ಮುಂಬಯಿ, ಆ. 15: ಸ್ವಾತಂತ್ರ್ಯ ದಿನಾಚರಣೆಯು ಭಾರತೀಯರ ಹೆಮ್ಮೆಯ ದಿನವಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣವು ಇಲ್ಲಿನ ಸರ್ವ ಧರ್ಮೀಯರ ಧೈರ್ಯ ಮತ್ತು ತ್ಯಾಗ, ಶಾಂತಿ ಮತ್ತು ಸತ್ಯ ಮತ್ತು ನಂಬಿಕೆಯ ದ್ಯೂತಕವಾಗಿದೆ. ಇಂತಹ ರಾಷ್ಟ್ರದಲ್ಲಿ ಮನುಕುಲದ ಸಮಬಾಳು, ಸಮಪಾಲು ಜೀವನವೇ ನಿಜಾರ್ಥದ ಸ್ವಾತಂತ್ರ್ಯ. ಸರ್ವ ಸಮಾಜದ ಒಗ್ಗಟ್ಟಿನ ಸಂಕೇತವೇ ನಿಜಾರ್ಥದ ಸ್ವಾತಂತ್ರ್ಯವಾಗಿದೆ ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್. ವಿ. ಅಮೀನ್ ಅವರು ಹೇಳಿದರು.
ಆ. 15ರಂದು ಬೆಳಗ್ಗೆ ವಕೋಲಾದ ಸಾಂತಾ ಕ್ರೂಜ್ ಕನ್ನಡ ಸಂಘದ ಕಚೇರಿಯಲ್ಲಿ 73ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋ ಹಣಗೈದು ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೂರ್ವಜರ ಹೋರಾಟ, ತ್ಯಾಗ ಬಲಿ ದಾನವನ್ನು ನಾವು ಸ್ಮರಿಸಲೇಬೇಕು. ಇವರೆಲ್ಲರ ತ್ಯಾಗದ ಸಂಪೂರ್ಣ ಜೀವನ ಹೋರಾಟದ ಫಲವಾದ ಸ್ವತಂತ್ರ ಭಾರತವು ಸ್ವ-ಆಳ್ವಿಕೆಯ ದೇಶವಲ್ಲ. ಇದೊಂದು ಸಾರ್ವಭೌಮ ರಾಷ್ಟ್ರವಾಗಿದೆ. ಭಾರತವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾದಂತೆ ಕಟ್ಟುಕಟ್ಟಲೆ, ಜಾತಿವಾದಗಳಿಂದಲೂ ಮುಕ್ತವಾದಾಗ ಮಾತ್ರ ನಿಜಾರ್ಥದ ಸ್ವಾತಂತ್ರ್ಯ ಫಲಿಸುವುದು.
ಸದ್ಯ ಈ ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಸಮರ್ಥ ಪ್ರಧಾನಿ ನಮ್ಮಲ್ಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿ ಶುಭಹಾರೈಸಿದರು.
ಸಂಘದ ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಕಾರ್ಯದರ್ಶಿ ಶಕೀಲಾ ಪಿ. ಶೆಟ್ಟಿ, ಸಲಹೆಗಾರರಾದ ಎನ್. ಎಂ. ಸನೀಲ್, ಶಿವರಾಮ ಎಂ. ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುಮಾ ಎಂ. ಪೂಜಾರಿ, ವಿಜಯ ಕುಮಾರ್ ಕೆ. ಕೋಟ್ಯಾನ್, ಲಿಂಗಪ್ಪ ಬಿ. ಅಮೀನ್, ಜಿ. ಆರ್. ಬಂಗೇರ ಸೇರಿದಂತೆ ಸಂಘದ ಸದಸ್ಯರು, ರಾಜಶೇಖರ್ ಅಂಚನ್, ಮಹಾಬಲ ಪೂಜಾರಿ, ಶೋಭಾ ಶೆಟ್ಟಿ, ಯಾದವ ಶೆಟ್ಟಿ, ಭವ್ಯಾ ವೈ. ಶೆಟ್ಟಿ, ಚಂದಯ್ಯ ಪೂಜಾರಿ, ಜೋತ್ಸಾ ್ನ ಶೆಟ್ಟಿ ಹಾಗೂ ಇನ್ನಿತರ ರಾಷ್ಟ್ರಪ್ರೇಮಿಗಳು ಉಪಸ್ಥಿತರಿದ್ದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ವಂದಿಸಿದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್