷ್ಟು ಬೆಳೆ ನೀರು ಪಾಲಾಗಿದ್ದು, ಸುಮಾರು 2 ಸಾವಿರ ಕೋಟಿ ರೂ. ಹಾನಿ ಆಗಿದೆ. ಹಾಗಾಗಿ ಸಿಎಂ ಬಿಎಸ್‌ವೈ ಬೀದರ ಜಿಲ್ಲೆಯಲ್ಲೂ ವೈಮಾನಿಕ ಸಮೀಕ್ಷೆ ನಡೆಸಿ ನಂತರ ಸ್ಥಳೀಯ ಜನಪ್ರತಿನಿಧಿ ಮತ್ತು ರೈತ ಮುಖಂಡರ ಜತೆಗೆ ಸಭೆ ಕೈಗೊಂಡು ತಕ್ಷಣ ಬೆಳೆ ಹಾನಿ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ನಿಮ್ಮ ಬಳಿ ಬಂಡೆ ಇದ್ದರೆ ನಮ್ಮ ಬಳಿ ಕಾಂಗ್ರೆಸ್ ನಿಂದ ಬಂದ ಡೈನಮೈಟ್ ಗಳಿವೆ : ಕಟೀಲ್

ಭಾರಿ ಮಳೆಯಿಂದ ಕರ್ನಾಟಕ ಹಲವು ಜಿಲ್ಲೆಗಳು ನೀರಿನಿಂದ ಜಲಾವೃತ ಆಗಿದ್ದು, ಸಂತ್ರಸ್ತರು ಅನ್ನ ಮತ್ತು ನೀರು ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಈವರೆಗೆ ನಯಾ ಪೈಸೆ ಪರಿಹಾರ ಕಲ್ಪಿಸಲಾಗಿಲ್ಲ. ದಪ್ಪ ಚರ್ಮದ ಸರ್ಕಾರ‍್ಕ ಜನರ ಗೋಳು ಕೇಳುತ್ತಿಲ್ಲ. ಜನರು ಸತ್ತ ಬಳಿಕ ಪರಿಹಾರ ನೀಡುತ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದ ಖಂಡ್ರೆ, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಜನರ ರಕ್ಷಣೆ, ಪರಿಹಾರ, ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಪ್ರವಾಹ ಪೀಡಿತ ಪ್ರದೇಶಕ್ಕೆ ಕಂದಾಯ ಸಚಿವರು ತೋರಿಕೆಗೆ ಮಾತ್ರ ಭೇಟಿ ನೀಡಿ ಹೋಗಿದ್ದಾರೆ. ಸರ್ಕಾರ, ಸಚಿವರು ನಾಟಕ ಮಾಡುವುದನ್ನು ಬಿಟ್ಟು ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಪ್ರಕೃತಿ ವಿಕೋಪ ಮಾನದಂಡದಡಿ ನೀಡುವ ಪರಿಹಾರ ಯಾವುದಕ್ಕೂ ಸಾಲದು. ರೈತರಿಗೆ ಪ್ರತಿ ಹೇಕ್ಟರ್‌ಗೆ ೫೦ ಸಾವಿರ ರೂ. ಪರಿಹಾರ ಸಿಗಬೇಕು. ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಅತ್ಯಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್ ಯಾವುದು ? ಇಲ್ಲಿದೆ ಮಾಹಿತಿ

‘ಸಂಸದರಿಗೆ ಮಾನ- ಮರ್ಯಾದೆ ಇಲ್ಲ’

ಜಿಲ್ಲೆಯ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣ ಫೆಸಬುಕ್‌ನಲ್ಲಿ ಹಾಕಿಕೊಳ್ಳುವ ಸಂಸದರಿಗೆ ಮಾನ, ಮರ್ಯಾದೆ ಇಲ್ಲ ಎಂದು ಶಾಸಕ ಈಶ್ವರ ಖಂಡ್ರೆ ವ್ಯಂಗ್ಯವಾಡಿದರು.

ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೇಗೇರಿಸಿದ ರಸ್ತೆಗಳು ಜನರಿಗೆ ಶಾಪವಾಗಿ ಪರಿಗಣಿಸಿವೆ. ಗುಣಮಟ್ಟದ ಬೀದರ- ಭಾಲ್ಕಿ ರಸ್ತೆಯನ್ನು ಅಗೆದು ಸಿಸಿ ರಸ್ತೆ ಮಾಡಲಾಗುತ್ತಿದೆ. ೪ ವರ್ಷ ಕಳೆದರೂ ಇನ್ನೂ ಕೆಲಸ ಪೂರ್ಣಗೊಂಡಿಲ್ಲ. ಕೇವಲ ತೋರಿಕೆಗಾಗಿ ಇದ್ದ ರಸ್ತೆಯನ್ನು ಅಗೆದು ಜನರ ತೆರಿಗೆ ಹಣವನ್ನು ವ್ಯರ್ಥ್ಯ ಮಾಡುತ್ತಿರುವುದು ಅಪರಾಧ. ಈ ಬಗ್ಗೆ ಹಲವು ಬಾರಿ ಪತ್ರ ಬರೆದರೂ, ಸದನದಲ್ಲಿ ಪ್ರಶ್ನಿಸಿದರೂ ಉತ್ತರ ಸಿಕ್ಕಿಲ್ಲ ಎಂದು ಹೇಳಿದರು.

ನನ್ನ ಪೌರಾಡಳಿತ ಸಚಿವ ಅವಧಿಯಲ್ಲಿ ಬೀದರ ನಗರದ ನೌಬಾದನಿಂದ ಶಹಾಪೂರ ಗೇಟ್‌ವರೆಗಿನ ರಸ್ತೆ ನಿರ್ಮಾಣಕ್ಕೆ ೧೦ ಕೋಟಿ ರೂ. ಹಣ ಮಂಜೂರು ಮಾಡಿ ಆಡಳಿತಾತ್ಮಕ ಅನುಮೋದನೆಯೂ ಕೊಡಲಾಗಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಈ ಕಾಮಗಾರಿಗೆ ತಾಂತ್ರಿಕ ಅನುಮೋದನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ರಸ್ತೆ ನಿರ್ಮಾಣಗೊಂಡರೆ ಬೀದರನ ಅಂದ ಹೆಚ್ಚಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next