Advertisement

ಇಒ-ಸದಸ್ಯರ ತಿಕ್ಕಾಟಕ್ಕೆ ಮೂರು ಸಭೆ ಬಲಿ

03:01 PM Feb 07, 2021 | Team Udayavani |

ಮಂಡ್ಯ: ತಾಪಂ ವ್ಯವಸ್ಥೆ ರದ್ದುಪಡಿಸುವ ಶಿಫಾರಸ್ಸು ಮಾಡಿರುವ ಹೊತ್ತಲ್ಲೇ ಮಂಡ್ಯ ತಾಪಂನಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸದಸ್ಯರ ನಡುವಿನ ತಿಕ್ಕಾಟಕ್ಕೆ ಮೂರು ಸಾಮಾನ್ಯ ಸಭೆಗಳು ಬಲಿಯಾಗಿವೆ.

Advertisement

ಕಳೆದ 6 ತಿಂಗಳಿನಿಂದ ಒಂದೂ ಸಭೆಯೂ ನಡೆದಿಲ್ಲ.ಕಳೆದ ಬಾರಿ ನಡೆದ ಸಭೆಯಲ್ಲಿ ಶಾಸಕ  ಎಂ.ಶ್ರೀನಿವಾಸ್‌ ಅವರ ಎದುರೇ ತಾಪಂ ಇಒ ಎಂ.ಗಂಗಣ್ಣ ವಿರುದ್ಧ ಸದಸ್ಯರು ದೂರುಗಳ ಸುರಿಮಳೆಗೈದು ಸಭೆ ಮುಂದೂಡಿದ್ದರು. ಈಗ ಶನಿವಾರ ನಡೆಯಬೇಕಿದ್ದ ಸಭೆಯನ್ನೂ ಮುಂದೂಡಲಾಗಿದೆ. ಇದರಿಂದ ತಾಪಂನಲ್ಲಿ ನಡೆಯಬೇಕಿದ್ದ ಯೋಜನೆ, ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳುವಂತಾಗಿದೆ. ತಾಪಂ ಇಒ ಮೇಲೆ ಸದಸ್ಯರ ಆರೋಪ: ತಾಪಂ ಇಒ ಎಂ.ಗಂಗಣ್ಣ ವಿರುದ್ಧ ಸದಸ್ಯರು ಆರೋಪ ಮಾಡುತ್ತಿದ್ದಾರೆ.

ಯಾವುದೇ ಸಾರ್ವಜನಿಕ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ. ಇದುವರೆಗೂ ಯಾವೊಬ್ಬ ಸದಸ್ಯರನ್ನು ಕರೆದು ಮಾತನಾಡಿಸುವ ಸೌಜನ್ಯವಿಲ್ಲ. ನಮ್ಮ ಕ್ಷೇತ್ರಗಳ ಯೋಜನೆಗಳನ್ನು ನಮ್ಮ ಗಮನಕ್ಕೆ ತರದೆ ನೇರವಾಗಿ ಅವರೇ ಮಾಡುತ್ತಿದ್ದಾರೆ. ಇದರಿಂದ ಕ್ಷೇತ್ರದ ಜನರಿಗೆ ಉತ್ತರ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ.

ಸಮನ್ವಯದ ಕೊರತೆ: ತಾಪಂ ಆಡಳಿತದಲ್ಲಿ ಸಮನ್ವಯ ಕೊರತೆ ಉಂಟಾಗಿದೆ. ಇಒ ಹಾಗೂ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳಿಂದ ಅಭಿವೃದ್ಧಿ ಕೆಲಸ ಕುಂಠಿತಗೊಂಡಿವೆ. ಕಳೆದ 6 ತಿಂಗಳಿನಿಂದ ಸರಿಯಾಗಿ ಕೆಲಸಗಳು ಆಗುತ್ತಿಲ್ಲ. 2 ಸಭೆಗಳು ಯಾವುದೇ ಅಭಿವೃದ್ಧಿ ಚರ್ಚೆಯಾಗದೆ ಆರೋಪ- ಪ್ರತ್ಯಾರೋಪಗಳಲ್ಲೇ ಮುಂದೂಡಿಯಾಗಿತ್ತು.

 ಇದನ್ನೂ ಓದಿ :ಕೃಷಿ ಕಾಯ್ದೆ ವಾಪಸ್‌ಗೆ ಹೆದ್ದಾರಿ ತಡೆ

Advertisement

ಜಿಪಂ ಹಾದಿಯಲ್ಲಿ ತಾಪಂ?: ಜಿಪಂನಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ನಡುವಿನ ಪ್ರತಿಷ್ಠೆಯ ರಾಜಕಾರಣಕ್ಕೆ ಈಗಾಗಲೇ ಜಿಪಂ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಅಧ್ಯಕ್ಷರನ್ನು ಸ್ಥಾನದಿಂದ ಕೆಳಗಿಳಿಸಲು ಸ್ವಪಕ್ಷದ ಸದಸ್ಯರು ಪಟ್ಟು ಹಿಡಿದಿದ್ದಾರೆ. ಇತ್ತ ಅಧ್ಯಕ್ಷರು ರಾಜೀನಾಮೆ  ನೀಡದಿರುವುದರಿಂದ ಯಾವುದೇ ಯೋಜನೆಗಳಿಗೆ ಅನುಮೋದನೆ ಸಿಕ್ಕಿರಲಿಲ್ಲ. ಇದರಿಂದ ಸರ್ಕಾರ ಮಧ್ಯ ಪ್ರವೇಶಿಸಿ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡಿತ್ತು. ಇದಕ್ಕೆ ಜೆಡಿಎಸ್‌ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ತಾಪಂನಲ್ಲೂ ಅಧಿಕಾರಿ ಹಾಗೂ ಸದಸ್ಯರ ನಡುವಿನ ಗುದ್ದಾಟಕ್ಕೆ ಸಭೆಗಳು ನಡೆಯುತ್ತಿಲ್ಲ. ಇದರಿಂದ ಕಳೆದ 6 ತಿಂಗಳಿನಿಂದ ಆಡಳಿತ ಯಂತ್ರ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next