Advertisement

ಬೆಳ್ಳಿತೆರೆಯ ಮೇಲೆ ಮಹಾಕಾವ್ಯ

06:00 AM Sep 21, 2018 | Team Udayavani |

ಕನ್ನಡದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳು ಆಗಾಗ ಸದ್ದು ಮಾಡುತ್ತವೆ. ಆ ಸಾಲಿಗೆ ಈಗ “ಮಹಾಕಾವ್ಯ’ ಎಂಬ ಚಿತ್ರವೂ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಪೂರ್ಣಗೊಂಡಿರುವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಸಿನಿಮಾ ರಂಗದ ಗಣ್ಯರಿಗೆ ವಿಶೇಷ ಪ್ರದರ್ಶನ ಏರ್ಪಡಿಸಿತ್ತು ಚಿತ್ರತಂಡ. ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟರು ನಿರ್ದೇಶಕ ಶ್ರೀದರ್ಶನ್‌. ನಿರ್ದೇಶಕರಿಲ್ಲಿ ದುರ್ಯೋಧನ ಪಾತ್ರವನ್ನೂ ಮಾಡಿದ್ದಾರೆ. ಎಸ್‌.ಆರ್‌.ಕೆ. ಪಿಕ್ಚರ್ ಬ್ಯಾನರ್‌ನಲ್ಲಿ ತಯಾರಾಗಿರುವ ಎರಡನೇ ಸಿನಿಮಾವಿದು. 

Advertisement

ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡ ನಿರ್ದೇಶಕ, ಶ್ರೀದರ್ಶನ್‌, “58 ಗ್ರಂಥಗಳನ್ನು ಓದಿ ಆ ಪೈಕಿ ಪಂಪನ “ಶಾಂತಿನಾಥ ಪುರಾಣ’, ರನ್ನನ “ಗದಾಯುದ್ಧ’ ಮತ್ತು ಪೊನ್ನನ “ಶಕ್ತಿ ಪುರಾಣ’ದ ಭಾಗವನ್ನು ಮಾತ್ರ ಆಯ್ಕೆ ಮಾಡಿಕೊಂಡು ಅವುಗಳೊಂದಿಗೆ ಸುಮಾರು 38 ಕಾವ್ಯ ಪದ್ಯಗಳನ್ನು ಸಹ ಚಿತ್ರದಲ್ಲಿ ಬಳಸಲಾಗಿದೆ ಎಂದು ವಿವರ ಕೊಟ್ಟ ಶ್ರೀದರ್ಶನ್‌, “ಚಿತ್ರಕ್ಕೆ ಕಣಗಾಲ್‌ ಪ್ರಭಾಕರಶಾಸಿŒ ಪುತ್ರ  ಪುರುಷೊತ್ತಮ್‌ ಕಣಗಾಲ್‌ ಅವರು ಸಂಭಾಷಣೆ ಬರೆದಿದ್ದಾರೆ.  ಚಿತ್ರದಲ್ಲಿ ಗ್ರಾಫಿಕ್ಸ್‌ ಕೆಲಸ ಹೆಚ್ಚಾಗಿದೆ. ಸುಮಾರು ಆರು ತಿಂಗಳ ಕಾಲ ಗ್ರಾಫಿಕ್ಸ್‌ ಕೆಲಸ ನಡೆದಿದೆ. ಚಿತ್ರದಲ್ಲಿ 52 ನಿಮಿಷಗಳ ಸಿಜಿ ಕೆಲಸ ಕಾಣಿಸಿಕೊಳ್ಳುತ್ತದೆ. ನಾಲ್ಕು ದಶಕ ಬಳಿಕ ಈ ರೀತಿಯ ಚಿತ್ರ ಮಾಡಲು ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಇಂತಹ ಚಿತ್ರಗಳು ಜನರನ್ನು ತಲುಪಬೇಕು. ಹಾಗಾಗಿ ಮಾಧ್ಯಮದ ಸಹಕಾರ ಬೇಕು’ ಅಂದರು ಶ್ರೀದರ್ಶನ್‌.

ಅಂದು ಚಿತ್ರ ವೀಕ್ಷಿಸಿ, ಮಾತನಾಡಿದ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ, “ಇಂತಹ ಚಿತ್ರವನ್ನು ಚಿಂತಕರು ನೋಡುವುದಕ್ಕಿಂತ ಶಿಕ್ಷಕರು ನೋಡಬೇಕು. ಅಂತಹವರಿಗೆ ತೋರಿಸಿದರೆ, ಅವರು ಒಂದಷ್ಟು ಮಕ್ಕಳಿಗೆ ಕಲಿಸುತ್ತಾರೆ. ಕಮರ್ಷಿಯಲ್‌ ಚಿತ್ರಗಳ ನಡುವೆ ಈ ರೀತಿಯ ಚಿತ್ರಗಳು ತಯಾರಾಗುವುದು ಅಪರೂಪ. ಚಿತ್ರದಲ್ಲಿ ಪ್ರಾಚೀನ, ಹಳೆಗನ್ನಡ ಬಳಸಿ ಮಾಡುವುದು ಸುಲಭವಲ್ಲ. ಪುರಾಣ ಮತ್ತು ಮಹಾಕಾವ್ಯ ಚೆನ್ನಾಗಿ ಅರಿತುಕೊಂಡಿದ್ದರೆ ಮಾತ್ರ ಇಂತಹ ಚಿತ್ರಕ್ಕೆ ಕೈ ಹಾಕಲು ಸಾಧ್ಯ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದು ಹರಸಿದಿರು ಬರಗೂರು ರಾಮಚಂದ್ರಪ್ಪ.

ನಿರ್ಮಾಪಕಿ ಎಸ್‌.ವಿಜಯ ಅವರು, “ತಮ್ಮ ಪತಿ ಇಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ. ಹಾಕಿದ ಹಣ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಚಿತ್ರ ದಾಖಲೆಯಾಗಿ ಉಳಿಯುತ್ತದೆ ಎಂಬ ವಿಶ್ವಾಸವಿದೆ. ಒಳ್ಳೆಯ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ’ ಎಂಬುದು ನಿರ್ಮಾಪಕರ ಮಾತು. ಅಂದು ಆಡಿಯೋ ಬಿಡುಗಡೆ ವೇಳೆ, ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೆಗೌಡ ಸೇರಿದಂತೆ ಹಲವರು ಇದ್ದರು. ಟೋಟಲ್‌ ಕನ್ನಡ ಸಂಸ್ಥೆ ಹಾಡುಗಳನ್ನು ಹೊರತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next