Advertisement

“ಪಾರು’ಮಾಡೋ ಶಿವನೇ!

11:01 AM Jun 09, 2018 | Team Udayavani |

“ಪಾರೂ …’ ತೆರೆಯ ಮೇಲೆ ಹೀಗೊಂದು ಡೈಲಾಗ್‌ ಬರುತ್ತಿದ್ದಂತೆಯೇ ನೋಡುಗರ ಶಿಳ್ಳೆ, ಕೇಕೆ, ಚಪ್ಪಾಳೆಗಳ ಜೋರು ಸದ್ದು. ಆ ಪಾರುವಿನ ಪ್ರಿಯತಮ, ಧೋ… ಎಂದು ಸುರಿಯೋ ಮಳೆಯ ನಡುವೆಯೇ ಸ್ಲೋ ಮೋಷನ್‌ನಲ್ಲಿ ಪಾರೂ ಅಂತ ಕೂಗುತ್ತಲೇ ಓಡಿ ಬರುವ ದೃಶ್ಯಗಳಲ್ಲೂ ಮತ್ತದೇ ಶಿಳ್ಳೆ, ಕೇಕೆ, ಚಪ್ಪಾಳೆಗಳ ಸದ್ದು. ಇಂತಹ ಕರತಾಡನ, ಕಿವಿಗಡಚಿಕ್ಕುವ ಸದ್ದು ಅದೆಷ್ಟು ಬಾರಿ ಬಂದು ಹೋಗುತ್ತೆ ಅನ್ನೋದನ್ನು ಹೇಳಲು ಸಾಧ್ಯವೇ ಇಲ್ಲ.

Advertisement

ಅಂಥದ್ದೊಂದು ಸಂದರ್ಭವನ್ನು ಕಣ್ತುಂಬಿಕೊಳ್ಳುವ ಅವಕಾಶ ಮಿಸ್‌ ಮಾಡಿಕೊಳ್ತೀವೇನೋ ಎಂಬ ಅನುಮಾನ, ಆತಂಕವೇನಾದರೂ ಇದ್ದರೆ, “ಶಿವು -ಪಾರು’ವಿನ ಪ್ರೇಮೋತ್ಸವ ಮತ್ತು “ಅಪ್ಪಿಕೋ ಚಳವಳಿ’ಯನ್ನು ನೋಡಿ, ನಕ್ಕು, ನಲಿದು, ಪಾರಾಗಿ ಬಂದರೆ ಅದಕ್ಕಿಂತ ಸಂಭ್ರಮ ಮತ್ತೂಂದಿಲ್ಲ! “ಸಾಯುವ ಮುನ್ನ ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಲೇಬೇಕು’ ಅಂತ ನಿರ್ದೇಶಕರು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಪ್ರೇಕ್ಷಕನಿಗೆ ಸಿನಿಮಾ ನೋಡುವಾಗಲೇ ಅದರ ಒಳಅರ್ಥದ ಮರ್ಮ ಸಂಪೂರ್ಣ ಅರಿವಾಗಿರುತ್ತೆ. ಅಂತಹ “ಅನನ್ಯ ಅನುಭವ’ವನ್ನು “ಶಿವು ಪಾರು’ ಮೂಲಕ ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಕನ್ನಡಕ್ಕೆ ಇದು ತುಂಬಾ ಫ್ರೆಶ್‌ ಕಥೆ. ಯಾಕೆಂದರೆ ದೇವಲೋಕದ ಪ್ರೇಮ ಕಥೆಯನ್ನಿಲ್ಲಿ ಹೇಳಿದ್ದಾರೆ. ರೋಮಿಯೋ-ಜ್ಯುಲಿಯಟ್‌, ಲೈಲಾ-ಮಜ್ನು, ಪಾರು-ದೇವದಾಸ್‌ ಇವರ ಪ್ರೀತಿ ಮುಂದೆ ಯಾರೊಬ್ಬರ ಪ್ರೀತಿಯೂ ಇಲ್ಲ ಅನ್ನೋರಿಗೆ, “ಶಿವು-ಪಾರು’ ಪ್ರೀತಿ ನೋಡಿದ್ಮೇಲೆ “ಶಿವಪ್ಪ’ನ ಮೇಲಾಣೆ, ಇಂಥಾ ಪ್ರೀತೀನೂ ಉಂಟಟೇ…? ಎಂಬ ಪ್ರಶ್ನೆ ಎದುರಾಗದೇ ಇರದು.

“ಸಿನಿಮಾ ನೋಡಿ ಅಳದೇ ಇದ್ದವರಿಗೆ ಒಂದು ಬಹುಮಾನವಿದೆ’. ಹಾಗಂತ ನಿರ್ದೇಶಕರು ಅನೌನ್ಸ್‌ ಮಾಡಿದ್ದರು. ಅಷ್ಟೇ ಅಲ್ಲ, “ಕರವಸ್ತ್ರವನ್ನು ಹಿಡಿದು ಬರಬೇಕು, ಯಾಕೆಂದರೆ, ನಿಮ್ಮ ಕಣ್ಣೀರಿಗೆ ನಾವು ಜವಾಬ್ದಾರರಲ್ಲ’ ಈ ಮಾತನ್ನೂ ಅಷ್ಟೇ ಧೈರ್ಯದಿಂದ ಹೇಳಿಕೊಂಡಿದ್ದರು. ಕಣ್ಣೀರು ಖಂಡಿತಾ ಬರುತ್ತದೆ. ಆದರೆ, ಚಿತ್ರದಲ್ಲಿನ ಮನಕಲಕುವ ದೃಶ್ಯಗಳಿಗಲ್ಲ, ಶಿವು ಕೊಡುವ ಕ್ವಾಟ್ಲೆಗೆ, ವಿನಾಕಾರಣ ಸಮಯ ವ್ಯರ್ಥವಾಯಿತಲ್ಲ ಅನ್ನೋ ಕಾರಣಕ್ಕೆ.

ಆರಂಭದಲ್ಲಿ ತೆರೆ ಮೇಲೆ ಏನೇನು ಆಗುತ್ತೆ ಅಂತ ಅರ್ಥಮಾಡಿಕೊಳ್ಳುವ ಹೊತ್ತಿಗೇ ಮಧ್ಯಂತರವೇ ಮುಗಿದು ಹೋಗುತ್ತೆ. ದ್ವಿತಿಯಾರ್ಧದಲ್ಲಿ ಇನ್ನೇನೋ ಸಿಗಬಹುದು ಅಂದುಕೊಂಡು ಧೈರ್ಯವಾಗಿ ಕೂತು, “ಶಿವು-ಪಾರು’ ಪ್ರೇಮೋತ್ಸವ ನೋಡಿ, ಗರಬಡಿದಂತಾಗಿ ತಾಳ್ಮೆ ಕಳೆದುಕೊಂಡವನಿಗೆ ಮುಗಿಯೋವರೆಗೂ ಮತ್ತದೇ ಗೊಂದಲ. ಆದರೆ, ಮಜಾ ಇರೋದೇ ಹೀರೋ ಓಡಿ ಬರುವ ದೃಶ್ಯ, “ಪಾರೂ …’ ಅನ್ನುವ ಡೈಲಾಗ್‌, ಗೋಳಾಡುವ, ಗೋಗರೆಯುವ ಸಂದರ್ಭ.

Advertisement

ಇದರಲ್ಲಾದರೂ ಖುಷಿಪಡಬೇಕು ಅಂತ ನಿರ್ಧರಿಸೋ, ಪ್ರೇಕ್ಷಕ ಶಿಳ್ಳೆ, ಕೇಕೆ, ಚಪ್ಪಾಳೆ ತಟ್ಟಿ ಸಮಯ ವ್ಯರ್ಥವಾದರೂ ತನಗೆ ತಾನೇ ಖುಷಿಪಟ್ಟು ಹೊರ ಬರುವಂತಾಗುತ್ತಾನೆ. ಇದು ಜನ್ಮಜನ್ಮಾಂತರದ ಪ್ರೇಮಕಥೆ. ಶಿವ-ಪಾರ್ವತಿ ಇಬ್ಬರೂ ಮಾನವ ಜನ್ಮ ತಾಳಿ, ಪ್ರೀತಿಸಿ ಒಂದಾಗುವ ಕಥೆ. ಈ ಜನ್ಮಜನ್ಮಾತರದ ಪ್ರೇಮಕಥೆಯಲ್ಲೊಂದು ದೊಡ್ಡ ಟ್ವಿಸ್ಟ್‌ ಇದೆ. ಕಿಟ್ಟಪ್ಪ ಯಾಕೆ ಶಿವು, ಪಾರುನ ಹತ್ಯೆ ಮಾಡುತ್ತಾರೆಂಬುದು? ಕಟ್ಟಪ್ಪ “ಬಾಹುಬಲಿ’ನ ಯಾಕೆ ಕೊಂದ ಎಂಬುದಕ್ಕೆ ಎರಡನೇ ಭಾಗ ಬಂತು.

ಆದರೆ, ಇಲ್ಲಿ ಕಿಟ್ಟಪ್ಪ ಯಾಕೆ ಕೊಲ್ತಾನೆ ಎಂಬುದಕ್ಕೆ ಇಲ್ಲೇ ಉತ್ತರವಿದೆ. ಅದಕ್ಕಾದರೂ ಸಿನಿಮಾ ನೋಡಬೇಕು, ಇಲ್ಲವಾದರೆ ಮೆಚ್ಚರಾ ಶಿವ-ಪಾರ್ವತಿಯರು! ನಾಯಕ ಅಮೆರಿಕ ಸುರೇಶ್‌ ಇಲ್ಲಿ ನೋಡುಗರ ತಾಳ್ಮೆ ಕೆಡಿಸುವುದರ ಜೊತೆಗೆ ಸಾಕಷ್ಟು ಗ್ಲಿಸರಿನ್‌ ಮೊರೆ ಹೋಗಿದ್ದಾರೆ. ಸಿನಿಮಾ ಪ್ರೀತಿ ತುಂಬಿಕೊಂಡಿದೆ ಎನ್ನುವುದಕ್ಕೆ ಅವರ ಕಥೆ, ಚಿತ್ರಕಥೆ, ಮಾತು, ಸಂಗೀತ, ಸಾಹಿತ್ಯ, ನಟನೆ, ಹರಿಬಿಡುವ ಡೈಲಾಗು ಎದ್ದು ಕಾಣುತ್ತೆ. ಸಿನಿಮಾ ಪ್ರೀತಿಗೆ ಒಂದೊಳ್ಳೆಯ ಕಥೆ, ನಿರೂಪಣೆ ಮುಖ್ಯ ಅನ್ನುವುದನ್ನು ಅರಿತರೆ “ಶಿವು-ಪಾರು’ಗಿಂತಲೂ ಒಳ್ಳೇ ಚಿತ್ರ ಕೊಡಲು ಸಾಧ್ಯವಿದೆ.

ದಿಶಾ ಪೂವಯ್ಯ ಕೂಡ ಗ್ಲಿಸರಿನ್‌ ಮೊರೆ ಹೋಗಿದ್ದಾರೆ. ಉಳಿದಂತೆ ರಮೇಶ್‌ ಭಟ್‌, ಚಿತ್ರಾ ಶೆಣೈ, ತರಂಗ ವಿಶ್ವ, ಹೊನ್ನವಳ್ಳಿ ಕೃಷ್ಣ ಇತರರು ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಆರು ಹಾಡುಗಳಲ್ಲಿ ಎರಡು ಜನಪದ ಗೀತೆಗೂ ಜಾಗವಿದೆ. ವಿನೀತ್‌ ರಾಜ್‌ ಮೆನನ್‌ ಹಿನ್ನೆಲೆ ಸಂಗೀತಕ್ಕಿನ್ನೂ ಸ್ವಾದ ಬೇಕಿತ್ತು. ಶಿವು-ಪಾರುವಿನ ಹನಿಮೂನ್‌ ಪ್ರಸಂಗ, ಹಾಡು, ಕುಣಿತವನ್ನು ಹಾಲೇಶ್‌ ಚೆನ್ನಾಗಿ ಸೆರೆಹಿಡಿದಿದ್ದಾರೆ.

ಚಿತ್ರ: ಶಿವುಪಾರು
ನಿರ್ಮಾಣ: ಶೈಲಜ ಸುರೇಶ್‌
ನಿರ್ದೇಶನ: ಅಮೆರಿಕ ಸುರೇಶ್‌
ತಾರಾಗಣ: ಅಮೆರಿಕ ಸುರೇಶ್‌, ದಿಶಾ ಪೂವಯ್ಯ, ರಮೇಶ್‌ ಭಟ್‌, ಚಿತ್ರಾಶೆಣೈ, ತರಂಗ ವಿಶ್ವ, ಸುಂದರ್‌, ಹೊನ್ನವಳ್ಳಿ ಕೃಷ್ಣ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next