ಶಿರ್ವ: ಸ್ವಚ್ಛ ಶಿರ್ವ-ಸುಂದರ ಶಿರ್ವ ಪರಿಕಲ್ಪನೆಯಡಿಯದಲ್ಲಿ ಶಿರ್ವದ ಗೂಡ್ಸ್ ಟೆಂಪೋ ಚಾಲಕ-ಮಾಲಕ ಜಾಫರ್ ಸಾಹೇಬ್ ಶಿರ್ವ ಮಂಚಕಲ್ ಪೇಟೆಯ ಮಧ್ಯಭಾಗದಲ್ಲಿರುವ ರಸ್ತೆ ವಿಭಾಜಕದಲ್ಲಿ ಮಳೆಗಾಲದಲ್ಲಿ ಮಣ್ಣು ತುಂಬಿಸಿ ಸುಮಾರು 300 ಮೀ.ಜಾಗದಲ್ಲಿ ಆಕರ್ಷಕ ಹೂವಿನ ಗಿಡಗಳನ್ನು ಬೆಳೆಸಿ,ನೀರುಣಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.
ಮಳೆಗಾಲದಲ್ಲಿ ರಸ್ತೆ ವಿಭಾಜಕದ ಮಧ್ಯೆ ಹಾಕಿದ ಮಣ್ಣಿನಲ್ಲಿ ಹುಲ್ಲು ಕಸಕಡ್ಡಿ ಬೆಳೆದಿತ್ತು. ಇದನ್ನು ನೋಡಿದ ಜಾಫರ್ ಸಾಹೇಬರು ತನ್ನ ಬಿಡುವಿನ ವೇಳೆಯಲ್ಲಿ ಟೆಂಪೋ ಸ್ಟಾಂಡ್‌ನ ಎದುರುಗಡೆಯ ರಸ್ತೆ ವಿಭಾಜಕದಲ್ಲಿ ಮಣ್ಣು ತುಂಬಿಸಿ ಮಳೆಗಾಲದಲ್ಲಿ ಹೂವಿನ ಗಿಡ ನೆಟ್ಟಿದ್ದಾರೆ. ಅಲ್ಲಲ್ಲಿ ಬಿಸಾಡಿದ ಪ್ಲಾಸ್ಟಿಕ್ ಬಾಟಲ್‌ಗಳನ್ನು ಹೆಕ್ಕಿ ತಂದು ನೀರು ತುಂಬಿಸಿ ಮುಚ್ಚಳಕ್ಕೆ ತೂತು ಕೊರೆದು ಕೋಲಿನ ಸಹಾಯದಿಂದ ಗಿಡಗಳ ಬುಡದಲ್ಲಿ ಕಟ್ಟಿ ಹನಿ ನೀರುಹಾಯಿಸುತ್ತಿದ್ದಾರೆ. ಇದರಿಂದಾಗಿ ಬಿರು ಬಿಸಿಲಿನ ಪೇಟೆಯ ವಾತಾವರಣದಲ್ಲಿ ಡಾಂಬರು ರಸ್ತೆಯ ಬದಿಯಲ್ಲಿಯೂ ಗಿಡಗಳ ಬುಡದಲ್ಲಿ ತೇವಾಂಶ ಕಾಯ್ದುಕೊಂಡಿದ್ದು ಹಸುರಾಗಿವೆ.
ಶಿರ್ವ ಮಂಚಕಲ್ ಪೇಟೆಯ ಮಧ್ಯೆ ಹಾದು ಹೋಗುವ ಆತ್ರಾಡಿ-ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿಯಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಿಂದ ಪೆಟ್ರೋಲ್ ಪಂಪ್‌ನವರೆಗೆ ರಸ್ತೆ ವಿಭಾಜಕದೊಂದಿಗೆ ದ್ವಿಪಥ ರಸ್ತೆ ನಿರ್ಮಾಣಗೊಂಡು ವರುಷಗಳೇ ಕಳೆದಿವೆ.ಆದರೆ ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಜಕದಲ್ಲಿ ಹಳೆಯ ರಸ್ತೆಯ ಡಾಮರು,ಮಣ್ಣು ತುಂಬಿಸಿ ಕಾಮಗಾರಿಯನ್ನು ಪೂರ್ತಿಗೊಳಿಸದೆ ಅರ್ಧಂಬರ್ಧ ನಡೆಸಿದ್ದು , ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಸುಮಾರು ಒಂದು ಕಿ.ಮೀ. ಉದ್ದದ ರಸ್ತೆ ವಿಭಾಜಕದಲ್ಲಿ ಹಸಿರು ಕಂಗೊಳಿಸಿವುದು ಕೇವಲ 300 ಮೀ.ನಲ್ಲಿ ಮಾತ್ರ.ಮಳೆಗಾಲದಲ್ಲಿ ಶಿರ್ವ ಲಯನ್ಸ್ ಕ್ಲಬ್‌ನವರು ಸಮುದಾಯ ಆರೋಗ್ಯ ಕೇಂದ್ರದಿಂದ ಕಾಪು ಸರ್ಕಲ್‌ನವರೆಗೆ ಗಿಡ ನೆಟ್ಟಿದ್ದರು ಆದರೆ ನೀರಿನ ಪೋಷಣೆಯಿಲ್ಲದೆ ಗಿಡಗಳು ಸತ್ತಿವೆ.
ಜಾಫರ್ ಸಾಹೇಬರ ಪರಿಸರ ಕಾಳಜಿ ಇತರರಿಗೆ ಮಾದರಿಯಾಗಿದೆ. ಅವರಂತೆ ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು, ಸ್ಥಳಿಯಾಡಳಿತ, ರಸ್ತೆಬದಿಯ ಅಂಗಡಿಗಳ ಮಾಲೀಕರು ರಸ್ತೆ ವಿಭಾಜಕದಲ್ಲಿ ಹಸುರು ಗಿಡ ನೆಟ್ಟು ಬೆಳೆಸಿ ಪೋಷಿಸಿದಾಗ ಸ್ವಚ್ಛ ಸುಂದರ ಪರಿಸರ ವಾಗುವುದರಲ್ಲಿ ಸಂಶಯವಿಲ್ಲ.-
ಆಲ್ವಿನ್ ದಾಂತಿ ಪೆರ್ನಾಲ್,ಶಿಕ್ಷಕರು.,