Advertisement

ವಿಧಾನ ಸಭಾ ಚುನಾವಣೆಗೆ ಸಜ್ಜಾಗಿ: ಜೆ. ಹುಚ್ಚಪ್ಪ ಮನವಿ

01:10 PM Feb 17, 2017 | Team Udayavani |

ದಾವಣಗೆರೆ: ರಾಜ್ಯ ಸರ್ಕಾರದ ಸಾಧನೆ, ಕಾರ್ಯಕ್ರಮ, ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವ ಮನೋಭೂಮಿಕೆ ಸಿದ್ಧಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ವೀಕ್ಷಕ ಜೆ. ಹುಚ್ಚಪ್ಪ ಮನವಿ ಮಾಡಿದ್ದಾರೆ.

Advertisement

 ಗುರುವಾರ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಸಾಧನೆಯನ್ನು ಮತದಾರರಿಗೆ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು.  ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವುದರಿಂದ ಈ ಕ್ಷಣದಿಂದಲೇ ಚುನಾವಣೆಗೆ ಸಿದ್ಧರಾಗಬೇಕು ಎಂದರು. 

ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಅವಾಂತರದಿಂದ ಜನಸಾಮಾನ್ಯರು ಇನ್ನಿಲ್ಲದ ಸಮಸ್ಯೆ ಅನುಭವಿಸುತ್ತಿದ್ದಾರೆ. 500, 1 ಸಾವಿರ ನೋಟುಗಳ ಅಮಾನ್ಯದ ನಂತರವಂತೂ ಜನರ ಸಮಸ್ಯೆ ಇನ್ನೂ ಹೆಚ್ಚಾಗಿದೆ. ಇಂಥಹ ಜನವಿರೋಧಿ ಕ್ರಮಗಳ ಬಗ್ಗೆಯೂ ಜನರಿಗೆ ತಿಳಿಸಬೇಕು ಎಂದು ಹೇಳಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ ಗೆ 1 ಸಾವಿರ ಕೋಟಿ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿರುವುದು ಸುಳ್ಳು ಎಂಬುದು ಸದನದಲ್ಲೇ ಮನವರಿಕೆ ಆಗಿದೆ. ಕಾಂಗ್ರೆಸ್‌ ಸರ್ಕಾರದ ಸಾಧನೆ ಸಹಿಸಲಾರದೆ ಹೊಟ್ಟೆ ಉರಿಯಿಂದ ಇಂತಹ ಆಧಾರ ಇಲ್ಲದ ಸುಳ್ಳು ಆರೋಪ ಮಾಡಲಾಗುತ್ತಿದೆ.

ಒಂದು ಸುಳ್ಳನ್ನು 100 ಬಾರಿ ಹೇಳುವ ಮೂಲಕ ಅದನ್ನು ಸತ್ಯ ಎಂದು ತೋರಿಸುವಂತಹ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು. ಮುಂದಿನ ದಿನಗಳಲ್ಲಿ ಎಲ್ಲ ವೀಕ್ಷಕರು 8 ಕ್ಷೇತ್ರಕ್ಕೆ ಭೇಟಿ ನೀಡಿ, ಅಲ್ಲಿನ ಮತದಾರರ ಮನದಲ್ಲಿರುವ ಅಭಿಪ್ರಾಯ ಸಂಗ್ರಹಿಸುತ್ತೇವೆ. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದರ ಬಗ್ಗೆಯೂ ಎಐಸಿಸಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

Advertisement

ಇಂದು ನಡೆದಂತಹ ಜಿಲ್ಲಾ ಕಾರ್ಯಕಾರಣಿಗೆ ಗೈರು ಹಾಜರಾಗಿರುವವರ ಬಗ್ಗೆ ಎಐಸಿಸಿಗೆ ದೂರು ಸಲ್ಲಿಸಲಾಗುವುದು. ಜಿಲ್ಲಾ ಕಾರ್ಯಕಾರಿಣಿಯಲ್ಲಿ ಶಾಸಕರು, ಪಕ್ಷದಿಂದ ಆಯ್ಕೆಯಾಗಿರವಂಥಹ ಜನಪ್ರತಿನಿಧಿಗಳು ಇರಬೇಕಿತ್ತು. ಫೆ. 21, 22 ರಂದು ನಡೆಯಲಿರುವ ಕಾಂಗ್ರೆಸ್‌ ಪ್ರತಿನಿಧಿಗಳ ಸಮಾವೇಶದಲ್ಲಿ ಎಲ್ಲಾ ಜನಪ್ರತಿನಿಧಿಗಳು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಮುಖಂಡರು, ಪದಾಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ತಿಳಿಸಿದರು. 

ಮಾಜಿ ಶಾಸಕ ಕೆ. ಕರಿಯಣ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಉದ್ದೇಶ ವಿಫಲಗೊಳಿಸುವುದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಸಜ್ಜಾಗಬೇಕು. ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ಮುಟ್ಟಿಸಬೇಕು. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಚ್ಚರಿಸಿದರು. 

ಕೆಪಿಸಿಸಿ ಮುಖಂಡ ಅಸಗೋಡು ಜಯಸಿಂಹ ಮಾತನಾಡಿ, ಕಾಂಗ್ರೆಸ್‌ ಸಮುದ್ರ ಇದ್ದಂತೆ. ಜನರ ಸೇವೆ ಮಾಡುವಂತಹ ಸಾಮಾಜಿಕ ಕಳಕಳಿ ಇದ್ದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅಧಿಕಾರ ಸಿಗಲಿ ಬಿಡಲಿ ಪಕ್ಷದ ಕೆಲಸ ಮಾಡಬೇಕು. ಒಂದಲ್ಲ ಒಂದು ದಿನ ಅಧಿಕಾರದ ಅವಕಾಶ ಸಿಗುತ್ತದೆ. ಸಿಗದೇ ಹೋದರೂ ಪಕ್ಷದ ಕೆಲಸ ತಪ್ಪಿಸಬಾರದು. ಈ ಹಿಂದೆ ಯಾವುದೇ ಮುಖ್ಯಮಂತ್ರಿ ಜಾರಿಗೊಳಿಸದ ಯೋಜನೆಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ.

ಮುಂದಿನ ಬಜೆಟ್‌ ನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಜಾರಿಗೆ ತರಲಿದ್ದಾರೆ. ಆ ಎಲ್ಲವನ್ನೂ ಜನರಿಗೆ ತಿಳಿಸುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು. ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ರೇಖಾ ನಾಗರಾಜ್‌, ಡೆಪ್ಯುಟಿ ಮೇಯರ್‌ ಬಿ. ನಾಗರಾಜಪ್ಪ, ಉತ್ತರ ವಲಯ ಅಧ್ಯಕ್ಷ ಅಜ್ಜಂಪುರಶೆಟ್ರಾ ಮೃತ್ಯುಂಜಯ, ದಕ್ಷಿಣ ವಲಯ ಅಧ್ಯಕ್ಷ ಅಯೂಬ್‌ ಪೈಲ್ವಾನ್‌, ಜಿಲ್ಲಾ ಕಾರ್ಯದರ್ಶಿಗಳಾದ ಎಸ್‌.  ಮಲ್ಲಿಕಾರ್ಜುನ್‌, ಎ. ನಾಗರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next