ಜೇವರ್ಗಿ: ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದ್ದೂ, ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಂತೆ ಸಸಿಗಳನ್ನು ನೆಟ್ಟು ಪೋಷಿಸುವಂತೆ ಗ್ರೇಡ್-2 ತಹಶೀಲ್ದಾರ ಶರಣಬಸಪ್ಪ ಮುಡುಬಿ ಕರೆ ನೀಡಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವ ಪರಿಸರ ದಿನಾಚರಣೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಪ್ರತಿ ಹೆಜ್ಜೆ ಹೆಜ್ಜೆಗೂ ಗಿಡ ಮರಗಳನ್ನು ಬೆಳೆಸುವಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ.
ಮನುಷ್ಯನು ಐಷಾರಾಮಿ ಜೀವನ ಸಾಗಿಸುವುದಕ್ಕಾಗಿ ಕಾಡನ್ನು ನಾಶಗೊಳಿಸುತ್ತಿದ್ದಾನೆ. ಇದರಿಂದ ನಿಸರ್ಗದಲ್ಲಿ ಏರುಪೇರಾಗಿ ಸುನಾಮಿ, ಚಂಡಮಾರುತ, ಭೂಕಂಪ ಪದೇ ಪದೇ ಸಂಭವಿಸುತ್ತಿದೆ. ಆದ್ದರಿಂದ ಮಾನವನು ತನ್ನ ಜೀವನಕ್ಕೆ ಬೇಕಾದ ಉಸಿರನ್ನು ಪಡೆಯಲಿಕ್ಕೆ ಭೂಮಿ ಮೇಲೆ ಹಸಿರನ್ನು ಸೃಷ್ಟಿಸಬೇಕು.
ಭೌತಿಕ ಸಂಪತ್ತಿಗಿಂತ ಮೇಲಾದುದು ನೈಸರ್ಗಿಕ ಸಂಪತ್ತು. ಯುವ ಜನತೆ ಮುಂಬರುವ ದಿನಗಳಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಮೇಧಾ ಪಾಟ್ಕರ್ ಅವರಂತೆ ಪರಿಸರ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಮಲ್ಲಣ್ಣ ಅವಂಟಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯಾಧಿಕಾರಿ ಬಸವರಾಜ ಶಿವಪೂಜೆ, ಸದಸ್ಯರಾದ ಮಹಿಬೂಬ್ ಚನ್ನೂರ, ಮಹ್ಮದ್ ಹನೀಫ್, ಮರೆಪ್ಪ ಸರಡಗಿ, ಅಮೀರ್ ಜಮಾದಾರ, ಕೃಷಿ ಅ ಧಿಕಾರಿ ಪ್ರವೀಣ ಕುಮಾರ, ನೀಲಕಂಠ ಅವಂಟಿ, ವೀರಣ್ಣ ರಾಜನಾಳ, ಮನೀಷಾ ಘಾಟಗೆ, ಗಂಗಾಂಬಿಕಾ ಹಿರೇಮಠ ಇದ್ದರು. ಧರ್ಮು ಚಿನ್ನಿ ರಾಠೊಡ ಸ್ವಾಗತಿಸಿದರು. ಕಿರಿಯ ಇಂಜಿನೀಯರ್ ನಾನಾಸಾಹೇಬ ಕೋಳಕೂರ ನಿರೂಪಿಸಿದರು. ಸವಿತಾ ವಂದಿಸಿದರು.