ಚಾಮರಾಜನಗರ: ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿಯುವುದರ ಜೊತೆಗೆ ಮಹಿಳಾ ಕಾನೂನುಗಳ ಬಗ್ಗೆ ವಿಶೇಷ ಜಾಗೃತಿ ಹೊಂದಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಜಿ. ಬಸವರಾಜ ತಿಳಿಸಿದರು.
ನಗರದ ವ್ಯಾಜ್ಯ ಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ನ್ಯಾಯಾಂಗ ಇಲಾಖಾ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸಬಲೀಕರಣ ಮತ್ತು ಸಮಾನತೆ ದೃಷ್ಟಿಯಿಂದ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಮಹಿಳೆಯರು ಪುರುಷರಿಗೆ ಸಮನಾಗಿ ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅವಕಾಶ ನೀಡಲಾಗಿದೆ. ಮಹಿಳೆಯರ ಅಭಿವೃದ್ಧಿಯು ಸಂವಿಧಾನ ಉದ್ದೇಶವಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ್ ಮಾತನಾಡಿ, ಮಹಿಳೆಯರನ್ನು ಗೌರವವಾಗಿ ಕಾಣುವುದು ನಮ್ಮ ಸಂಸ್ಕೃತಿಯಾಗಿದೆ. ಸಮಾಜ, ಕುಟುಂಬಕ್ಕೆ ಆಧಾರವಾಗಿರುವ ಮಹಿಳೆಯರ ಕೊಡುಗೆ ಅಪಾರ. ಮಹಿಳೆಯರು ಪುರುಷ ಸಮಾನರೆಂದು ತಿಳಿಯದೆ ಪುರುಷರಿಗಿಂತ ಹೆಚ್ಚು ಎಂಬ ಮನೋಭಾವ ಇರಬೇಕು.
ಜೀವನದ ಯಾವುದೇ ಸಮಸ್ಯೆ ಎದುರಿಸುವ ಶಕ್ತಿ ಮತ್ತು ತಾಳ್ಮೆ ಮಹಿಳೆಯರಿಗೆ ಇದೆ ಎಂದರು. ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಮಹಿಳೆಯರು ಕಾನೂನು ಅರಿವು ಹೊಂದುವುದರ ಜೊತೆಗೆ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ, ನ್ಯಾಯಾಧೀಶ ಉಮೇಶ್, ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಲೋಲಾಕ್ಷಿ, ಕಾನೂನು ಅಧಿಕಾರಿ ಶಕೀಲಾ ಅಬೂಬಕರ್, ಹಿರಿಯ ಸಹಾಯಕ ಅಭಿಯೋಜಕಿ ಜಯಶ್ರೀ ಶೆಣೈ, ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್, ಜಿಲ್ಲಾ ಸರ್ಕಾರಿ ವಕೀಲ ಎನ್.ಲೋಕೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅರುಣ್‌ಕುಮಾರ್ ಇತರರಿದ್ದರು.