Advertisement

ಸಮಾಧಿಯಾಗುವುದರಿಂದ ಪಾರಾಗಿದ್ದೇವೆ

11:07 PM Dec 08, 2019 | Lakshmi GovindaRaj |

ಬೆಂಗಳೂರು: ನಾವು ಕಾಂಗ್ರೆಸ್‌ನಲ್ಲೇ ಇದ್ದಿದ್ದರೆ ಸಮಾಧಿಯಾಗುತ್ತಿದ್ದೆವೇನೋ. ಆದರೆ, ಕಾಂಗ್ರೆಸ್‌ನಿಂದ ಹೊರ ಬಂದು ಸಮಾಧಿಯಾಗುವುದರಿಂದ ಪಾರಾಗಿದ್ದೇವೆ. ಸದ್ಯದಲ್ಲೇ 17 ಮಂದಿ ಶಾಸಕರು ಒಟ್ಟಿಗೆ ಸೇರಿ ಚರ್ಚಿಸುತ್ತೇವೆ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಹೇಳಿದರು.

Advertisement

ನಗರದಲ್ಲಿ ಭಾನುವಾರ ಮಾತನಾಡಿದ ಅವರು, ನಾವು ಕಾಂಗ್ರೆಸ್‌ನಲ್ಲಿದ್ದಿದ್ದರೆ ಸಮಾಧಿಯಾಗುತ್ತಿದ್ದೆವು. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ರಾಜ್ಯಮಟ್ಟದ ನಾಯಕರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಕ್ಷೇತ್ರದಲ್ಲಿ ಏನೆಲ್ಲಾ ಅಪಪ್ರಚಾರ, ಅವಮಾನ ಮಾಡಿದರು ಎಂಬುದು ಗೊತ್ತಿದೆ. ಆದರೆ, ಎಲ್ಲವನ್ನೂ ಕ್ಷೇತ್ರದ ಜನ ಸಹಿಸಿಕೊಂಡು ಯಾವುದೇ ಗಲಾಟೆಯಿಲ್ಲದಂತೆ ಮತದಾನದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಕಾಂಗ್ರೆಸ್‌ನವರು ತಮ್ಮ ಬೆಂಬಲಿತ ಮತಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನವನ್ನೇ ಮಾಡಲಿಲ್ಲ. ಅವರಿಗೆ ಕಷ್ಟವಾದ ಕಡೆ ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ. ಹಾಗಾಗಿ, ಕಾಂಗ್ರೆಸ್‌ನವರಿಗೆ ಮಾತನಾಡುವ ನೈತಿಕತೆಯಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಉಪಚುನಾವಣೆಯಲ್ಲಿ ಪರಾಭವಗೊಂಡವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗುವುದಿಲ್ಲ.

ವಿಧಾನ ಪರಿಷತ್‌ ಸ್ಥಾನ ನೀಡಿ ಎಂದು ಯಾರೊಬ್ಬರೂ ಕೇಳಿಲ್ಲ. ಎಚ್‌.ವಿಶ್ವನಾಥ್‌ ಅವರಿಗೆ ಉಪಚುನಾವಣೆಗೆ ಸ್ಪರ್ಧಿಸದಂತೆ ಹೇಳಿದ್ದರು. ಆದರೆ, ಅವರು ಸ್ಪರ್ಧಿಸಿದರು. ಬಿಜೆಪಿ ಯಾವ ಅನರ್ಹ ಶಾಸಕರಿಗೂ ಮೋಸ ಮಾಡಿಲ್ಲ. ರೋಷನ್‌ ಬೇಗ್‌ ಅವರು ಉಪಚುನಾವಣೆಗೆ ಸ್ಪರ್ಧಿಸಿಯೇ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಪಕ್ಷ ಹಾಳು ಮಾಡಿದರು: ಕಾಂಗ್ರೆಸ್‌ ನಾಯಕರಿಗೆ ಪಕ್ಷವನ್ನು ಬೆಳೆಸುವ ಉದ್ದೇಶವೇ ಇರಲಿಲ್ಲ. ಕಾಂಗ್ರೆಸ್‌ ನಾಯಕರೇ ಪಕ್ಷವನ್ನು ಹಾಳು ಮಾಡಿದರು. ನಾನು ಕಾಂಗ್ರೆಸ್‌ನಲ್ಲಿದ್ದಾಗಲೂ ನಾಯಕತ್ವಕ್ಕಾಗಿ ಸ್ಪರ್ಧೆ ಮಾಡಿರಲಿಲ್ಲ. ಒಕ್ಕಲಿಗ ನಾಯಕತ್ವಕ್ಕಾಗಿ ಆರ್‌.ಅಶೋಕ್‌ ಅವರೊಂದಿಗೆ ಸ್ಪರ್ಧೆಗಿಳಿಯಲಿಲ್ಲ ಎಂದರು.

Advertisement

12 ಶಾಸಕರು ಸಂಪರ್ಕದಲ್ಲಿ!: ಜೆಡಿಎಸ್‌ನ 9 ಹಾಗೂ ಕಾಂಗ್ರೆಸ್‌ನ ಮೂವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ, ರಾಜೀನಾಮೆ ನೀಡುವುದು ಬೇಡ ಎಂದು ಅವರಿಗೆ ಹೇಳಿದ್ದೇನೆ. ನಾವು ರಾಜೀನಾಮೆ ಕೊಟ್ಟು ಮೂರು ತಿಂಗಳು ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ರಾಜೀ ನಾಮೆ ನೀಡಿದರೆ ಕ್ಷೇತ್ರದಲ್ಲಿ ರಾಜಕೀಯವಾಗಿ ಸಾಕಷ್ಟು ಹಾನಿ ಮಾಡುತ್ತಾರೆ. ಇದಕ್ಕೆಲ್ಲಾ ಸಿದ್ಧರಿದ್ದರೆ ರಾಜೀನಾಮೆ ನೀಡಿ ಎಂದು ಸಲಹೆ ನೀಡಿದ್ದೇನೆ. ಬಿಜೆಪಿ ಸರ್ಕಾರ ಸುಭದ್ರವಾಗಿರಲಿದ್ದು, ಅಗತ್ಯಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ.
-ಎಸ್‌.ಟಿ.ಸೋಮಶೇಖರ್‌, ಅನರ್ಹ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next