ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಟುತ್ತಾ ಸಾಗುತ್ತಿದ್ದ ಎರ್ಮಾಳು ಕಿರು ಸೇತುವೆ ಕೊನೆಗೂ ಪೂರ್ಣ ಗೊಂಡು ಸಂಚಾರಕ್ಕೆ ಮುಕ್ತಗೊಂಡಿದೆ.
ಹಳೆಯ ಎರ್ಮಾಳು ಕಲ್ಸಂಕ ಭಾಗದ ದುರ್ಬಲ ಸೇತುವೆ ಯಲ್ಲಿಯೇ ವಾಹನಗಳು ಈವ ರೆಗೆ ಸಂಚರಿಸುತ್ತಿದ್ದು ಧೂಳಿನೊಂದಿಗೆ ವಾಹನ ದಟ್ಟನೆಗೆ ಕಾರಣ ವಾಗುತ್ತಿತ್ತು. ಇದೀಗ ಹೊಸ ಸೇತುವೆ ಪೂರ್ಣಗೊಂಡಿದ್ದು, ಸ್ವಲ್ಪ ನಿರಾಳವೆನಿಸಿದೆ. ಆದರೆ ಸೇತುವೆ ಸಂಪರ್ಕಿಸುವ ಹೆದ್ದಾರಿ ಭಾಗದ ಕಾಮಗಾರಿಗಳು ಇನ್ನೂ ಆಗಿಲ್ಲ.
ಪೂರ್ವ ಬದಿಯ ಕಿರು ಸೇತುವೆ ಮತ್ತು ಹೆದ್ದಾರಿಯ ಕಾಮಗಾರಿಗಳು ಇನ್ನಷ್ಟೇ ಪೂರ್ಣಗೊಳ್ಳಬೇಕಿವೆ. ಎರಡು ಮೂರು ವರ್ಷಗಳಿಂದ ಕಾಮಗಾರಿಗಳು ನಡೆಯುತ್ತಿದ್ದರೂ ಕೇವಲ ಒಂದು ಸೇತುವೆಯನ್ನಷ್ಟೇ ಈಗ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇನ್ನೊಂದರ ಕಾಮಗಾರಿ ಜಿಲ್ಲಾಧಿಕಾರಿ ಸೂಚನೆಯಂತೆ ಮಾರ್ಚ್ 2020ರ ಒಳಗಾಗಿ ಮುಗಿಸ ಬೇಕಾದ ಅನಿವಾರ್ಯವಿದೆ. ಸದ್ಯ ಕೆಲಸ ಇನ್ನೂ ಬಾಕಿ ಇರುವುದರಿಂದ ದಟ್ಟನೆಯ ಅವಧಿಗಳಲ್ಲಿ ಇಲ್ಲಿ ಸಂಚಾರ ಸಮಸ್ಯೆ ಕಾಡುತ್ತದೆ.
ಪಡುಬಿದ್ರಿ ಹೆದ್ದಾರಿ ಕಾಮಗಾರಿ ಆಮೆ ವೇಗದಲ್ಲೇ ಸಾಗಿದೆ. ಇನ್ನೂ ಇಲ್ಲಿನ ಸರ್ವಿಸ್ ರಸ್ತೆ ಕಾಮಗಾರಿಗಳು ಪೂರ್ಣವಾಗಿಲ್ಲ. ಪಶ್ಚಿಮ ಬದಿಯಲ್ಲಿನ ಒಳಚರಂಡಿ ಕಾಮಗಾರಿಗಳ ಸಹಿತ ಮೆಟಲಿಂಗ್ ಕೂಡಾ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ.
ಇನ್ನೊಂದು ಕಿರು ಸೇತುವೆ ಜ.15ರೊಳಗೆ ಪೂರ್ಣ
ಎರ್ಮಾಳು ಕಲ್ಸಂಕ ಇನ್ನೊಂದು ಕಿರು ಸೇತುವೆ ಜ. 15ರೊಳಗಾಗಿ ಪೂರ್ಣಗೊಳ್ಳಲಿದೆ. ಅಲ್ಲಲ್ಲಿ ಬಾಕಿ ಉಳಿದಿರುವ ಮರದ ಕಾಂಡಗಳನ್ನು ಮೇಲೆತ್ತಲಾಗುವುದು ಎಂದು ನವಯುಗ ಅಧಿಕಾರಿ ಶಂಕರ್ ರಾವ್ ತಿಳಿಸಿದ್ದಾರೆ.