ಬೆಂಗಳೂರು: ಅಲ್ಲಿ ಮೇಯರ್ ಗಂಗಾಂಬಿಕೆ ಮತ್ತು ಶಾಸಕಿ ಸೌಮ್ಯಾ ರೆಡ್ಡಿ ಕೆಲ ಹೊತ್ತು ಶಿಕ್ಷಕಿಯರಾಗಿದ್ದರು. ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಗಣಪ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಪ್ರಶ್ನೆ ಕೇಳಿದರು. ಬಾಂಧವ ಸಂಸ್ಥೆ, ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನ ಸಮೀಪ ಶನಿವಾರ ಹಮ್ಮಿಕೊಂಡಿದ್ದ “ಮಣ್ಣಿನ ಗಣೇಶ ಬಳಕೆ’ ಕುರಿತ ಜಾಗೃತಿ ರ್ಯಾಲಿಯಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಜತೆ ಮೇಯರ್ ಹಾಗೂ ಶಾಸಕಿ ಭಾಗವಹಿಸಿದ್ದರು.
ಈ ವೇಳೆ ಮೇಯರ್ ಗಂಗಾಂಬಿಕೆ ಮತ್ತು ಶಾಸಕಿ ಸೌಮ್ಯಾ ರೆಡ್ಡಿ, ಪಿಒಪಿ ಗಣಪತಿ ಬಳಕೆಯಿಂದ ನೀರಿನ ಮೂಲಗಳು ಹೇಗೆ ಮಲಿನವಾಗಲಿವೆ, ಬಣ್ಣದ ಗಣಪತಿ ಬಳಕೆ ಪರಿಸರದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಿದರು. ವಿದ್ಯಾರ್ಥಿಗಳು ಚುಟುಕಾಗಿ ಉತ್ತರಿಸಿದರು.
ಮಣ್ಣಿನ ಮೂರ್ತಿ ಬಳಸಿ: ಮೇಯರ್ ಗಂಗಾಂಬಿಕೆ ಮಾತನಾಡಿ, ಪಿಒಪಿ ಗಣಪನ ಮೂರ್ತಿ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಬಳಸುವ ಮೂಲಕ ನಗರದ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಸಹಕರಿಸಬೇಕು. ಬಾಂಧವ ಸಂಸ್ಥೆ ಕಳೆದ ಐದು ವರ್ಷಗಳಿಂದ ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ಗಣಪತಿ ಮೂರ್ತಿ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದೆ. ಪಾಲಿಕೆ ಎಲ್ಲಾ ಸದಸ್ಯರು ಇಂತಹ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.
ಪಿಒಪಿಯಿಂದ ಜಲಚರಗಳ ಸಾವು: ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಪಿಒಪಿ ಗಣಪನ ಮೂರ್ತಿಯನ್ನು ನೀರಿಗೆ ಬಿಡುವುದರಿಂದ ದಕ್ಕೆ ಬಳಸಿದ ರಾಸಾಯನಿಕ ಬಣ್ಣಗಳು ನೀರಿನ ಮೂಲಗಳಲ್ಲಿ ಬೆರೆತು ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಪಿಒಪಿ ಮೂರ್ತಿಗಳು ನೀರಲ್ಲಿ ಕರಗುವುದಿಲ್ಲ. ಹೀಗಾಗಿ ಮಣ್ಣಿನ ಗಣಪ ಬಳಸುವಂತೆ ಮನವಿ ಮಾಡಿದರು. ಬಾಂಧವ ಸಂಸ್ಥೆಯಿಂದ ಈ ಬಾರಿ ಸಾರ್ವಜನಿಕರಿಗೆ 5 ಸಾವಿರ ಮಣ್ಣಿನ ಗಣಪತಿ ಮೂರ್ತಿಗಳನ್ನು ಉಚಿತವಾಗಿ ನೀಡುವುದಾಗಿ ಪಾಲಿಕೆ ಸದಸ್ಯ ಎನ್.ನಾಗರಾಜ್ ಹೇಳಿದರು.
ಮಕ್ಕಳಿಂದ ಜಾಗೃತಿ ಜಾಥಾ: ಭೈರಸಂದ್ರ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಸರ್ವೋದಯ ಶಾಲೆಯ ಮಕ್ಕಳು ಸೇರಿದಂತೆ ಹಲವು ಶಾಲೆಗಳ ವಿದ್ಯಾರ್ಥಿಗಳು ಬಿತ್ತಿಪತ್ರ ಹಿಡಿದು ಪರಿಸರ ಗಣಪತಿ ಬಳಕೆ ಕುರಿತ ಜಾಗೃತಿ ಜಾಥದಲ್ಲಿ ಭಾಗವಹಿಸಿದ್ದರು. ಜಯನಗರದ 4ನೇ ಹಂತದ ಕೆಲವು ರಸ್ತೆಗಳಲ್ಲಿ ವಿದ್ಯಾರ್ಥಿಗಳು ಮಣ್ಣಿನ ಗಣೇಶ ಮೂರ್ತಿ ಹಿಡಿದು ಜನರಲ್ಲಿ ಅರಿವು ಮೂಡಿಸಿದರು.