ಸಿಂದಗಿ: ಮಾನವ ತನ್ನ ಕೈಯಾರೇ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಪರಿಸರವನ್ನು ನಾಶ ಮಾಡಿ. ಭೂಮಿಯ ಸಮತೋಲನ ಹಾಳು ಮಾಡಿ ಬದುಕುತ್ತಿದ್ದಾನೆ. ಮುಂಬರುವ ತಲೆಮಾರುಗಳಿಗೆ ಭೂಮಿಯನ್ನು ಸುರಕ್ಷಿತವಾಗಿ ವರ್ಗಾಯಿಸಲು ನಾವು ಇಂದು ಪರಿಸರ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ಗಬಸಾವಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಂ.ಬಿ. ಯಡ್ರಾಮಿ ಹೇಳಿದರು.
ತಾಲೂಕಿನ ಗಬಸಾವಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರ ಉಳಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗತಿಕ ತಾಪಮಾನದಿಂದ ಭೂಮಿಯನ್ನು ಸಂರಕ್ಷಿಸುವುದು ಹೇಗೆ ಎಂಬ ಬಗ್ಗೆ ನಾವು ಇಂದು ಚಿಂತನೆ, ಚರ್ಚೆಗಳು ಮಾಡಬೇಕಾಗಿದೆ. ಇವತ್ತು ಈ ವಿಚಾರದಲ್ಲಿ ನಾವು ಚರ್ಚಿಸಿ ನಮ್ಮ ಜೀವನ ಶೈಲಿ ಬದಲಾಯಿಸಿ ಜಾಗತಿಕ ತಾಪಮಾನದ ಏರಿಕೆಯನ್ನು ಕುಗ್ಗಿಸಲು ನಮ್ಮ ಕೊಡುಗೆ ಅನಿವಾರ್ಯವಾಗಿದೆ. ಪ್ರತಿನಿತ್ಯ ನಾವು ಭೂಮಿ ವಿನಾಶದತ್ತ ಹೋಗುವಂತಹ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ನಮ್ಮ ಜೀವನ ಶೈಲಿಗಳು ಇಂದು ಪರಿಸರಕ್ಕೆ ಮಾರಕವಾಗಿ ಪರಿಗಣಿಸಿದೆ. ಹೀಗೆ ಮುಂದುವರಿದಲ್ಲಿ ಮನುಕುಲಕ್ಕೆ ಉಳಿಗಾಲವಿಲ್ಲ. ಆದ್ದರಿಂದ ನಾವು ಪರಿಸರ ರಕ್ಷಣೆ ಮಾಡಬೇಕು ಎಂದು ಹೇಳಿದರು.
ಪ್ಲಾಸ್ಟಿಕ್ ಬಳಕೆ, ವಿಪರೀತ ವಿದ್ಯುತ್ ಬಳಕೆ, ಪೆಟ್ರೋಲಿಯಮ್ ಉತ್ಪನ್ನಗಳನ್ನು ಎಗ್ಗಿಲ್ಲದೆ ಬಳಸುತ್ತಿರುವುದು ಹೀಗೆ ನಮ್ಮ ಐಷಾರಾಮಿ ಜೀವನಕ್ಕೆ ಪ್ರಕೃತಿಯ ಸಮತೋಲನ ಬಿಗಡಾಯಿಸುತ್ತಿದ್ದೇವೆ. ಬೇಸಿಗೆಯಲ್ಲಿ ನೀರಿಲ್ಲದೆ ಒದ್ದಾಡುವ ಸ್ಥಿತಿಗೆ ಈಗಾಗಲೇ ತಲುಪಿದ್ದೇವೆ. ಅಂತರ್ಜಾಲ ಮಟ್ಟ ಕ್ಷೀಣಿಸುತ್ತಿದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಆದರೆ ಮಳೆಗಾಲ ಬಂದ ತಕ್ಷಣ ನಾವು ಪರದಾಡಿದ್ದನ್ನು ಮರೆತು ಬಿಡುತ್ತೇವೆ. ಹೀಗಾಗಬಾರದು, ನಾವು ನಿತ್ಯ ಪರಿಸರ ಉಳಿಸುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ನಮ್ಮೆಲ್ಲರ ಬದುಕಿಗೆ ಆಧಾರವಾಗಿರುವ ಪರಿಸರದ ರಕ್ಷಣೆ ಬಗ್ಗೆ ಮಕ್ಕಳಿಗೆ ತಿಳಿ ಹೇಳುವ ಮೂಲಕ ಅವರಲ್ಲಿ ಪರಿಸರ ಪ್ರೇಮ ಬೆಳೆಸುವ ಕಾರ್ಯಕ್ಕೆ ಪ್ರಜ್ಞಾವಂತ ಸಮುದಾಯ ಮುಂದಾಗಬೇಕಿದೆ. ಮುಂದಿನ ದಿನಗಳಲ್ಲಿ ಪರಿಸರ ಉಳಿಯಬೇಕಾದರೆ ನಾವೆಲ್ಲ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತರಾಗಬೇಕಿದೆ ಎಂದರು.
ಕಾಲ ಕಾಲಕ್ಕೆ ತಕ್ಕಂತೆ ಮಳೆ ಬೆಳೆ ಆಗಬೇಕಿದ್ದರೆ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು. ನಮ್ಮೆಲ್ಲರಿಗೂ ಜೀವದಾತೆಯಾಗಿರುವ ಪರಿಸರದ ಬಗ್ಗೆ ನಾವು ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬಾರದು. ಪ್ರತಿಯೊಂದು ಮನೆಯ ಮುಂದೆ ಗಿಡ ನೆಟ್ಟು ಬೆಳೆಸುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ವಾತಾವರಣದಲ್ಲಿ ಮರ ಹೆಚ್ಚಾದಂತೆ ಮರ ಗಿಡಗಳು ಮೋಡಗಳನ್ನು ಆಕರ್ಷಿಸಿ ಮಳೆ ಬರುವಂತೆ ಮಾಡುತ್ತವೆ ಎಂದು ತಿಳಿಸಿದರು.
ಅಫಜಲಪುರದ ಪತ್ರಕರ್ತ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಭೂಮಿಯ ಶಾಖದ ಏರಿಕೆಯನ್ನು ನಾವು ಇತ್ತೀಚೆಗೆ ಕರಗುತ್ತಿರುವ ಹಿಮಗಳ ಆಧಾರದಲ್ಲಿ, ಹವಾಮಾನ ಬದಲಾವಣೆಯಲ್ಲಿ ಕಾಣಸಿಗುತ್ತದೆ. ಇದೇ ರೀತಿ ವಾತವರಣದ ತಾಪಮಾನ ಹೆಚ್ಚಾದರೆ ಭೂಮಿಯಲ್ಲಿ ನಾವು ಕಂಡರಿಯದ ಆಪತ್ತುಗಳನ್ನು ಎದುರಿಸಬೇಕಾದ ಸಾಧ್ಯತೆಗಳು ಹೆಚ್ಚಿದೆ. ಆದ್ದರಿಂದ ಭೂಮಿಯ ತಾಪಮಾನ ಏರಿಕೆ ತಗ್ಗಿಸಲು ಪರಿಸರ ಬೆಳೆಸಬೇಕು ಎಂದು ಹೇಳಿದರು.
ಎಸ್.ಬಿ. ಚೌಧರಿ, ಆನಂದ ಶಾಬಾದಿ, ಸಹ ಶಿಕ್ಷಕರಾದ ಎನ್.ವಿ. ಪಟ್ಟಣಶೆಟ್ಟಿ, ಜಿ.ಬಿ. ಗುತ್ತೇದಾರ, ಐ.ಎಂ. ಮಕಾಂದಾರ, ಗೀತಾ ಕೋಳಿ, ಪಿ.ಬಿ. ಐರೋಡಗಿ, ಎಂ.ಎಸ್. ಬಿರಾದಾರ, ಮೀನಾಕ್ಷಿ ವಾಗ್ಮೋರೆ, ಅಟೆಂಡರ್ ಕೆ.ಎಸ್. ತಳವಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.