ಹನೂರು: ಪರಿಸರ ಸಮತೋಲನ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವ ಸಹಕಾರ ನೀಡಬೇಕು ಎಂದು ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ದರಾಜು ಹೇಳಿದರು.
ತಾಲೂಕಿನ ಪಿ.ಜಿ ಪಾಳ್ಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಲಾಮೃತ ಕಾರ್ಯಕ್ರಮದಡಿ ಸಾಮೂಹಿಕ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಖಾಲಿ ನಿವೇಶನಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಕಾಪಾಡಲು ಪ್ರತಿಯೊಬ್ಬರು ಗಿಡಗಳನ್ನು ನೆಡಬೇಕು. ಅದರ ಜೊತೆಗೆ ಪಾಲನೆ ಪೋಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು. ಈ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಆರ್‌ಎಫ್ಒ ನದಾಫ್ ಮಾತನಾಡಿ, ಸಾರ್ವಜನಿಕರು ಮತ್ತು ಎಲ್ಲಾ ಹಿರಿಯ ಹಾಗೂ ಕಿರಿಯ ನಾಗರಿಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಿಡಗಳನ್ನು ನೆಟ್ಟರೆ ಉತ್ತಮವಾಗಿ ಮಳೆ ಬೀಳುತ್ತದೆ.
ಜೊತೆಗೆ ಸಾರ್ವಜನಿಕರು ತಮ್ಮ ಗ್ರಾಮದ ಸಾರ್ವಜನಿಕರ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಉತ್ತಮಗೊಳಿಸಲು ಸಹಕಾರ ನೀಡಬೇಕು. ಒಂದೇ ದಿನಕ್ಕೆ ಸೀಮಿತ ಗೊಳಿಸದೆ ವರ್ಷವೆಲ್ಲಾ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಸಿಗುವ ಗಿಡಗಳನ್ನು ಪಡೆದು ನೆಟ್ಟು ಬೆಳೆಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಿಡಿಒ ಮರಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಶಿವಕುಮಾರ್, ಸರ್ಕಾರಿ ಶಾಲೆ ಹಾಗೂ ನಿರ್ಮಲಾ ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.