Advertisement

ಕೋವಿಡ್ ಮಧ್ಯೆ ಸಾಂಕ್ರಾಮಿಕ ರೋಗಗಳ ಸದ್ದು

02:38 PM Aug 21, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಹಾಗೂ ಲಾಕ್‌ಡೌನ್‌ದಿಂದಾಗಿ ಬೇಸಿಗೆಯಲ್ಲಿ ಮೇಲ್ನೋಟಕ್ಕೆ ತಗ್ಗಿದಂತೆ ಕಂಡಿದ್ದ ಸಾಂಕ್ರಾಮಿಕ ರೋಗಗಳ ಹಾವಳಿ ಮಳೆಗಾಲದಲ್ಲಿ ಉಲ್ಬಣಗೊಂಡಿದೆ.

Advertisement

ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಸಾಂಕ್ರಾಮಿಕ ಹಾವಳಿ ಜೋರಾಗಿತ್ತು. ಕಳೆದ ವರ್ಷದ ಬೇಸಿಗೆಯಲ್ಲೂ ಸಾಂಕ್ರಾಮಿಕ ಹಾವಳಿಯಿಂದ ಜನ ತತ್ತರಿಸಿದ್ದರು. ಆದರೆ ಈ ವರ್ಷ ಲಾಕ್‌ ಡೌನ್‌ ಜಾರಿಯಾದ ಪರಿಣಾಮಜಿಲ್ಲೆಯಲ್ಲಿ ಡೆಂಘೀ, ಚಿಕೂನ್‌ಗುನ್ಯಾ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳ ಹಾವಳಿ ತಗ್ಗಿದಂತೆ ಕಂಡು ಬಂದಿತ್ತು. ಆದರೆ ಈಗ ಮಳೆಗಾಲದ ಜೊತೆಗೆ ಸಾಂಕ್ರಾಮಿಕ ರೋಗಗಳ ಹಾವಳಿ ಮತ್ತೆ ಸದ್ದು ಮಾಡುತ್ತಿದೆ.

2019ರಲ್ಲಿ 250 ಜನರಲ್ಲಿ ಡೆಂಘೀ, 121 ಜನರಲ್ಲಿ ಚಿಕೂನ್‌ಗುನ್ಯಾ ದೃಢಪಟ್ಟಿತ್ತು. ಈ ವರ್ಷ ಆ. 15ರವರೆಗೆ 24 ಜನರಲ್ಲಿ ಡೆಂಘೀ ದೃಢವಾಗಿದ್ದು, ಈ ಪೈಕಿ ಹುಬ್ಬಳ್ಳಿಯಲ್ಲಿ ಡೆಂಘೀಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇನ್ನೂ ಚಿಕೂನ್‌ಗುನ್ಯಾ ರೋಗ 11 ಜನರಲ್ಲಿ ಖಚಿತವಾಗಿದೆ. ಮಲೇರಿಯಾ ರೋಗ 5 ಜನರಲ್ಲಿ ಕಂಡು ಬಂದಿದ್ದರೆ, ಮಿದುಳು ಜ್ವರ ಖಚಿತವಾಗಿಲ್ಲ.

24 ಜನರಲ್ಲಿ ಡೆಂಘೀ :  2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250 ಜನರಲ್ಲಿ ಡೆಂಘೀ ದೃಢಪಟ್ಟಿತ್ತು. ಈ ವರ್ಷಗಳಲ್ಲಿ ಡೆಂಘೀಗೆ ಯಾರೂ ಬಲಿಯಾಗಿಲ್ಲ. ಆದರೆ ಈ ವರ್ಷ ಆ. 15ರವರೆಗೆ 220 ಜನ ಶಂಕಿತರ ಪೈಕಿ 213 ಜನರ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ 24 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಹುಬ್ಬಳ್ಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಗ್ರಾಮೀಣ-2, ಕಲಘಟಗಿ-2, ಕುಂದಗೋಳ- 3, ನವಲಗುಂದ-4, ಧಾರವಾಡದ ಶಹರದಲ್ಲಿ 1 ಹಾಗೂ ಹುಬ್ಬಳ್ಳಿಯ ಶಹರದಲ್ಲಿ 10 ಜನರಲ್ಲಿ ಡೆಂಘೀ ಖಚಿತವಾಗಿದೆ.

ಐವರಲ್ಲಿ ಮಲೇರಿಯಾ :  2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25, 2019ರಲ್ಲಿ 17 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ ರೋಗವು 2020ರ ಐದು ತಿಂಗಳಲ್ಲಿ 5 ಜನರಲ್ಲಿ ದೃಢಪಟ್ಟಿದೆ. ಜಿಲ್ಲೆಯ ನವಲಗುಂದ ತಾಲೂಕಿನಲ್ಲಿಯೇ 3 ಜನರಿಗೆ ಇದು ಬಂದಿದ್ದರೆಧಾರವಾಡ ಶಹರದಲ್ಲಿ ಇಬ್ಬರಲ್ಲಿ ರೋಗ ದೃಢಪಟ್ಟಿದೆ. ಮೆದುಳ ಜ್ವರವು (ಜೆಇ) 2016, 2017, 2019ರಲ್ಲಿ ಕಂಡು ಬಂದಿಲ್ಲ. ಆದರೆ 2018ರಲ್ಲಿ ಈ ಜ್ವರಕ್ಕೆ ಜಿಲ್ಲೆಯಲ್ಲಿ ಓರ್ವ ಮೃತಪಟ್ಟಿದ್ದು ಬಿಟ್ಟರೆ ಈವರೆಗೆ ಮತ್ತೆ ಅದರಿಂದ ಯಾರೂ ಮೃತಪಟ್ಟಿಲ್ಲ. ಆದರೆ ಈ ವರ್ಷ ಮೆದುಳು ಜ್ವರದ ಲಕ್ಷಣಗಳು ಕಂಡುಬಂದ ಕಾರಣ 4 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಮೆದುಳು ಜ್ವರ ದೃಢಪಟ್ಟಿಲ್ಲ.

Advertisement

ಶಹರ ವ್ಯಾಪ್ತಿಯಲ್ಲೇ ಹೆಚ್ಚು :  ಪ್ರಸಕ್ತ ವರ್ಷ ಹುಬ್ಬಳ್ಳಿ ಶಹರದಲ್ಲಿಯೇ 10 ಜನರಲ್ಲಿ ಡೆಂಘೀ ದೃಢಪಟ್ಟಿದ್ದು, ಈ ಪೈಕಿ ವ್ಯಕ್ತಿ ಒಬ್ಬರು ಮೃತಪಟ್ಟಿದ್ದಾರೆ. ಗ್ರಾಮೀಣಕ್ಕಿಂತ ಶಹರ ವ್ಯಾಪ್ತಿಯಲ್ಲಿಯೇ ಡೆಂಘೀ ಹೆಚ್ಚಿದೆ. ಕಳೆದ 5-6 ವರ್ಷಗಳಲ್ಲಿ ಡೆಂಘೀ ಅಬ್ಬರ ಜೋರಾಗಿದ್ದರೂ ರೋಗಕ್ಕೆ ಬಲಿಯಾಗಿರಲಿಲ್ಲ. ಆದರೆ ಪ್ರಸಕ್ತ ವರ್ಷದಲ್ಲಿಯೇ ಅದು ಮಳೆಗಾಲದ ಸಮಯದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಡೆಂಘೀ-ಚಿಕೂನ್‌ಗುನ್ಯಾ ಲಕ್ಷಣಗಳು ಕಂಡು ಬಂದರೂ ಕೋವಿಡ್ ಭೀತಿಯಿಂದ ಜನ ಪರೀಕ್ಷೆಗೆ ಮುಂದಾಗುತ್ತಿಲ್ಲ. ಕೊರೊನಾ ತಪಾಸಣೆಯಲ್ಲಿ ತೊಡಗಿರುವ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾಂಕ್ರಾಮಿಕ ರೋಗಗಳ ತಪಾಸಣೆಗೆ ಹಿನ್ನಡೆ ಉಂಟಾಗಿದೆ. ಹೀಗಾಗಿ ಸಾಂಕ್ರಾಮಿಕ ರೋಗಗಳು ಉಲ್ಬಣ ಆಗಿದ್ದರೂ ಅಂಕಿ-ಅಂಶಗಳಲ್ಲಿ ಕಾಣಸಿಗದಂತಾಗಿದೆ.

 

– ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next