Advertisement
ಮಾ. 21 ರಂದು ಎಸೆಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಎ. 9ರ ವರೆಗೆ ನಡೆಯಲಿದೆ. ಅವಿಭಜಿತ ಕುಂದಾಪುರ ತಾಲೂಕಿನ ಉಭಯ ವಲಯಗಳಾದ ಕುಂದಾಪುರ ಹಾಗೂ ಬೈಂದೂರಿನಲ್ಲಿ ಹಿಂದಿನ ಫಲಿತಾಂಶವನ್ನು ಮತ್ತಷ್ಟು ಹೆಚ್ಚಿಸಲು ಸತತ ಪ್ರಯತ್ನ ನಡೆಯುತ್ತಿದೆ.
ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದರೆ, ಕುಂದಾಪುರ ವಲಯ ಶೇ.90.18 ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯದಲ್ಲಿ ಒಟ್ಟಾರೆ 13 ನೇ ಸ್ಥಾನ ಪಡೆದಿತ್ತು. ಇದನ್ನು ಹೆಚ್ಚಿಸಲು ಈ ಬಾರಿ “ಟಾರ್ಗೆಟ್ -95′ ಯೋಜನೆ ಹಾಕಿಕೊಂಡಿದೆ. ಕಳೆದ ಬಾರಿ “ಟಾರ್ಗೆಟ್ -90′ ಯೋಜನೆ ಹಾಕಿಕೊಂಡ ಕುಂದಾಪುರ ಅದರಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಕುಂದಾಪುರ ವಲಯದಲ್ಲಿ 20 ಸರಕಾರಿ, 12 ಅನುದಾನ ರಹಿತ ಹಾಗೂ 8 ಅನುದಾನಿತ ಸೇರಿದಂತೆ ಒಟ್ಟು 40 ಪ್ರೌಢಶಾಲೆಗಳಿದ್ದು, ಸುಮಾರು 2,300 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
Related Articles
ಬೈಂದೂರು ಕಳೆದ ಬಾರಿ ಜಿಲ್ಲೆಯಲ್ಲಿ ವಲಯವಾರು ಫಲಿತಾಂಶದಲ್ಲಿ 5 ನೇ ಸ್ಥಾನ ಪಡೆದಿದ್ದರೂ, ಒಟ್ಟಾರೆ ಫಲಿತಾಂಶವನ್ನು ಹೆಚ್ಚಿಸಿಕೊಂಡಿತ್ತು. ಕಳೆದ ಬಾರಿ ಶೇ. 85.09 ಫಲಿತಾಂಶ ಗಳಿಸಿದ್ದು, ಈ ಬಾರಿ “ಟಾರ್ಗೆಟ್-90′ ಯೋಜನೆಯೊಂದಿಗೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಬೈಂದೂರು ವಲಯದಲ್ಲಿ 16 ಸರಕಾರಿ, 5 ಅನುದಾನಿತ ಹಾಗೂ 11 ಅನುದಾನ ರಹಿತ ಸೇರಿ ಒಟ್ಟು 32 ಪ್ರೌಢಶಾಲೆಗಳಿದ್ದು, ಸುಮಾರು 2,100 ಕ್ಕೂ ಅಧಿಕ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
Advertisement
ಫಲಿತಾಂಶ ಹೆಚ್ಚಳಕ್ಕೆ ಕೈಗೊಂಡ ಕ್ರಮಗಳುಹಿಂದಿನ ಫಲಿತಾಂಶವನ್ನು ಉಳಿಸಿಕೊಂಡು, ಮತ್ತಷ್ಟು ಹೆಚ್ಚಿಸುವ ಕುರಿತಂತೆ ಅನೇಕ ಪೂರ್ವ ತಯಾರಿಗಳನ್ನು ಮಾಡುತ್ತಿದೆ. ಈ ಕುರಿತು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್ ಹಾಗೂ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್. ಪ್ರಕಾಶ್ ಫಲಿತಾಂಶ ಹೆಚ್ಚಿಸಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದ್ದಾರೆ. 1. ಡಿಸ್ಟಿಂಕ್ಷನ್ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತಲಾ 4 ಶಾಲೆಗಳಂತೆ ವಿಶೇಷ ಪ್ರೇರಣಾ ಶಿಬಿರ. 2. ಪ್ರತೀ ಶಾಲೆಯಲ್ಲಿಯೂ ಹೆತ್ತವರ ಸಭೆ ನಡೆಸಿ, ಸಂಪನ್ಮೂಲ ವ್ಯಕ್ತಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಉಪನ್ಯಾಸ. 3. ಸಂಜೆ ಹೆಚ್ಚುವರಿಯಾಗಿ ವಿಶೇಷ ತರಗತಿಗಳನ್ನು, ಸಮೂಹ ಅಧ್ಯಯನ, ವಿಷಯವಾರು ಶಿಕ್ಷಕರಿಗೆ ಪ್ರತ್ಯೇಕ ಕಾರ್ಯಾಗಾರ. 4. ಈ ಬಾರಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಹೊಸ ಪಠ್ಯ ಕ್ರಮವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 6 ವಿಷಯಗಳದ್ದೂ ಕೂಡ ಪ್ರಶ್ನೆಪ್ರತ್ರಿಕೆ ಕಾರ್ಯಾಗಾರ. 5. 3 ಬಾರಿ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದ್ದು, ಶಾಲೆ ಫಲಿತಾಂಶ ಹೆಚ್ಚಿಸಲು ಸೂಕ್ತ ಸಲಹೆ ನೀಡಲಾಗಿದೆ. 6. ಕಳೆದ ಬಾರಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಹೆಚ್ಚಿನ ಒತ್ತು, ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನ.