Advertisement

ಭೊರ್ಗರೆವ ಎರ್ಮಾಯಿ ಜಲಪಾತ

11:53 AM Dec 08, 2018 | |

 ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಪಟ್ಟಣದಿಂದ ಚಾರ್ಮಾಡಿ -ಕೊಟ್ಟಿಗೆಹಾರ ರಸ್ತೆಯಲ್ಲಿ ಸಾಗುತ್ತಾ ಸೋಮಂತಡ್ಕ ಎಂಬಲ್ಲಿ ಎಡಗಡೆ ತಿರುವಿನ ರಸ್ತೆಯಲ್ಲಿ ಸುಮಾರು ಹದಿನೈದರಿಂದ ಹದಿನಾರು ಕಿಲೋಮೀಟರ್‌ ಸಾಗಿದಾಗ ಕಾಜೂರು ಎಂಬಲ್ಲಿ ಸ್ವಂತ ವಾಹನ ಅಥವಾ ಬಸ್‌ನಿಂದ ಇಳಿದು, ಕಾಡು ದಾರಿಯಲ್ಲಿ ಸುಮಾರು 2 ಕಿ.ಮೀ ಕ್ರಮಿಸಿದರೆ ಈ ಪ್ರಸಿದ್ಧ ಎರ್ಮಾಯಿ ಜಲಪಾತದ ತಪ್ಪಲನ್ನು ತಲುಪಬಹುದು.

Advertisement

ಪ್ರವಾಸಿಗರ ಕಣ್ಮನಗಳಿಗೆ ಆಹ್ಲಾದ ನೀಡುವ ಜಲಪಾತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟಿವೆ. ಅಂಥವುಗಳ ಪೈಕಿ ಬೆಳ್ತಂಗಡಿ ತಾಲೂಕಿನ ದಿಡುಪೆಯ ಕಾಜೂರ ಬಳಿಯ, ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಎಂಬಲ್ಲಿ ದಟ್ಟ ಕಾನನ ನಡುವೆ ಪ್ರಶಾಂತವಾದ ಸ್ಥಳದಲ್ಲಿದೆ ಈ ಜಲಪಾತ.  ಸುಮಾರು 80 ಅಡಿ ಎತ್ತರದ ಕಲ್ಲು ಬಂಡೆಗಳ ಮಧ್ಯದಿಂದ ವಯ್ನಾರವಾಗಿ ಈ ಧುಮುಕುವ ಜಲಪಾತವನ್ನು ನೋಡುವುದೇ ಹಬ್ಬ. ಎರ್ಮಾಯಿ ಜಲಪಾತ ನೋಡಲು ಎಷ್ಟು ಸುಂದರವಾಗಿದೆ ಇದೆಯೋ, ಅಲ್ಲಿಗೆ ತಲುಪುವ ಮಾರ್ಗವೇ ಅಷ್ಟೇ ದುರ್ಗಮವಾಗಿದೆ. ದಟ್ಟ ಕಾನನಗಳ ನಡುವಿನ ಕವಲು ದಾರಿ ಪ್ರವಾಸಿಗರನ್ನು ಇನ್ನಷ್ಟು ಪುಳಕಿತರನ್ನಾಗಿಸುತ್ತದೆ. ದಾರಿಯ ಮಧ್ಯದಲ್ಲಿ ಇರುವ ಹಳ್ಳ, ತೊರೆ, ಸೇತುವೆಗಳನ್ನು ದಾಟುತ್ತಾ ಸಾಗುವಾಗ ಆಗುವ ಅನುಭವವೇ ವಿಭಿನ್ನ. ಈ ಜಲಪಾತದಿಂದ ಹರಿದು ಬರುವ ನೀರಿನಿಂದ ಅಲ್ಲಲ್ಲಿ ಕಿರು ವಿದ್ಯುತ್‌ ಉತ್ಪಾದನಾ ಸ್ಥಾವರವನ್ನೂ ಸ್ಥಾಪಿಸಲಾಗಿದ್ದು, ವರ್ಷಪೂರ್ತಿ ಇಲ್ಲಿನ ಸುತ್ತಮುತ್ತಲಿನ ಮನೆಗಳಿಗೆ ನಿರಂತರವಾಗಿ ವಿದ್ಯುತ್‌ ದೊರಕುವಂತೆ ಮಾಡಲಾಗಿರುವುದು ಇಲ್ಲಿನ ವಿಶೇಷ.  

 ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಪಟ್ಟಣದಿಂದ ಚಾರ್ಮಾಡಿ  -ಕೊಟ್ಟಿಗೆಹಾರ ರಸ್ತೆಯಲ್ಲಿ ಸಾಗುತ್ತಾ ಸೋಮಂತಡ್ಕ ಎಂಬಲ್ಲಿ ಎಡಗಡೆ ತಿರುವಿನ ರಸ್ತೆಯಲ್ಲಿ ಸುಮಾರು ಹದಿನೈದರಿಂದ ಹದಿನಾರು ಕಿಲೋಮೀಟರ್‌ ಸಾಗಿದಾಗ ಕಾಜೂರು ಎಂಬಲ್ಲಿ ಸ್ವಂತ ವಾಹನ ಅಥವಾ ಬಸ್‌ನಿಂದ ಇಳಿದು, ಕಾಡು ದಾರಿಯಲ್ಲಿ ಸುಮಾರು 2 ಕಿ.ಮೀ ಕ್ರಮಿಸಿದರೆ ಈ ಪ್ರಸಿದ್ಧ ಎರ್ಮಾಯಿ ಜಲಪಾತದ ತಪ್ಪಲನ್ನು ತಲುಪಬಹುದು. ಕಾಜೂರಿನಿಂದ ಈ ಜಲಪಾತದ ತಪ್ಪಲನ್ನು ತಲುಪುವ ದಾರಿಯು ಸಂಪೂರ್ಣ ಕಚ್ಚಾ (ಮಣ್ಣಿನ) ರಸ್ತೆಯಾಗಿದೆ.  ಇಲ್ಲಿಗೆ ಸಾಗುವ ದಾರಿಯ ಮಧ್ಯೆ ಸುಮಾರು ಅರ್ಧ ಗಂಟೆಗಳ ಕಾಲ ತುಂಬಿ ಹರಿಯುವ ನೀರಿನÇÉೇ ನಡೆದುಕೊಂಡು ಹೋಗುವುದು ಚಾರಣಿಗರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ.

ಈ ಹೆಸರು ಬಂದಿದ್ದು ಹೇಗೆ ?

Advertisement

ಏಳುವರೆ ಹಳ್ಳ ಎಂಬ ಸ್ಥಳ ಎರ್ಮಾಯಿ ಜಲಪಾತದ ಉಗಮ ಸ್ಥಾನವಂತೆ. 
ಹಿಂದಿನ ಕಾಲದಲ್ಲಿ ಏಳು ಮಂದಿ ಯುವಕರು ಗ¨ªೆಯ ಉಳುಮೆಯನ್ನು ಮಾಡಿ ಉಳುಮೆಯ ಎತ್ತುಗಳನ್ನು ಈಗ ಜಲಪಾತವಿರುವ ಸ್ಥಳದಲ್ಲಿ ನಿತ್ಯ ತೊಳೆಯುತ್ತಿದ್ದರಂತೆ.  ಒಂದು ದಿನ ಇದ್ದಕ್ಕಿದ್ದಂತೆ ಈ ಎತ್ತುಗಳು ಇಲ್ಲಿಂದ ಮಾಯವಾದವೆಂದು ಇಲ್ಲಿನ ಹಿರಿಯರು ಕಥೆಯೊಂದನ್ನು ಹೇಳುತ್ತಾರೆ. ಇಲ್ಲಿನ ಪ್ರಾದೇಶಿಕ ಭಾಷೆ ತುಳುವಾಗಿದ್ದು, ಎತ್ತಿಗೆ ಎರು ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಸ್ಥಳದಲ್ಲಿ ಎತ್ತುಗಳು ಮಾಯವಾದ ಕಾರಣದಿಂದ ಎರು ಮಾಯ ಎಂದು ಜನರು ಕರೆಯುತ್ತಿದ್ದು, ಕ್ರಮೇಣ ಜನರ ಬಾಯಿ ಮಾತಿನಲ್ಲಿ ಎರು ಮಾಯ ಸ್ಥಳವು ಎರ್ಮಾಯಿ ಎಂದು ಬದಲಾಯಿತೆಂದು ಸ್ಥಳ ಪುರಾಣ ತಿಳಿಸುತ್ತದೆ. ಈ ಜಲಪಾತ ಹಾಗೂ ಸುತ್ತಮುತ್ತಲ ಪ್ರದೇಶವೇ ವಿಭಿನ್ನವಾಗಿವೆ. 
 ಭೋರ್ಗರೆವ ಜಲಪಾತದ ಒಂದೆಡೆಯಾದರೆ, ಹಚ್ಚ ಹಸುರಿನಿಂದ ಕಂಗೊಳಿಸುವ ಕಾಡು ಹಾಗೂ ಹಚ್ಚ ಹಸಿರ ತೋಟಗಳು ಇನ್ನೊಂದೆಡೆ.

ಈ ಜಲಪಾತವು ಪಟ್ಟಣದಿಂದ ಬಲು ದೂರದಲ್ಲಿ ಇರುವುದರಿಂದ, ಜಲಪಾತಕ್ಕೆ ಸಮೀಪದಲ್ಲಿ ಯಾವುದೇ ಹೋಟೆಲುಗಳಿಲ್ಲ. ಆದ್ದರಿಂದ, ಇಲ್ಲಿಗೆ ಬರುವ ಪ್ರವಾಸಿಗರು ಉಜಿರೆ ಅಥವಾ ಸೋಮಂತಡ್ಕ ಪಟ್ಟಣದಿಂದಲೇ ಊಟ-ತಿಂಡಿ ಕಟ್ಟಿಕೊಂಡು ಬರಬೇಕು. ಬೆಟ್ಟದತಪ್ಪಲಲ್ಲಿ ಈ ಜಲಪಾತವಿರುವುದರಿಂದ ವರ್ಷವಿಡೀ ತುಂಬಿ ಧುಮುಕುತ್ತದೆ. ಇಲ್ಲಿಗೆ ಸಾಗುವ ದಾರಿಯಲ್ಲಿ ಜಿಗಣೆಗಳು ಶತ್ರುವಿನಂತೆ ಪ್ರವಾಸಿಗರನ್ನು ಕಾಡುವುದರಿಂದ ಇವುಗಳಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರು ನಶ್ಯ ಅಥವಾ ಸುಣ್ಣವನ್ನು ಕಾಲುಗಳಿಗೆ ಸವರಿಕೊಂಡು ಹೋಗುವುದು ಒಳ್ಳೆಯದು. 

ಇಲ್ಲಿನ ಜಲಪಾತದ ಅಕ್ಕಪಕ್ಕದ ಬಂಡೆಗಳು ಅತ್ಯಂತ ಆಳವಾಗಿ ಹಾಗೂ ಕಡಿದಾಗಿದ್ದು ನೋಡಲು ನಯನ ಮನೋಹರವಾಗಿದ್ದರೂ, ಸಾವನ್ನೇ ತಮ್ಮ ಮಡಿಲಲ್ಲಿ ಬಚ್ಚಿಟ್ಟುಕೊಂಡಿವೆ ಎನ್ನಬಹುದು. ಕೌಶಲ್ಯವನ್ನು ಈ ಬಂಡೆ ಕಲ್ಲುಗಳ ಮೇಲೆ ತೋರಲು ಹೋಗಿ, ಈ ಬಂಡೆ ಕಲ್ಲುಗಳ ಮೇಲೆ ಏರಿ ಅದೆಷ್ಟೋ ಮಂದಿ ಅಲ್ಲಿಂದ ಜಾರಿ ಕೆಳಗೆ ಬಿದ್ದು ಪ್ರಾಣಕ್ಕೆ ಸಂಚಕಾರ ಮಾಡಿಕೊಂಡ ಘಟನೆಗಳು ನಡೆದಿವೆ. ಹಾಗಾಗಿ, ಎರ್ಮಾಯಿ ಜಲಪಾತ ನೋಡಲು ಬರುವವರು ಯಾವುದೇ ಕಾರಣಕ್ಕೂ ರಭಸವಾಗಿ ಓಡಾಡಲು ಹೋಗಬಾರದು. ಜಲಪಾತದ ದಾರಿಯಲ್ಲಿ ಹೋಗುವಾಗ ಸಾಹಸ ಪ್ರದರ್ಶನಕ್ಕೆ ಮುಂದಾಗಬಾರದು.  

ಸಂತೋಷ್‌ ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next